ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯದಲ್ಲಿ ಮಧ್ಯ ಪ್ರದೇಶ ಹಾಗೂ ಮುಂಬೈ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಟೂರ್ನಿಯಲ್ಲಿ ಮನಮೋಹಕ ಪ್ರದರ್ಶನ ನೀಡುತ್ತಿವೆ. ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಮಧ್ಯ ಪ್ರದೇಶ ತಂಡವನ್ನು ಆರ್ ಸಿಬಿ ತಂಡದ ರಜತ್ ಪಟಿದಾರ್ ಹಾಗೂ ಮುಂಬೈ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ. ಹೈವೋಲ್ಟೇಜ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿದೆ.
ಉಪಾಂತ್ಯ ಪಂದ್ಯದಲ್ಲಿ ಎರಡೂ ತಂಡಗಳು ಅಮೋಘ ಪ್ರದರ್ಶನ ನೀಡಿವೆ. ಮಧ್ಯ ಪ್ರದೇಶ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ದೆಹಲಿ ತಂಡವನ್ನು ಮಣಿಸಿದರೆ, ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ 6 ವಿಕೆಟ್‌ಗಳಿಂದ ಬರೋಡಾ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ. ಎರಡೂ ತಂಡದಲ್ಲಿರುವ ಸ್ಟಾರ್ ಆಟಗಾರರು ಅಮೋಘ ಫಾರ್ಮ್‌ನಲ್ಲಿರುವುದು ತಂಡದ ಮನೋಬಲವನ್ನೇ ಹೆಚ್ಚಿಸಿದೆ. ಮಹತ್ವದ ಪಂದ್ಯದಲ್ಲಿ ಎರಡೂ ತಂಡಗಳು ಸ್ಟಾರ್ ಆಟಗಾರರು ಅಬ್ಬರಿಸಿರುವುದು ತಂಡಕ್ಕೆ ಆನೆ ಬಲ ತುಂಬಿದೆ.

ಇನ್ನೇನು ಇವರ ಕ್ರಿಕೆಟ್ ಕರಿಯರ್ ಮುಗಿದೇ ಬಿಟ್ಟಿತು ಎನ್ನುವಾಗಲೇ ಮತ್ತೆ ಅಜಿಂಕ್ಯ ರಹಾನೆ ಫಿನಿಕ್ಸ್ ಹಕ್ಕಿಯಂತೆ ಎದ್ದಿದ್ದಾರೆ. ಇವರು ಪ್ರಸಕ್ತ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ರಹಾನೆ ಆಡಿದ 8 ಪಂದ್ಯಗಳಲ್ಲಿ 169ರ ಸರಾಸರಿಯಲ್ಲಿ 432 ರನ್ ಸಿಡಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಇನ್ನು ನಾಯಕ ಶ್ರೇಯಸ್ ಅಯ್ಯರ್ ಸಹ ಮನಮೋಹಕವಾಗಿ ಬ್ಯಾಟಿಂಗ್ ನಡೆಸುತ್ತಿದ್ದು, 329 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ, ಒಂದು ಅರ್ಧಶತಕ ಸೇರಿವೆ. ಉಳಿದಂತೆ ಶಿವಂ ದುಬೆ, ಪೃಥ್ವಿ ಶಾ ಸಹ ತಂಡಕ್ಕೆ ನೆರವಾಗಬಲ್ಲರು.
ಮುಂಬೈ ತಂಡದ ಬೌಲಿಂಗ್ ಲೈನ್ ಅಪ್ ಸಹ ಬಲಿಷ್ಠವಾಗಿದೆ. ಈ ತಂಡದ ಪರ ಮೋಹಿತ್ ಅವಸ್ಥೆ (13 ವಿಕೆಟ್), ಅನುಭವಿ ಶಾರ್ದೂಲ್ ಠಾಕೂರ್ (13 ವಿಕೆಟ್) ಎದುರಾಳಿಗಳನ್ನು ಕಾಡಬಲ್ಲರು. ಉಳಿದಂತೆ ತನುಷ್ ಕೋಟ್ಯಾನ್, ಸೂರ್ಯಾಂಶ್ ಶೆಡ್ಗೆ ಭರವಸೆ ಮೂಡಿಸಿದ್ದಾರೆ.

ಮಧ್ಯ ಪ್ರದೇಶ ತಂಡಕ್ಕೆ ಸ್ಟಾರ್ ಆಟಗಾರರೇ ಬಲ ನೀಡಿದ್ದಾರೆ. ವೆಂಕಟೇಶ್ ಅಯ್ಯರ್ (210 ರನ್), ಹರ್ಪ್ರಿತ್ ಸಿಂಗ್ (282), ಹರ್ಷಾ ಗ್ವಾಲಿ (128 ರನ್), ಸುಭ್ರಾಂಶು ಸೇನಾಪತಿ (231 ರನ್), ಅರ್ಪಿತ್ ಗೌಡ್ (182 ರನ್) ರನ್ ಕಲೆ ಹಾಕಿ ತಂಡಕ್ಕೆ ಆಧಾರವಾಗ ಬಲ್ಲರು. ಇನ್ನು ತಂಡವನ್ನು ಮುನ್ನಡೆಸುವ ರಜತ್ ಪಟಿದಾರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 347 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಅರ್ಧಶತಕಗಳು ಸೇರಿವೆ. ಬೌಲಿಂಗ್ ವಿಭಾಗದಲ್ಲಿ ಕುಮಾರ್ ಕಾರ್ತಿಕೇಯ್ ಹಾಗೂ ಆವೇಶ್ ಖಾನ್ ಎದುರಾಳಿಗಳಿಗೆ ಕಾಟ ನೀಡಬಲ್ಲರು.