ಟೀಮ್ ಇಂಡಿಯಾದ ಸ್ಪಿನ್ ಬೌಲರ್ ರವೀಂದ್ರ ಜಡೇಜಾ ಅವರ ವೃತ್ತಿ ಬದುಕಿನ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಈ ಪ್ಲೇಯರ್‌ಗೆ ಆಸ್ಟ್ರೇಲಿಯಾ ಪ್ರವಾಸದಲ್ಲೂ ಎಲ್ಲ ಪಂದ್ಯಗಳನ್ನು ಆಡಲು ಅವಕಾಶ ನೀಡಲಿಲ್ಲ. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಇವರನ್ನು ಆಯ್ಕೆ ಮಾಡಬೇಕೋ, ಬೇಡವೋ ಎಂಬ ಗೊಂದಲಗಳು ಮೂಡುತಲ್ಲೇ ಇದ್ದವು. ಆಗಲೇ ರವೀಂದ್ರ ಜಡೇಜಾ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದಾರೆ.
ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್. ಆದರೆ ಕಳೆದ ವರ್ಷ ಇವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ತಂಡದಲ್ಲಿ ಇವರ ಸ್ಥಾನದ ಮೇಲೆ ಪ್ರಶ್ನೆಗಳು ಎದ್ದಿದ್ದವು. ಆದರೆ ಈ ಎಲ್ಲ ಪ್ರಶ್ನೆಗಳಿಗೆ ತಮ್ಮ ಧಾಟಿಯಲ್ಲೇ ಉತ್ತರ ನೀಡಿರುವ ಜಡೇಜಾ ಕಮಾಲ್ ಮಾಡಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆದ ರಣಜಿ ಟ್ರೋಫಿ "ಡಿ" ಗುಂಪಿನ ಪಂದ್ಯದಲ್ಲಿ ದೆಹಲಿ ತಂಡವನ್ನು ಕೇವಲ ಎರಡು ದಿನಗಳ ಆಟದಲ್ಲಿ ಕಟ್ಟಿ ಹಾಕಿದ ಸೌರಾಷ್ಟ್ರ ಅರ್ಹ ಗೆಲುವು ದಾಖಲಿಸಿತು.

ದೆಹಲಿ ವಿರುದ್ಧ ಸಾಧಿಸಿದ ಗೆಲುವಿನ ಸಹಾಯದಿಂದ ಸೌರಾಷ್ಟ್ರ ಆಡಿದ 6 ಪಂದ್ಯಗಳಲ್ಲಿ 2 ಜಯ, 2 ಸೋಲು, 2 ಡ್ರಾ ಸಾಧಿಸಿದ್ದು, 18 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಅಲ್ಲದೆ ನಾಕೌಟ್ ಪ್ರವೇಶಿಸುವ ಕನಸನ್ನು ಹಸಿರಾಗಿಸಿಕೊಂಡಿದೆ.
ದೆಹಲಿ ತಂಡವನ್ನು ಈ ಪಂದ್ಯದಲ್ಲಿ ಸ್ಟಾರ್ ಸ್ಪಿನ್ ಬೌಲರ್ ರವೀಂದ್ರ ಜಡೇಜಾ ಬಹುವಾಗಿ ಕಾಡಿದರು. ಇವರು ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಬೀಗಿದ್ದರು. ಅಲ್ಲದೆ ಪ್ರವಾಸಿ ತಂಡವನ್ನು 188 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಇನ್ನು ಸೌರಾಷ್ಟ್ರ ಪರ ಬ್ಯಾಟಿಂಗ್‌ನಲ್ಲೂ ಜಡೇಜಾ ತಮ್ಮ ಕ್ಲಾಸ್ ಪ್ರದರ್ಶಿಸಿದರು. ಎದುರಿಸದ 36 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 38 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ದೆಹಲಿ ತಂಡದ ಮುನ್ನಡೆಯ ಕನಸಿಗೆ ಆರಂಭದಲ್ಲೇ ಜಡ್ಡು ಕೊಳ್ಳೆ ಇಟ್ಟರು. ಇವರು ಇನಿಂಗ್ಸ್‌ನ ಎರಡನೇ ಓವರ್‌ನಿಂದಲೇ ಎದುರಾಳಿಗಳ ಮೇಲೆ ಪ್ರಭಾವ ಬೀರಲು ಆರಂಭಿಸಿದರು. ತಾವು ಎಸೆದ ಎರಡನೇ ಓವರ್‌ನಲ್ಲೇ ಸನತ್ ಸಾಂಗ್ವಾನ್ ಅವರ ಬಲಿ ಪಡೆದ ಜಡ್ಡು ಹಿಂತಿರುಗಿ ನೋಡಲೇ ಇಲ್ಲ.

ಜಡೇಜಾ ಅವರ ಫಿರ್ಕಿ ಎದುರಿಸುವಲ್ಲಿ ದೆಹಲಿ ತಂಡದ ಬ್ಯಾಟರ್‌ಗಳು ವಿಫಲರಾದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ನೆಲಕಚ್ಚಿ ನಿಂತು ಬ್ಯಾಟ್ ಮಾಡಲು ಬಿಡದ ಜಡೇಜಾ ಆರ್ಭಟಿಸಿದರು. ಇವರು 12.2 ಓವರ್‌ಗಳಲ್ಲಿ 38 ರನ್ ನೀಡಿ 7 ವಿಕೆಟ್ ಪಡೆದರು. ಈ ಮೂಲಕ ಜಡೇಜಾ ಈ ಪಂದ್ಯದಲ್ಲಿ ಒಟ್ಟು 12 ವಿಕೆಟ್ ಕಬಳಿಸಿ ಅಬ್ಬರಿಸಿದರು. ಅಲ್ಲದೆ ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಇರುವಾಗಲೇ ತಮ್ಮನ್ನು ಹಗರುವಾಗಿ ಪರಿಗಣಿಸದಿರಿ ಎಂದು ಎದುರಾಳಿಗಳಿಗೆ ಸಂದೇಶವನ್ನು ರವಾನಿಸಿದರು.