ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಆಗಿದ್ದಾರೆ. ಏಳು ತಿಂಗಳು ಬಳಿಕ ಈ ಇಬ್ಬರೂ ಸ್ಟಾರ್ ಆಟಗಾರರು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಅಷ್ಟಾಗ್ಯೂ ಆಸೀಸ್ ವಿರುದ್ಧದ ಸರಣಿ ಈ ಸ್ಟಾರ್ ಆಟಗಾರರಿಗೆ ಕೊನೆಯ ಸರಣಿ ಎಂಬ ಊಹಾಪೋಹಗಳು ಇದ್ದವು. ಈಗ ಈ ಬಗ್ಗೆ ಬಿಸಿಸಿಐ ಉಪಧ್ಯಕ್ಷ ರಾಜೀವ್ ಶುಕ್ಲಾ ಮಾತನಾಡಿದ್ದಾರೆ.
ನಿವೃತ್ತಿ ನಿರ್ಧಾರವು ಆಟಗಾರರ ವೈಯಕ್ತಿಕ ನಿರ್ಧಾರವಾಗಿದ್ದು, ಬೇರೆ ಯಾರೂ ಅದರ ಬಗ್ಗೆ ಪ್ರತಿಕ್ರಿಯಿಸಬಾರದು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0ಯಿಂದ ಗೆದ್ದ ಬಳಿಕ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಶುಕ್ಲಾ ಅವರು ಈ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ಆಸೀಸ್ ಪ್ರವಾಸದಲ್ಲಿ ವಿರಾಟ್, ರೋಹಿತ್ ತಂಡದಲ್ಲಿ ಸ್ಥಾನ ಪಡೆದಿರುವುದು ನಮಗೆ ದೊಡ್ಡ ಪ್ರಯೋಜನವಾಗಲಿದೆ. ಇವರಿಬ್ಬರ ಅನುಭವ ತಂಡಕ್ಕೆ ನೆರವಾಗಲಿದೆ. ಅಲ್ಲದೆ ಈ ಪ್ರವಾಸದಲ್ಲಿ ತಂಡ ಗೆಲ್ಲುವ ಎಲ್ಲ ಭರವಸೆ ಇದೆ ಎಂದು ತಿಳಿಸಿದ್ದಾರೆ. ಇನ್ನು ಇದು ಅವರ ಕೊನೆಯ ಸರಣಿ ಆಗಬಹುದು ಎಂಬ ಊಹಾಪೋಹಗಳ ಪ್ರಶ್ನೆಗೆ ಉತ್ತರಿಸಿದ ರಾಜೀವ್ ಶುಕ್ಲಾ, ನಿವೃತ್ತಿ ನಿರ್ಧಾರವನ್ನು ಆಟಗಾರರು ತೆಗೆದುಕೊಳ್ಳುತಾರೆ. ವದಂತಿಗಳು ತಪ್ಪು ಎಂದು ತಿಳಿಸಿದ್ದಾರೆ.
ಬಿಸಿಸಿಐ ಭವಿಷ್ಯದತ್ತ ಹೆಚ್ಚಿನ ದೃಷ್ಟಿ ನೆಟ್ಟಿದೆ. ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅವರಂತಹ ಯುವ ಆಟಗಾರರಿಗೆ ಅವಕಾಶಗಳನ್ನು ನೀಡುತ್ತಿದೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಸೀಸ್ ಪ್ರವಾಸದಲ್ಲಿ ಶುಭಮನ್ ಗಿಲ್ ನಾಯಕತ್ವದಲ್ಲಿ ಆಡಲಿದ್ದಾರೆ.

ರೋಹಿತ್ ಶರ್ಮಾ ಭಾರತದ ಪರ 273 ಏಕದಿನ ಪಂದ್ಯಗಳನ್ನು ಆಡಿದ್ದು, 11,168 ರನ್ ಗಳಿಸಿದ್ದಾರೆ. ಈ ವೇಳೆ 32 ಶತಕ ಹಾಗೂ 58 ಅರ್ಧಶತಕಗಳು ಸೇರಿವೆ. ಪ್ರಸಕ್ತ ವರ್ಷ ಹಿಟ್ ಮ್ಯಾನ್ ಆಡಿದ 8 ಏಕದಿನ ಪಂದ್ಯಗಳಲ್ಲಿ 1 ಶತಕ ಹಾಗೂ 1 ಅರ್ಧಶತಕ ನೆರವಿನಿಂದ 302 ಗಳಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ 302 ಏಕದಿನ ಪಂದ್ಯಗಳಲ್ಲಿ 14,181 ರನ್ ಬಾರಿಸಿದ್ದಾರೆ. ಈ ವೇಳೆ 51 ಶತಕಗಳು ಮತ್ತು 74 ಅರ್ಧಶತಕಗಳು ಸೇರಿವೆ. ಈ ವರ್ಷ ಇವರು 7 ಏಕದಿನ ಪಂದ್ಯಗಳನ್ನು ಆಡಿದ್ದು, 1 ಶತಕ ಹಾಗೂ 2 ಅರ್ಧಶತ ಒಳಗೊಂಡಂತೆ 275 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಈ ಪಂದ್ಯಗಳಲ್ಲಿ ಅಬ್ಬರಿಸಲು ಈ ಇಬ್ಬರೂ ಸ್ಟಾರ್ ಆಟಗಾರರು ಈಗಾಗಲೇ ತಯಾರಿ ನಡೆಸಿದ್ದಾರೆ. ಈ ವಿಡಿಯೋಗಳು ಸಹ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿವೆ.