ರಣಜಿ ಟ್ರೋಫಿ: ನಿಶ್ಚಲ್ ಸಾಹಸ, ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

ಶಿವಮೊಗ್ಗ, ಡಿಸೆಂಬರ್ 25: ಶಿವಮೊಗ್ಗದ ನವುಲೆಯಲ್ಲಿನ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಮಂಗಳವಾರ (ಡಿಸೆಂಬರ್ 25) ಮುಕ್ತಾಯಗೊಂಡ ರಣಜಿ ಎಲೈಟ್ ಗ್ರೂಪ್ 'ಎ'ಯ 7ನೇ ಸುತ್ತಿನ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಕರ್ನಾಟಕ 176 ರನ್ ಭರ್ಜರಿ ಗೆಲುವು ದಾಖಲಿಸಿದೆ. ದೇಗಾ ನಿಶ್ಚಲ್ ಆಕರ್ಷಕ ಬ್ಯಾಟಿಂಗ್, ಕೃಷ್ಣಪ್ಪ ಗೌತಮ್ ಮತ್ತು ರೋನಿತ್ ಮೋರೆ ಮಾರಕ ಬೌಲಿಂಗ್‌ನಿಂದ ರಾಜ್ಯ ತಂಡ ಸುಲಭ ಗೆಲುವು ಪಡೆದಿದೆ.
ಟಾಸ್ ಗೆದ್ದ ರೈಲ್ವೇಸ್ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕಕ್ಕೆ ದೇಗಾ ನಿಶ್ಚಲ್ 52, ಕೃಷ್ಣಮೂರ್ತಿ ಸಿದ್ಧಾರ್ಥ್ 69 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದರು. ಕರ್ನಾಟಕ 91.4 ಓವರ್‌ನಲ್ಲಿ 214 ರನ್ ಕಲೆ ಹಾಕಿ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ರೈಲ್ವೇಸ್ ತಂಡ ಮನೀಷ್ ರಾವ್ ಅವರ ಅಜೇಯ 52 ರನ್ ನೆರವಿನೊಂದಿಗೆ ಮೊದಲ ಇನ್ನಿಂಗ್ಸ್ ನಲ್ಲಿ 60.2 ಓವರ್‌ಗೆ 143 ರನ್ ಗಳಿಸಿ 71 ರನ್ ಹಿನ್ನಡೆ ಅನುಭವಿಸಿತು.
ದ್ವಿತೀಯ ಇನ್ನಿಂಗ್ಸ್ ವೇಳೆ ಕರ್ನಾಟಕದ ನಿಶ್ಚಲ್ ಆಕರ್ಷಕ ಶತಕ (101) ಬಾರಿಸಿದರು. ಜೊತೆಗೆ ದೇವದತ್ ಪಡಿಕಲ್ 75 ರನ್ ಮತ್ತು ಕೃಷ್ಣಮೂರ್ತಿ ಅಜೇಯ 84 ರನ್ ಬೆಂಬಲ ನೀಡಿದ್ದರಿಂದ ತಂಡ 84 ಓವರ್‌ನಲ್ಲಿ 2 ವಿಕೆಟ್ ಕಳೆದು 290 ರನ್ ಸೇರಿಸಿ ಡಿಕ್ಲೇರ್ ಘೋಷಿಸುವ ಮೂಲಕ ಇನ್ನಿಂಗ್ಸ್ ಮುಗಿಸಿತ್ತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೈಲ್ವೇಸ್ ಬೆಂಬಲಕ್ಕೆ ಹೆಚ್ಚಿನ ಬ್ಯಾಟ್ಸ್ಮನ್‌ಗಳು ನಿಲ್ಲಲಿಲ್ಲ. ಸೌರಭ್ ವಾಕಾಸ್ಕರ್ 43, ನಿತಿನ್ ಭಿಲ್ಲೆ 39, ಪ್ರಥಮ್ ಸಿಂಗ್ 48, ನಾಯಕ ಅರಿಂದಾಮ್ ಘೋಷ್ ಅಜೇಯ 24 ರನ್ ನೆರವಿನೊಂದಿಗೆ ರೈಲ್ವೇಸ್ 86 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು ಶರಣಾಯಿತು.
ರೈಲ್ವೇಸ್ ಪ್ರಥಮ ಇನ್ನಿಂಗ್ಸ್ ವೇಳೆ ಕರ್ನಾಟಕದ ರೋನಿತ್ ಮೋರೆ ಬರೋಬ್ಬರಿ 5 ವಿಕೆಟ್ ಕೆಡವಿ ಪಾರಮ್ಯ ಮೆರೆದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೃಷ್ಣಪ್ಪ ಗೌತಮ್ 30 ರನ್ನಿಗೆ 6 ವಿಕೆಟ್ ಉರುಳಿಸಿ ರೈಲ್ವೇಸ್ ಎದುರಾಳಿಯನ್ನು ಕಾಡಿದರು. ಕರ್ನಾಟಕದ ದೇಗಾ ನಿಶ್ಚಲ್ ಪಂದ್ಯಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications