ರಣಜಿ ಟ್ರೋಫಿ: ತಮಿಳುನಾಡು ವಿರುದ್ಧ ರೋಚಕ ಕದನ ಗೆದ್ದ ಕರ್ನಾಟಕ!

ದಿಂಡಿಗಲ್, ಡಿಸೆಂಬರ್ 12: ಕೃಷ್ಣಪ್ಪ ಗೌತಮ್ ಅವರ ದಾಖಲೆಯ ಬೌಲಿಂಗ್ ಸಾಧನೆಯ ನೆರವಿನಿಂದ, ರಣಜಿ ಟ್ರೋಫಿ ಮೊದಲ ಸುತ್ತಿನ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ತಂಡ 26 ರನ್ ರೋಚಕ ಜಯ ಗಳಿಸಿದೆ. ಗೌತಮ್ 6+8 ವಿಕೆಟ್‌ಗಳೊಂದಿಗೆ ಕರ್ನಾಟಕದ ಗೆಲುವಿನ ಹೀರೋ ಆಗಿ ಮಿನುಗಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡ, ಮಯಾಂಕ್ ಅಗರ್ವಾಲ್ 43, ದೇವದತ್ ಪಡಿಕ್ಕಲ್ 78, ಪವನ್ ದೇಶಪಾಂಡೆ 65, ಕೃಷ್ಣಪ್ಪ ಗೌತಮ್ 51 ರನ್‌ನೊಂದಿಗೆ 110.4 ಓವರ್‌ನಲ್ಲಿ 336 ಮಾಡಿತು. ತಮಿಳುನಾಡಿನ ಕೃಷ್ಣಮೂರ್ತಿ ವಿಘ್ನೇಶ್ 2, ಆರ್ ಅಶ್ವಿನ್ 4, ಮಣಿಮಾರನ್ ಸಿದ್ಧಾರ್ಥ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.
ಮೊದಲ ಇನ್ನಿಂಗ್ಸ್‌ಗೆ ಇಳಿದ ತಮಿಳುನಾಡು, ಅಭಿನವ್ ಮುಕುಂದ್ 47, ಮುರಳಿ ವಿಜಯ್ 32, ದಿನೇಶ್ ಕಾರ್ತಿಕ್ 113 ಗಮನಾರ್ಹ ರನ್‌ನೊಂದಿಗೆ 109.3 ಓವರ್‌ಗೆ 307 ರನ್ ಪೇರಿಸಿತು. ಈ ವೇಳೆ ಕೆ ಗೌತಮ್ 6 (110 ರನ್), ರೋನಿತ್ ಮೋರೆ 2, ವಿ ಕೌಶಿಕ್ ಮತ್ತು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಅಂಥ ಬ್ಯಾಟಿಂಗ್ ತೋರಲಿಲ್ಲ. ಪಡಿಕ್ಕಲ್ 39, ದೇಶಪಾಂಡೆ 20, ಶರತ್ ಬಿಆರ್ 28, ಡೇವಿಡ್ ಮಾಥಿಯಾಸ್ 22, ಕೆ ಗೌತಮ್ 22 ರನ್ ಕೊಡುಗೆಯೇ ಹೆಚ್ಚೆನಿಸಿತು. ರಾಜ್ಯ ತಂಡ 151 ರನ್‌ಗೆ ಇನ್ನಿಂಗ್ಸ್ ಮುಗಿಸಿತು. ಆರ್ ಅಶ್ವಿನ್ 4, ಕೆ ವಿಘ್ನೇಶ್‌ಗೆ 3 ವಿಕೆಟ್ ಲಭಿಸಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ತಮಿಳುನಾಡಿಗೆ 181 ಗುರಿ ನೀಡಲಾಗಿದ್ದರಿಂದ ತಮಿಳುನಾಡು ಗೆಲ್ಲುವ ಮುನ್ಸೂಚನೆ ನೀಡಿತ್ತು. ಆದರೆ ಕೆ ಗೌತಮ್ ಅವರ ಮಾರಕ ಬೌಲಿಂಗ್, ಎದುರಾಳಿಯ ಗೆಲುವಿನೋಟಕೆ ಬ್ರೇಕ್ ಒತ್ತಿತು. ಅಭಿನವ್ ಮುಕುಂದ್ 42, ಮುರುಗನ್ ಅಶ್ವಿನ್ ಅಜೇಯ 23, ಎಂ ಸಿದ್ಧಾರ್ಥ್ 20 ರನ್ ಗಳಿಸಿದ್ದೇ ಹೆಚ್ಚು. ತಮಿಳುನಾಡು 154 ರನ್‌ಗೆ ಶರಣಾಯಿತು. ಕೆ ಗೌತಮ್ 60 ರನ್‌ಗೆ ಬರೋಬ್ಬರಿ 8 ವಿಕೆಟ್ ಉರುಳಿಸಿ ಕರ್ನಾಟಕದ ಗೆಲುವಿಗೆ ಕಾರಣರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications