Rajasthan royals sale: ಐಪಿಎಲ್ 2026 ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಈ ನಡುವೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊಟ್ಟ ಮೊದಲ ಆವೃತ್ತಿ (2008)ಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಜಸ್ಥಾನ್ ರಾಯಲ್ಸ್ ತಂಡವು ಈಗ ಹೊಸ ಮಾಲೀಕರ ಪಾಲಾಗಿದೆ. ಹೊಸ ಮಾಲೀಕರು ತಂಡದ ಸಂಪೂರ್ಣ ಜವಾಬ್ದಾರಿಯನ್ನು ಈ ಬಾರಿಯ ಸೀಸನ್ ಮುಕ್ತಾಯಗೊಂಡ ನಂತರ ಅಧಿಕೃತವಾಗಿ ವಹಿಸಿಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಪ್ರಸ್ತುತ ಇರುವ ಮ್ಯಾನೇಜ್‌ಮೆಂಟ್ ತಂಡವನ್ನು ಮುನ್ನಡೆಸಲಿದೆ ಎಂದು ತಿಳಿದುಬಂದಿದೆ.
ಈ ಮಾರಾಟದ ಒಪ್ಪಂದವು ಐಪಿಎಲ್ ಇತಿಹಾಸದಲ್ಲೇ ಒಂದು ದೊಡ್ಡ ವಹಿವಾಟು ಎಂದು ಪರಿಗಣಿಸಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಬರೋಬ್ಬರಿ 1.63 ಬಿಲಿಯನ್ ಡಾಲರ್ (ಸುಮಾರು ₹15,286 ಕೋಟಿ) ಮೊತ್ತಕ್ಕೆ ಮಾರಾಟವಾಗುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಒಂದು ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾದ ಮೊದಲ ಐಪಿಎಲ್ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಅಮೆರಿಕನ್ ಮೂಲದ ಖ್ಯಾತ ಉದ್ಯಮಿ ಕಲ್ ಸೋಮಾನಿ ಹಾಗೂ ಫ್ಲಿಪ್‌ಕಾರ್ಟ್ ಮಾಲೀಕ ವಾಲ್‌ಮಾರ್ಟ್ ಸಂಸ್ಥಾಪಕ ರಾಬ್ ವಾಲ್ಟನ್ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯನ್ನು ಖರೀದಿ ಮಾಡಿದ್ದಾರೆ. ಸೋಮಾನಿ ಅವರು 2021 ರಲ್ಲೇ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಲ್ಪಪ್ರಮಾಣದಲ್ಲಿ ಹೂಡಿಕೆದಾರರಾಗಿ ಸೇರ್ಪಡೆಗೊಂಡಿದ್ದರು. ಅಂದಿನಿಂದ ಅವರು ಫ್ರಾಂಚೈಸಿಯ ಮಾಲೀಕತ್ವದ ರಚನೆಯಲ್ಲಿ ಸಕ್ರಿಯ ಭಾಗವಾಗಿದ್ದರು. ಈಗ ಅವರು ತಂಡದ ಮೇಲೆ ಹೆಚ್ಚಿನ ಹಿಡಿತ ಸಾಧಿಸಲು ಮುಂದಾಗಿದ್ದಾರೆ.
ಇವರು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಯಾಗಿದ್ದು, ಕ್ರೀಡೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವಲ್ಲಿ ಆಸಕ್ತಿ ಹೊಂದಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡವನ್ನು ಬರೋಬ್ಬರಿ $1.63 ಬಿಲಿಯನ್ (₹15,286 ಕೋಟಿ) ಮೊತ್ತಕ್ಕೆ ಕೊಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಕಲ್ ಸೋಮಾನಿ ಅವರ ನೇತೃತ್ವದ ಹೂಡಿಕೆದಾರರ ಗುಂಪು ಪ್ರಮುಖ ಪಾತ್ರ ವಹಿಸಿದೆ ಎಂದು ವರದಿಯಾಗಿದೆ. ಈ ಬೃಹತ್ ಹೂಡಿಕೆಯೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಈಗ ಜಾಗತಿಕ ಮಟ್ಟದಲ್ಲಿ ಅತ್ಯಂತ ದುಬಾರಿ ಕ್ರೀಡಾ ತಂಡಗಳ ಸಾಲಿಗೆ ಸೇರ್ಪಡೆಯಾಗಿದೆ.
"ಈ ಹೂಡಿಕೆಯೊಂದಿಗೆ ನಾವು ದೊಡ್ಡ ಮಟ್ಟದ ಬೆಳೆವಣಿಗೆಯನ್ನು ಕಾಣುತ್ತಿದ್ದೇವೆ ಮತ್ತು ಐಪಿಎಲ್‌ನ ಭವಿಷ್ಯದ ಬಗ್ಗೆ ನಮಗೆ ತುಂಬಾನೇ ಉತ್ಸಾಹವಿದೆ," ಎಂದು ಕಲ್ ಸೋಮಾನಿ ಅವರು ಹೇಳಿದ್ದಾರೆ. ಅಂದು ಸಣ್ಣ ಪ್ರಮಾಣದ ಹೂಡಿಕೆದಾರರಾಗಿ ತಂಡಕ್ಕೆ ಕಾಲಿಟ್ಟಿದ್ದ ಅವರು, ಇಂದು ಇಡೀ ಫ್ರಾಂಚೈಸಿಯನ್ನೇ ತಮ್ಮದಾಗಿಸಿಕೊಳ್ಳುವ ಮೂಲಕ ಮಾಲೀಕತ್ವದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಕಲ್ ಸೋಮಾನಿ ಅವರು ಕೇವಲ ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲದೆ, ತಂತ್ರಜ್ಞಾನದ ವಿವಿಧ ಭಾಗಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಶಿಕ್ಷಣ ತಂತ್ರಜ್ಞಾನ, ದತ್ತಾಂಶ ಗೌಪ್ಯತೆ (Data Privacy), ಕೃತಕ ಬುದ್ಧಿಮತ್ತೆ ಆಡಳಿತ (AI Governance), ಕ್ರೀಡಾ ತಂತ್ರಜ್ಞಾನ ಭಾಗಗಳಲ್ಲಿ ಹೆಸರು ಮಾಡಿದ್ದಾರೆ.
* ಇಂಟ್ರಾ ಎಡ್ಜ್ (IntraEdge)
* ಟ್ರುಯೊ (Truyo)
* ಟ್ರುಯೊ.ಎಐ (Truyo.AI)
* ಅಕಾಡೆಮಿಯನ್ (Academian)
ಡೇಟಾ ಅನಾಲಿಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಸೋಮಾನಿ ಅವರಿಗಿರುವ ಅಪಾರ ಅನುಭವವು, ಮುಂದಿನ ದಿನಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರ ಆಯ್ಕೆ ಮತ್ತು ತರಬೇತಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
* ಗಾಲ್ಫ್ ಕ್ಷೇತ್ರದಲ್ಲೂ ಆಸಕ್ತಿ: ಸೋಮಾನಿ ಅವರು ಮೋಟಾರ್ ಸಿಟಿ ಗಾಲ್ಫ್ ಕ್ಲಬ್ (Motor City Golf Club)ನ ಸಹ-ಮಾಲೀಕರಾಗಿದ್ದಾರೆ.
* ಜಾಗತಿಕ ಕ್ರೀಡಾ ಹೂಡಿಕೆ: ಟೈಗರ್ ವುಡ್ಸ್ ಮತ್ತು ರೋರಿ ಮೆಕಿಲ್ರಾಯ್ ಅವರಂತಹ ದಿಗ್ಗಜರು ಸ್ಥಾಪಿಸಿದ TMRW ಸ್ಪೋರ್ಟ್ಸ್ (TMRW Sports) ಮತ್ತು ತಂತ್ರಜ್ಞಾನ ಆಧಾರಿತ TGL ಗಾಲ್ಫ್ ಲೀಗ್ ಆರಂಭದಲ್ಲೇ ಹೂಡಿಕೆ ಮಾಡಿದವರಲ್ಲಿ ಸೋಮಾನಿ ಒಬ್ಬರು.
* ಇವರು ಕೇವಲ ಲಾಭಕ್ಕಾಗಿ ಕ್ರೀಡೆಗೆ ಬಂದ ಸಾಂಪ್ರದಾಯಿಕ ಉದ್ಯಮಿಯಲ್ಲ. ಬದಲಾಗಿ, ಇವರು ಮೂಲತಃ ಒಬ್ಬ ತಂತ್ರಜ್ಞಾನ ಉದ್ಯಮಿ. ತಂತ್ರಜ್ಞಾನದ ಜ್ಞಾನವನ್ನೇ ಅಡಿಪಾಯವಾಗಿಸಿಕೊಂಡು ಹಂತಹಂತವಾಗಿ ಕ್ರೀಡಾ ಜಗತ್ತಿನಲ್ಲಿ ಬೆಳೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವುದು ಅವರ ಈ ಸುದೀರ್ಘ ಕ್ರೀಡಾ ಪ್ರಯಾಣದ ಅತಿದೊಡ್ಡ ಮತ್ತು ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ.
ಈ ಬಿಲಿಯನ್ ಡಾಲರ್ ಒಪ್ಪಂದದಲ್ಲಿ ಕಲ್ ಸೋಮಾನಿ ಒಬ್ಬರೇ ಹೂಡಿಕೆ ಮಾಡುತ್ತಿಲ್ಲ. ಅವರ ಹಿಂದೆ ಇರುವ ಹೂಡಿಕೆದಾರರ ಒಕ್ಕೂಟದಲ್ಲಿ ಅಮೆರಿಕದ ಅತ್ಯಂತ ಪ್ರಭಾವಿ ಉದ್ಯಮಿಗಳ ಹೆಸರುಗಳಿವೆ. ವಿಶ್ವದ ಅತಿದೊಡ್ಡ ರೀಟೇಲ್ ಕಂಪನಿ 'ವಾಲ್‌ಮಾರ್ಟ್' ಸಮೂಹದ ರಾಬ್ ವಾಲ್ಟನ್ ಈ ಒಕ್ಕೂಟದ ಪ್ರಮುಖ ಬೆಂಬಲಿಗರಲ್ಲಿ ಒಬ್ಬರು.
* ಎನ್‌ಎಫ್‌ಎಲ್ ಮಾಲೀಕರ ಪ್ರವೇಶ: ಅಮೆರಿಕದ ಅತ್ಯಂತ ಜನಪ್ರಿಯ ಲೀಗ್ ಎನ್‌ಎಫ್‌ಎಲ್‌ನ 'ಡೆಟ್ರಾಯಿಟ್ ಲಯನ್ಸ್' ತಂಡದ ಬಹುಪಾಲು ಮಾಲೀಕತ್ವ ಹೊಂದಿರುವ ಹ್ಯಾಂಪ್ ಕುಟುಂಬ (Hamp family) ಕೂಡ ಈ ಹೂಡಿಕೆದಾರರ ಗುಂಪಿನ ಭಾಗವಾಗಿದೆ.
* ಶೀಲಾ ಫೋರ್ಡ್ ಹ್ಯಾಂಪ್: ರಾಜಸ್ಥಾನ್ ರಾಯಲ್ಸ್ ಖರೀದಿಸಿರುವ ಈ ಪ್ರಭಾವಿ ಉದ್ಯಮಿಗಳ ತಂಡದಲ್ಲಿ ಫೋರ್ಡ್ (Ford) ಕುಟುಂಬದ ಸದಸ್ಯರಾದ ಶೀಲಾ ಫೋರ್ಡ್ ಹ್ಯಾಂಪ್ (Sheila Ford Hamp) ಕೂಡ ಇದ್ದಾರೆ. ಶೀಲಾ ಅವರು ಜಗತ್ಪ್ರಸಿದ್ಧ ಫೋರ್ಡ್ ಮೋಟಾರ್ ಕಂಪನಿಯ ಸಹ-ಮಾಲೀಕತ್ವ ಹೊಂದಿರುವ ಫೋರ್ಡ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರು ಈಗಾಗಲೇ ಅಮೆರಿಕದ ಜನಪ್ರಿಯ ಫುಟ್‌ಬಾಲ್ ಲೀಗ್ ತಂಡವಾದ 'ಡೆಟ್ರಾಯಿಟ್ ಲಯನ್ಸ್'ನ ಪ್ರಮುಖ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಫೋರ್ಡ್ ಮತ್ತು ವಾಲ್‌ಮಾರ್ಟ್‌ನಂತಹ ಜಾಗತಿಕ ಬ್ರ್ಯಾಂಡ್‌ಗಳ ಮಾಲೀಕರು ಈಗ ಐಪಿಎಲ್ ಅಖಾಡಕ್ಕೆ ಇಳಿದಿರುವುದು ಆರ್‌ಆರ್ ತಂಡದ ಮೌಲ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಹೆಚ್ಚಿಸಿದೆ.
ಈ ಫ್ರಾಂಚೈಸಿಯನ್ನು ತನ್ನದಾಗಿಸಿಕೊಳ್ಳಲು ಭಾರತದ ಪ್ರತಿಷ್ಠಿತ ಕಂಪನಿಗಳ ನಡುವೆ ದೊಡ್ಡ ಪೈಪೋಟಿ ನಡೆದಿತ್ತು. ಭಾರತದ ಪ್ರಸಿದ್ಧ ಉದ್ಯಮ ಸಂಸ್ಥೆ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಖರೀದಿಗೆ ತೀವ್ರ ಪೈಪೋಟಿ ನಡೆಸಿದ್ದವು. ಈ ಇಬ್ಬರು ಭಾರತೀಯ ಉದ್ಯಮ ದೈತ್ಯರನ್ನು ಹಿಂದಿಕ್ಕಿ ಅಮೆರಿಕದ ಈ ಬೃಹತ್ ಹೂಡಿಕೆದಾರರ ತಂಡವು ರಾಜಸ್ಥಾನ್ ರಾಯಲ್ಸ್ ಅನ್ನು ಖರೀದಿಸಿದೆ.
ಐಪಿಎಲ್ 2026 ಮುಕ್ತಾಯದ ನಂತರ ಅಧಿಕೃತ ಹಸ್ತಾಂತರ ಪ್ರಕ್ರಿಯೆ ನಡೆಯುವವರೆಗೆ, ತಂಡವು ತನ್ನ ಅಸ್ತಿತ್ವದಲ್ಲಿರುವ ಮನೋಜ್ ಬದಲೆ ಅವರ ಮಾಲೀಕತ್ವದ ಅಡಿಯಲ್ಲೇ ಇರಲಿದೆ. ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್‌ನ ಮುಖ್ಯಸ್ಥರಾಗಿರುವ ಇವರು, 'ಎಮರ್ಜಿಂಗ್ ಮೀಡಿಯಾ ವೆಂಚರ್ಸ್' ಮೂಲಕ ಸುಮಾರು ಶೇಕಡ 65ರಷ್ಟು ಪಾಲನ್ನು ಹೊಂದಿರುವ ಪ್ರಧಾನ ಮಾಲೀಕರು ಮತ್ತು ತಂಡದ ಅಧ್ಯಕ್ಷರಾಗಿದ್ದಾರೆ.
* ರೆಡ್‌ಬರ್ಡ್ ಕ್ಯಾಪಿಟಲ್ ಪಾರ್ಟ್‌ನರ್ಸ್: ಅಮೆರಿಕ ಮೂಲದ ಈ ಪ್ರೈವೇಟ್ ಈಕ್ವಿಟಿ ಸಂಸ್ಥೆಯು 2021ರಲ್ಲಿ ತಂಡದ ಶೇಕಡ 15ರಷ್ಟು ಪಾಲನ್ನು ಪಡೆದುಕೊಂಡಿತ್ತು.
* ಲಚ್ಲಾನ್ ಮುರ್ಡೋಕ್: ಫಾಕ್ಸ್ ಕಾರ್ಪೊರೇಷನ್‌ನ ಸಿಇಒ ಆಗಿರುವ ಇವರು ಸರಿಸುಮಾರು ಶೇಕಡ 13ರಷ್ಟು ಸಣ್ಣ ಪ್ರಮಾಣದ ಪಾಲನ್ನು ಹೊಂದಿದ್ದಾರೆ.
ರಾಯಲ್ಸ್ ಮ್ಯಾನೇಜ್‌ಮೆಂಟ್ ಈ ಹಿಂದೆ 'ಕೊಲಂಬಿಯಾ ಪೆಸಿಫಿಕ್ ಕ್ಯಾಪಿಟಲ್ ಪಾರ್ಟ್‌ನರ್ಸ್' ನೀಡಿದ್ದ ₹16,000 ಕೋಟಿ ಪ್ರಸ್ತಾವನೆ ಸೇರಿದಂತೆ ಹಲವು ಆಫರ್‌ಗಳನ್ನು ತಿರಸ್ಕರಿಸಿತ್ತು. ಐಪಿಎಲ್‌ನ ಜಾಗತಿಕ ಬೆಳವಣಿಗೆಗೆ ತಕ್ಕಂತೆ ಉತ್ತಮ ಮೌಲ್ಯಕ್ಕಾಗಿ ಅವರು ಕಾಯುತ್ತಿದ್ದರು. ಮಾರ್ಚ್ 30 ರಂದು ಗುವಾಹಟಿಯಲ್ಲಿ ಸಿಎಸ್‌ಕೆ ವಿರುದ್ಧ ಕಣಕ್ಕಿಳಿಯಲಿರುವ ರಾಜಸ್ಥಾನ್ ರಾಯಲ್ಸ್ ತಂಡವು ಹಳೆಯ ಮಾಲೀಕತ್ವದ ಅಡಿಯಲ್ಲೇ ಆಡಲಿದೆ. ಟೂರ್ನಿ ಮುಗಿದ ನಂತರ ರಾಜಸ್ಥಾನ್ ರಾಯಲ್ಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.