ಪ್ರಸ್ತುತ ಭಾರತ ಹಿರಿಯರ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು 2024ರ ಟಿ20 ವಿಶ್ವಕಪ್ ಪಂದ್ಯಾವಳಿ ನಂತರ, ಅಂದರೆ ಜೂನ್‌ನಲ್ಲಿ ಕೊನೆಗೊಳ್ಳುವುದರೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲೇ ಹೊಸ ಮುಖ್ಯ ಕೋಚ್‌ಗಾಗಿ ಹುಡುಕಾಟವನ್ನು ಪ್ರಾರಂಭಿಸಲಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಮಾಹಿತಿಯನ್ನು ಬಹಿರಂಗಪಡಿಸುವಾಗ, ರಾಹುಲ್ ದ್ರಾವಿಡ್ ಸಹ ಈ ಪಾತ್ರಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ವಿದೇಶಿ ಕೋಚ್ ನೇಮಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ ಎಂದು ಹೇಳಿದರು.

ಹೊಸ ಕೋಚ್‌ನೊಂದಿಗಿನ ಸಮಾಲೋಚನೆಯ ನಂತರ ಕೋಚಿಂಗ್ ಸಿಬ್ಬಂದಿಯ ಇತರ ಸದಸ್ಯರಾದ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್‌ಗಳನ್ನು ನೇಮಿಸಲಾಗುತ್ತದೆ ಎಂದು ತಿಳಿಸಿದರು.
ಗಮನಾರ್ಹವಾಗಿ, ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಒಪ್ಪಂದವನ್ನು ಕಳೆದ ನವೆಂಬರ್ 2023ರಲ್ಲಿ ಮುಂಬರುವ 2024ರ ಟಿ20 ವಿಶ್ವಕಪ್‌ನವರೆಗೆ ವಿಸ್ತರಿಸಲಾಯಿತು. ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ ಪ್ರಾರಂಭಗಾಲಿದೆ.

"ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಅಧಿಕಾರಾವಧಿಯು ಜೂನ್‌ವರೆಗೆ ಮಾತ್ರ. ಹೀಗಾಗಿ ಅವರು ಅರ್ಜಿ ಸಲ್ಲಿಸಲು ಬಯಸಿದರೆ, ಅದನ್ನು ಮಾಡಲು ಮುಕ್ತರಾಗಿದ್ದಾರೆ. ಹೊಸ ಕೋಚ್ ಭಾರತೀಯ ಅಥವಾ ವಿದೇಶಿ ಎಂದು ನಾವು ನಿರ್ಧರಿಸಲು ಸಾಧ್ಯವಿಲ್ಲ. ಇದು ಸಿಎಸಿಗೆ ಬಿಟ್ಟದ್ದು ಮತ್ತು ನಾವು ಜಾಗತಿಕ ಸಂಸ್ಥೆಯಾಗಿದ್ದೇವೆ," ಎಂದು ಜಯ್ ಶಾ ಹೇಳಿಕೆಯನ್ನು ಕ್ರಿಕ್‌ಬಜ್ ಉಲ್ಲೇಖಿಸಿದೆ.
ಭಾರತ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್‌ನನ್ನು ಮೂರು ವರ್ಷಗಳ ಒಪ್ಪಂದದಲ್ಲಿ ನೇಮಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದರು. ಇದು ಕೋಚ್ ಅಭ್ಯರ್ಥಿಗೆ ದೀರ್ಘಾವಧಿಯ ಬದ್ಧತೆಯನ್ನು ಸೂಚಿಸುತ್ತದೆ.
ಈ ನಿರ್ಧಾರವು ಭಾರತೀಯ ತಂಡದ ನಾಯಕತ್ವದಲ್ಲಿ ಸ್ಥಿರತೆ ಮತ್ತು ನಿರಂತರತೆಯು ಬಿಸಿಸಿಐನ ಬಯಕೆಯನ್ನು ಒತ್ತಿ ಹೇಳುತ್ತದೆ. ರಾಹುಲ್ ದ್ರಾವಿಡ್ ಅವರ ಆರಂಭಿಕ ಒಪ್ಪಂದವು 2023ರ ಏಕದಿನ ವಿಶ್ವಕಪ್ ಅಂತ್ಯದ ನಂತರ ಮುಕ್ತಾಯಗೊಂಡಿತ್ತು. ನಂತರ ಅದನ್ನು ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಮುಂಬರುವ 2024ರ ಟಿ20 ವಿಶ್ವಕಪ್‌ವರೆಗೆ ವಿಸ್ತರಣೆ ಮಾಡಲಾಯಿತು.
ಗಮನಾರ್ಹವಾಗಿ, ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿದ್ದಾಗ, ಭಾರತ ತಂಡವು ಟೆಸ್ಟ್‌ನಲ್ಲಿ ಪ್ರಸ್ತುತ 2ನೇ ಸ್ಥಾನ, ಏಕದಿನ ಮತ್ತು ಟಿ20 ಶ್ರೇಯಾಂಕಗಳಲ್ಲಿ ಅಗ್ರಸ್ಥಾನಕ್ಕೆ ಏರಿತ್ತು.
ಆದರೆ, ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ಯಾವುದೇ ಐಸಿಸಿ ಟ್ರೋಫಿಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. 2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು 2023ರ ಏಕದಿನ ವಿಶ್ವಕಪ್ ಎರಡರಲ್ಲೂ ರನ್ನರ್-ಅಪ್ ಆಗಿದೆ.
ಏಕದಿನ ವಿಶ್ವಕಪ್‌ನಲ್ಲಿ ಭಾರತದ ಅಭಿಯಾನವು ಸತತ ಗೆಲುವಿನೊಂದಿಗೆ ಪ್ರಭಾವಶಾಲಿಯಾಗಿ ಆರಂಭವಾಗಿತ್ತು. ಆಡಿದ ಎಲ್ಲಾ ಒಂಬತ್ತು ಲೀಗ್ ಪಂದ್ಯಗಳನ್ನು ಗೆದ್ದರು ಮತ್ತು ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೊದಲು ಸೆಮಿಫೈನಲ್ ಪಂದ್ಯವನ್ನು ಗೆದ್ದಿದ್ದರು.