ರಣಜಿಯಲ್ಲಿ ಮುಂದುವರಿದ ಸರ್ಫರಾಜ್ ನಾಗಾಲೋಟ: 153 ರನ್‌ಗಳಿಸಿ ಹೊಸ ಇತಿಹಾಸ ಬರೆದ ಮುಂಬೈ ಕ್ರಿಕೆಟಿಗ

ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ ರಣಜಿ ಟೂರ್ನಿಯಲ್ಲಿ ತಮ್ಮ ಅಬ್ಬರವನ್ನು ಮುಂದುವರಿಸಿದ್ದಾರೆ. ಐಪಿಎಲ್ ಆರಂಭವಾಗುವ ಮುನ್ನ ಲೀಗ್ ಹಂತದಲ್ಲಿ ಪ್ರದರ್ಶಿಸಿದ್ದ ಅಮೋಘ ಪ್ರದರ್ಶನವನ್ನು ನಾಕೌಟ್ ಹಂತದಲ್ಲಿಯೂ ಮುಂದುವರಿಸುವಲ್ಲಿ ಸರ್ಫರಾಜ್ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಆಲೂರಿನಲ್ಲಿ ಉತ್ತರಾಖಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಸರ್ಫರಾಜ್ ಖಾನ್ ಭರ್ಜರಿ 153 ರನ್‌ಗಳನ್ನು ಸಿಡಿಸಿದ್ದು ರಣಜಿ ಕ್ರಿಕೆಟ್‌ನಲ್ಲಿ ತಮ್ಮ 7ನೇ ಶತಕವನ್ನು ಸಿಡಿಸಿದ್ದಾರೆ.
2019-20ರ ಆವೃತ್ತಯಿಂದ ಸರ್ಫರಾಜ್ ಖಾನ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಆ ಆವೃತ್ತಿಯಲ್ಲಿ ಆಡಿದ 6 ಪಂದ್ಯಗಳಲ್ಲಿ ಸರ್ಫರಾಜ್ 928 ರನ್‌ಗಳಿಸಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರು. ಇದರಲ್ಲಿ ಒಂದು ತ್ರಿ ಶತಕ ಕೂಡ ಸೇರಿಕೊಂಡಿತ್ತು. ಆ ಟೂರ್ನಿಯಲ್ಲಿ ಸರ್ಫರಾಜ್ 154.66ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದರು.
ಇನ್ನು 2020-21ನೇ ಆವೃತ್ತಿಯ ರಣಜಿ ಟೂರ್ನಿ ಕೊರೊನಾವೈರಸ್ ಕಾರಣದಿಂದಾಗಿ ಆಯೋಜನೆಯಾಗಿರಲಿಲ್ಲ. ಇದೀಗ 2021-22 ರ ಆವೃತ್ತಿಯಲ್ಲಿಯೂ ಸರ್ಫರಾಜ್ ಖಾನ್ ತಮ್ಮ ಹಿಂದಿನ ಪ್ರದರ್ಶನವನ್ನು ಮುಂದಿವರಿಸಿದ್ದಾರೆ. ಪ್ರತಿ ಪಂದ್ಯಗಳಲ್ಲಿಯೂ ರನ್ ಮಳೆ ಹರಿಸುತ್ತಿರುವ ಸರ್ಫರಾಜ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.

ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ
ಈ ಬಾರಿಯ ಆವೃತ್ತಿಯ ಮೊದಲ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ 275 ರನ್ ಸಿಡಿಸುವ ಮೂಲಕ ಅದ್ಭುತ ಆರಂಭವನ್ನು ಪಡೆದುಕೊಂಡರು. ನಂತರ ಗೋವಾ ವಿರುದ್ಧದ ಪಂದ್ಯದಲ್ಲಿ 63 ಹಾಗೂ 48 ರನ್‌ಗಳಿಸಿದ್ದ ಸರ್ಫರಾಜ್ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಒಡಿಶಾ ವಿರುದ್ಧ 165 ರನ್‌ಗಳನ್ನು ಸಿಡಿಸಿದರು. ಈ ಮೂಲಕ ಮುಂಬೈ ನಾಕೌಟ್ ಹಂತಕ್ಕೆ ಕಾಲಿಟ್ಟಿತು.

ಮತ್ತೆ ಮುಂಬೈಗೆ ಸರ್ಫರಾಜ್ ಆಸರೆ
ಇನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಾಖಂಡ್ ವಿರುದ್ಧವೂ ಸರ್ಫರಾಜ್ ಖಾನ್ ಮೊದಲ ದಿನದಿಂದಲೇ ಭರ್ಜರಿ ಪ್ರದರ್ಶನ ನೀಡಲು ಆರಂಭಿಸಿದ್ದರು. ಎರಡನೇ ದಿನವೂ ಉತ್ತರಾಖಂಡ್ ಬೌಲರ್‌ಗಳಿಗೆ ಕಾಡಿದ ಸರ್ಫರಾಜ್ ಯುವ ಆಟಗಾರ ಸುವೇದ್ ಪಾರ್ಕರ್ ಜೊತೆ ಸೇರಿ 4ನೇ ವಿಕೆಟ್‌ಗೆ 267 ರನ್‌ಗಳ ಜೊತೆಯಾಟ ನೀಡಿದರು. 205 ಎಸೆತಗಳನ್ನು ಎದುರಿಸಿದ ಸರ್ಫರಾಜ್ 153 ರನ್‌ಗಳಿಸಿ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್ ಹಾಗೂ 14 ಬೌಂಡರಿ ಸಿಡಿಸಿದ್ದಾರೆ.

ಹೊಸ ಇತಿಹಾಸ ಸೃಷ್ಟಿಸಿದ ಸರ್ಫರಾಜ್
ಇನ್ನು ಈ ಭಾರಿಯ ರಣಜಿಯಲ್ಲಿ ಆಡಿದ 4 ಪಂದ್ಯಗಳಲ್ಲಿ ಸರ್ಫರಾಜ್ 704 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಸೇರಿದೆ. ಅದ್ಭುತ ಸಂಗತಿಯೆಂದರೆ ಸರ್ಫರಾಜ್ ಅಹ್ಮದ್ ಸಿಡಿಸಿದ ಮೊದಲ 7 ಅರ್ಧ ಶತಕಗಳಲ್ಲಿ ಎಲ್ಲವೂ ಕೂಡ 150ಕ್ಕಿಂತ ಹೆಚ್ಚಿನ ಮೊತ್ತಗಳಾಗಿದೆ. ಈ ಸಾಧನೆಯನ್ನು ಯಾವ ಕ್ರಿಕೆಟಿಗನೂ ಈವರೆಗೆ ಮಾಡಿಲ್ಲ. ಈ ಮೂಲಕ ಸರ್ಫರಾಜ್ ಹೊಸ ಇತಿಹಾಸವನ್ನು ಬರೆದಿದ್ದಾರೆ.

ಬ್ರಾಡ್ಮನ್ ನಂತರದ ಸ್ಥಾನದಲ್ಲಿ ಸರ್ಫರಾಜ್
ಇನ್ನು ಸರ್ಫರಾಜ್ ಅವರ ಪ್ರಥಮ ದರ್ಜೆ ಕ್ರಿಕೆಟ್‌ನ ಸರಾಸರಿ 80 ದಾಟಿದೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 2000ಕ್ಕೂ ಅಧಿಕ ರನ್‌ಗಳಿಸಿದ ಆಟಗಾರರ ಪೈಕಿ ಅತಿ ಹೆಚ್ಚು ಸರಾಸರಿ ಹೊಂದಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ದಿಗ್ಗಜ ಆಟಗಾರ ಡಾನ್ ಬ್ರಾಡ್ಮನ್ ಇದ್ದಾರೆ. ಇನ್ನಿ ಇಂಥಾ ಅದ್ಭುತ ಪ್ರದರ್ಶನದ ಹೊರತಾಗಿಯೂ ಸರ್ಫರಾಜ್ ಖಾನ್ ರಾಷ್ಟ್ರೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಭಾರತ ಕ್ರಿಕೆಟ್ ತಂಡದಲ್ಲಿ ಪ್ರತಿಯೊಂದು ಸ್ಥಾನಕ್ಕೂ ಭಾರೀ ಪೈಪೋಟಿಯಿದ್ದು ಈ ರೀತಿಯ ಪ್ರದರ್ಶನ ಮುಂದುವರಿದರೆ ಮುಂದಿನ ದಿನಗಳಲ್ಲಿ ಸರ್ಫರಾಜ್ ಖಾನ್ ಭಾರತ ತಂಡದಲ್ಲಿ ಸ್ಥಾನ ಪಡೆಯುವುದರಲ್ಲಿ ಅನುಮಾನವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications