Asia Cup 2023: ಪಂದ್ಯಕ್ಕೆ ಮಳೆ ಅಡ್ಡಿ; ನೇಪಾಳ ವಿರುದ್ಧ 2ನೇ ಇನ್ನಿಂಗ್ಸ್ ಆಡದೆ ಭಾರತ ಸೂಪರ್ 4 ತಲುಪಲು ಸಾಧ್ಯವೇ?
ಸೋಮವಾರ, ಸೆಪ್ಟೆಂಬರ್ 4ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ನೇಪಾಳ ತಂಡಗಳ ನಡುವೆ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ 5ನೇ ಪಂದ್ಯಕ್ಕೆ ಮಳೆ ಪದೇ ಪದೇ ಅಡ್ಡಿಪಡಿಸುತ್ತಿದೆ.
ಪಂದ್ಯದ ಮಧ್ಯೆ ಧಾರಾಕಾರ ಮಳೆ ಸುರಿದ ಕಾರಣ ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮೈದಾನಕ್ಕೆ ಕವರ್‌ಗಳನ್ನು ಹೊದಿಸಲಾಗಿದೆ. ವರುಣ ಅವಕಾಶ ಮಾಡಿಕೊಟ್ಟರೆ ಕೆಲವೇ ಕ್ಷಣಗಳಲ್ಲಿ ಪಂದ್ಯ ಪುನರಾರಂಭವಾಗಲಿದೆ.

ಮಳೆ ಬಂದು ಆಟ ನಿಂತಾಗ ನೇಪಾಳ ತಂಡ 37.5 ಓವರ್‌ಗಳಲ್ಲಿ 6 ವಿಕೆಟ್‌ಗೆ 178 ರನ್ ಗಳಿಸಿದೆ. ಸೋಂಪಾಲ್ ಕಾಮಿ 11 ರನ್ ಮತ್ತು ದೀಪೇಂದ್ರ ಸಿಂಗ್ ಐರೆ 27 ರನ್ ಗಳಿಸಿ ಕ್ರೀಸ್‌ನಲ್ಲಿ ಅಜೇಯರಾಗಿ ಉಳಿದಿದ್ದಾರೆ.
ಇದಕ್ಕೂ ಮೊದಲು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ನೇಪಾಳ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭಾರತವು ತಮ್ಮ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿಗೆ ಅವಕಾಶ ನೀಡಿದೆ.
ಆರಂಭದಲ್ಲಿ ಭಾರತೀಯ ಫೀಲ್ಡರ್‌ಗಳು ಕ್ಯಾಚ್ ಬಿಟ್ಟಿದ್ದರಿಂದ ನೇಪಾಳ ತಂಡವು ಉತ್ತಮ ಆರಂಭ ಪಡೆಯಿತು. ಕುಶಾಲ್ ಭುರ್ಟೆಲ್ ಮತ್ತು ಆಸಿಫ್ ಶೇಖ್ ಮೂರು ಜೀವದಾನ ಪಡೆದು ಕ್ರೀಸ್‌ನಲ್ಲಿ ಉಳಿದು ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 65 ರನ್ ಜೊತೆಯಾಟ ನಿರ್ಮಿಸಿದರು.

ಕುಶಾಲ್ ಭುರ್ಟೆಲ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ ಬಿರುಸಿನ 38 ರನ್ ಗಳಿಸಿದರೆ, ಆಸಿಫ್ ಶೇಖ್ 97 ಎಸೆತಗಳಲ್ಲಿ 8 ಬೌಂಡರಿ ಸಮೇತ 58 ರನ್ ಬಾರಿಸಿದರು. ಬಳಿಕ ಬಂದ ಬ್ಯಾಟರ್‌ಗಳು ಭಾರತೀಯ ಬೌಲಿಂಗ್ ಪಡೆಯನ್ನು ಎದುರಿಸುವಲ್ಲಿ ವಿಫಲರಾದರು.
ನಂತರ ಬಂದ ಭೀಮ್ ಶಾರ್ಕಿ 7 ರನ್, ರೋಹಿತ್ ಪೌಡೆಲ್ 5 ರನ್, ಕುಶಾಲ್ ಮಲ್ಲ 2 ರನ್, ಗುಲ್ಶಾನ್ ಜಾ 23 ರನ್ ಗಳಿಸಿದರು.
ಭಾರತದ ಪರ ರವೀಂದ್ರ ಜಡೇಜಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಉಳಿದಂತೆ ಶಾರ್ದೂಲ್ ಠಾಕೂರ್ 1 ವಿಕೆಟ್ ಕಬಳಿಸಿದರು.
ಇನ್ನು ಎರಡೂ ತಂಡಗಳ ಸಮೀಕರಣ ಸರಳವಾಗಿದ್ದು, ಸೋಮವಾರದ ಪಂದ್ಯವನ್ನು ಗೆದ್ದು ಸೂಪರ್ 4ಕ್ಕೆ ಅರ್ಹತೆ ಪಡೆಯಲು ಎದುರು ನೋಡುತ್ತಿವೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದುಗೊಂಡರೆ, ಉಭಯ ತಂಡಗಳು ತಲಾ 1 ಅಂಕ ಗಳಿಸುತ್ತಾರೆ ಮತ್ತು ಭಾರತವು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ.
ಭಾರತ ತಂಡ 2 ಪಂದ್ಯಗಳಿಂದ 2 ಅಂಕಗಳೊಂದಿಗೆ ಲೀಗ್ ಹಂತ ಮುಗಿಸಲಿದೆ ಮತ್ತು ನೇಪಾಳ ತಂಡ 2 ಪಂದ್ಯಗಳಿಂದ ಕೇವಲ 1 ಅಂಕವನ್ನು ಹೊಂದಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications