
ಕ್ರಿಕೆಟ್ ಮೇಲಿನ ಅಭಿಮಾನ ಅಥವಾ ಕ್ರೇಜ್ ಆಗಲಿ ಹಾಗೂ ಓರ್ವ ಆಟಗಾರನ ಮೇಲಿನ ಅಭಿಮಾನ ಅಥವಾ ವೈಷಮ್ಯವಾಗಲಿ ಮಿತಿಯಲ್ಲಿರಬೇಕೇ ಹೊರತು ಅತಿರೇಕಕ್ಕೆ ಹೋಗಬಾರದು. ಆಟವೆಂದರೆ ಅಲ್ಲಿ ಸೋಲು ಮತ್ತು ಗೆಲುವು ಎರಡೂ ಇರುತ್ತವೆ. ಟೀಮ್ ಇಂಡಿಯಾ ಈ ಹಿಂದೆ ಹಲವಾರು ಪ್ರತಿಷ್ಠಿತ ಟ್ರೋಫಿಗಳನ್ನು ಗೆದ್ದು ದೇಶಕ್ಕೆ ಕೀರ್ತಿಯನ್ನು ತಂದಿದೆ ಮತ್ತು ಇನ್ನೂ ಕೆಲ ಟೂರ್ನಿಗಳಲ್ಲಿ ಸೋಲನ್ನು ಅನುಭವಿಸುವುದರ ಮೂಲಕ ನಿರಾಸೆಯನ್ನು ಮೂಡಿಸಿದೆ. ಹೀಗಿರುವಾಗ ಗೆದ್ದ ಭಾರತಕ್ಕೆ ಶುಭಾಶಯಗಳನ್ನು ತಿಳಿಸುತ್ತಿದ್ದ ಅಭಿಮಾನಿಗಳು ಸೋತ ತಂಡದ ಬೆನ್ನಿಗೆ ನಿಲ್ಲಬೇಕಾಗಿದೆ ಎಂದು ಭಾರತದ ಹಲವಾರು ಮಾಜಿ ಕ್ರಿಕೆಟಿಗರು ಈಗಾಗಲೇ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಹೌದು, ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೇಳಿಕೊಳ್ಳುವಂತಹ ಉತ್ತಮ ಆರಂಭವನ್ನೇನೂ ಪಡೆದುಕೊಂಡಿಲ್ಲ. ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯದಲ್ಲಿಯೇ ಬದ್ಧ ವೈರಿಯಾದ ಪಾಕಿಸ್ತಾನದ ವಿರುದ್ಧ ಸೋತಿರುವ ಟೀಮ್ ಇಂಡಿಯಾ ಸಾಕಷ್ಟು ದೊಡ್ಡ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು. ಇದಾದ ಬಳಿಕ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಟೂರ್ನಿಯಲ್ಲಿ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿ ಅನುಮಾನವನ್ನು ಹುಟ್ಟು ಹಾಕಿದ ಟೀಮ್ ಇಂಡಿಯಾ ವಿರುದ್ಧ ಇದೀಗ ಸಾಕಷ್ಟು ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗುವುದು ಮಾತ್ರವಲ್ಲದೇ, ತಂಡದ ಆಟಗಾರರ ವೈಯಕ್ತಿಕ ವಿಚಾರಗಳು ಮತ್ತು ಕುಟುಂಬದವರ ವಿರುದ್ಧ ಕೂಡ ಕೆಟ್ಟ ರೀತಿಯ ಟೀಕೆಗಳು ಮತ್ತು ಬೆದರಿಕೆಗಳು ಎದುರಾಗಿವೆ.
ಇತ್ತೀಚೆಗಷ್ಟೇ ನಡೆದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಅನುಭವಿಸಿತು. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಸೋಲನ್ನು ಅನುಭವಿಸಿದ ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ತಲುಪುವಲ್ಲಿ ಹಿನ್ನಡೆಯನ್ನು ಅನುಭವಿಸಿದೆ. ಹೀಗೆ ಟೂರ್ನಿಯಲ್ಲಿ ಇದುವರೆಗೂ ಯಾವುದೇ ಗೆಲುವನ್ನು ಸಾಧಿಸದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಟೀಕೆಗಳು ಅತಿರೇಕಕ್ಕೆ ತಲುಪಿವೆ. ಕೇವಲ ವಿರಾಟ್ ಕೊಹ್ಲಿ ಮಾತ್ರವಲ್ಲದೇ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಯ 10 ತಿಂಗಳ ಮಗುವಾದ ವಮಿಕಾ ವಿರುದ್ಧ ಕೂಡ ಬೆದರಿಕೆಗಳು ಬಂದಿವೆ.
ಹೌದು, ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾದ ಹೀನಾಯ ಸೋಲಿನ ನಂತರ ಕಿಡಿಗೇಡಿಯೊಬ್ಬ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಯ 10 ತಿಂಗಳ ಪುತ್ರಿ ವಮಿಕಾ ವಿರುದ್ಧ ಅತ್ಯಾಚಾರದ ಬೆದರಿಕೆಯನ್ನು ಹಾಕಿದ್ದಾನೆ. ಹೀಗೆ ಅತಿ ಕೆಟ್ಟ ರೀತಿಯ ಬೆದರಿಕೆ ಬಂದ ಕೂಡಲೇ ಎಚ್ಚೆತ್ತ ಡೆಲ್ಲಿ ಕಮಿಷನ್ ಫಾರ್ ವುಮೆನ್ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್‌ಗೆ ದೂರನ್ನು ಸಲ್ಲಿಸಿದ್ದಾರೆ. ಹೀಗೆ ದೂರು ನೀಡಿ ಬರೆಯಲಾಗಿರುವ ಪತ್ರದಲ್ಲಿ ಈ ಪ್ರಕರಣದ ಕುರಿತು ಕಿಡಿಗೇಡಿಗಳ ವಿರುದ್ಧ ತಾವು ತೆಗೆದುಕೊಳ್ಳುವ ಪ್ರತಿಯೊಂದು ಕ್ರಮದ ಬಗ್ಗೆ ಕೂಡ ಮಾಹಿತಿಯನ್ನು ಹಂಚಿಕೊಳ್ಳಬೇಕೆಂದು ಡೆಲ್ಲಿ ಕಮಿಷನ್ ಫಾರ್ ವುಮೆನ್ ಡೆಲ್ಲಿ ಪೊಲೀಸರಲ್ಲಿ ಮನವಿ ಮಾಡಿಕೊಂಡಿದೆ.
ಹೀಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಯ ಮಗಳ ಮೇಲಿನ ಅತ್ಯಾಚಾರ ಬೆದರಿಕೆ ಪ್ರಕರಣ ಗಂಭೀರ ಹಂತವನ್ನು ತಲುಪಿದ್ದು ಆರೋಪಿಗಾಗಿ ಹುಡುಕಾಟ ಶುರುವಾಗಿದೆ. ಹೀಗಿರುವಾಗ ಇಂದು ( ನವೆಂಬರ್ 2 ) ಮಾಜಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಪ್ರಸ್ತುತ ಲೋಕಸಭಾ ಸದಸ್ಯರಾಗಿರುವ ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ವಿರಾಟ್ ಕೊಹ್ಲಿಗೆ ಟ್ವೀಟ್ ಒಂದನ್ನು ಮಾಡಿದ್ದು ಈ ವಿಷಯದ ಕುರಿತಾಗಿ ಹೆಚ್ಚಾಗಿ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರೆ.
ಹೌದು, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಯ ಪುಟ್ಟ ಕಂದಮ್ಮನ ವಿರುದ್ಧ ಅತ್ಯಾಚಾರ ಬೆದರಿಕೆ ಹಾಕಿರುವವರು ವೈಷಮ್ಯದಿಂದ ಕೂಡಿದ ವ್ಯಕ್ತಿಗಳಾಗಿದ್ದಾರೆ, ಅಂಥವರಿಗೆ ಯಾರೂ ಸಹ ಪ್ರೀತಿಯನ್ನು ತೋರಿಸದ ಕಾರಣ ಈ ರೀತಿಯ ವರ್ತನೆಗಳನ್ನು ಮಾಡುತ್ತಾರೆ. ಅಂಥ ಕಿಡಿಗೇಡಿಗಳಿಗೆ ತಲೆಕೆಡಿಸಿಕೊಳ್ಳದೆ ಮನ್ನಿಸಿ ಮತ್ತು ತಂಡವನ್ನು ರಕ್ಷಿಸಿ ಎಂದು ರಾಹುಲ್ ಗಾಂಧಿ ವಿರಾಟ್ ಕೊಹ್ಲಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.