ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಈ ವೇಳೆ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೆಚ್ಚೆದೆಯ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇವರು ಇಂಗ್ಲೆಂಡ್ ಸರಣಿಯಲ್ಲಿ ಪಕ್ಕಾ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ರೀತಿ ಬ್ಯಾಟ್ ಮಾಡಿ ತಂಡಕ್ಕೆ ಆಧಾರವಾಗಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ರಾಹುಲ್ ಅಜೇಯ 87 ರನ್ ಸಿಡಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇನಿಂಗ್ಸ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಆರಂಭಿಕ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ತಂಡ ಖಾತೆ ತೆರೆಯುವ ಮುನ್ನವೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಭಾರತದ ಪರ ಕೆಎಲ್ ರಾಹುಲ್ ಹಾಗೂ ನಾಯಕ ಶುಭಮನ್ ಗಿಲ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಟೀಮ್ ಇಂಡಿಯಾವನ್ನು ಅಪಾಯದಿಂದ ಪಾರು ಮಾಡುವ ಜವಾಬ್ದಾರಿಯನ್ನು ಹೊಂತ್ತುಕೊಂಡಿತು.

ಕೆಎಲ್ ರಾಹುಲ್ ಅವರು ಅರ್ಧಶತಕದ ಬಲದಿಂದ ಹಲವು ದಾಖಲೆಗಳನ್ನು ಬರೆದರು. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ಗಳನ್ನು ಪುರ್ಣಗೊಳಿಸಿದರು. ಈ ಸಾಧನೆ ಮಾಡಲು ರಾಹುಲ್‌ಗೆ 14 ರನ್ ಅವಶ್ಯಕತೆ ಇತ್ತು. ಈ ಇನಿಂಗ್ಸ್‌ನಲ್ಲಿ ರಾಹುಲ್ ಇದನ್ನು ಮಾಡಿದರು. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 9 ಸಾವಿರ ರನ್ ಕಲೆ ಹಾಕಿದ 16ನೇ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು. ಇವರಿಗೂ ಮೊದಲು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ, ಸೌರವ್ ಗಂಗೂಲಿ, ಎಂಎಸ್ ಧೋನಿ, ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಅಜರುದ್ದೀನ್, ಸುನಿಲ್ ಗವಾಸ್ಕರ್, ಯುವರಾಜ್ ಸಿಂಗ್, ವಿವಿಎಸ್ ಲಕ್ಷ್ಮಣ್, ಶಿಖರ್ ಧವನ್, ದಿಲೀಪ್ ವೆಂಗ್‌ಸರ್ಕರ್, ಗೌತಮ್ ಗಂಭೀರ್ ಮತ್ತು ಕಪಿಲ್ ದೇವ್ ಈ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್‌ನಲ್ಲಿ ಭಾರತೀಯ ಆರಂಭಿಕರಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ರನ್ ಬಾರಿಸಿದ ಎರಡನೇ ಆರಂಭಿಕ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಇವರಿಗಿಂತಲೂ ಮೊದಲು ಸುನಿಲ್ ಗವಾಸ್ಕರ್ 1979ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 5ಕ್ಕೂ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಪ್ರಸಕ್ತ ಸರಣಿಯಲ್ಲಿ ಕೆಎಲ್ ರಾಹುಲ್ 4ನೇ ಬಾರಿ 50ಕ್ಕೂ ಹೆಚ್ಚು ರನ್ ಸಿಡಿಸಿದ ಹಿರಿಮೆ ತಮ್ಮದಾಗಿಸಿಕೊಂಡರು.

ಕೆಎಲ್ ರಾಹುಲ್ ಈ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಆಡಿದ 4 ಪಂದ್ಯಗಳಲ್ಲಿ 51.94ರ ಸರಾಸರಿಯಲ್ಲಿ ಕಲೆ ಹಾಕುತ್ತಿದ್ದು ಸದ್ಯ 508 ರನ್‌ಗಳನ್ನು ಕಲೆ ಹಾಕಿದ್ದಾರೆ. ಈ ಮೂಲಕ ಟೆಸ್ಟ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ರಾಹುಲ್ 500 ಪ್ಲಸ್ ರನ್ ದಾಟಿದರು.