Ranji Trophy 2022-23: ಬಂಗಾಳವನ್ನು ಮಣಿಸಿ ರಣಜಿ ಟ್ರೋಫಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸೌರಾಷ್ಟ್ರ

ರಣಜಿ ಟ್ರೋಫಿ 2022-23ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬಂಗಾಳ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದ ಸೌರಾಷ್ಟ್ರ ಎರಡನೇ ಬಾರಿ ರಣಜಿ ಟ್ರೋಫಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಈಡನ್ ಗಾರ್ಡನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಅತ್ಯುತ್ತಮ ಪ್ರದರ್ಶನ ನೀಡಿತು. ನಾಯಕ ಜಯದೇವ್ ಉನಾದ್ಕತ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
ಟಾಸ್ ಗೆದ್ದ ಸೌರಾಷ್ಟ್ರ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಸೌರಾಷ್ಟ್ರ ಬೌಲಿಂಗ್ ದಾಳಿಗೆ ತತ್ತರಿಸಿದ ಬಂಗಾಳ ಮೊದಲ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್ ಆಗಿತ್ತು. ಶಹಬಾಜ್ ಅಹ್ಮದ್ 69 ರನ್ ಗಳಿಸಿದ್ದರೆ, ಅಭಿಷೇಖ್ ಪೊರೆಲ್ 50 ರನ್ ಗಳಿಸಿ ಔಟಾಗಿದ್ದರು.
ಮೊದಲನೇ ಇನ್ನಿಂಗ್ಸ್‌ನಲ್ಲಿ ಜಯದೇವ್ ಉನಾದ್ಕತ್ ಮತ್ತು ಚೇತನ್ ಸಕಾರಿಯ ತಲಾ 3 ವಿಕೆಟ್ ಪಡೆಯುವ ಮೂಲಕ ಬಂಗಾಳಕ್ಕೆ ಶಾಕ್ ನೀಡಿದರು. ಚಿರಾಗ್ ಜಾನಿ ಮತ್ತು ಧರ್ಮೇಂದ್ರ ಜಡೇಜಾ ತಲಾ 2 ವಿಕೆಟ್ ಪಡೆದಿದ್ದರು.
ನಂತರ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ 404 ರನ್‌ಗಳಿಗೆ ಆಲೌಟ್ ಆಗುವ ಮೂಲಕ 230 ರನ್‌ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿತ್ತು.

ಸೌರಾಷ್ಟ್ರ ಅತ್ಯುತ್ತಮ ಬ್ಯಾಟಿಂಗ್
ಮೊದಲ ಇನ್ನಿಂಗ್ಸ್‌ನಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಸೌರಾಷ್ಟ್ರ ಗೆಲುವನ್ನು ಬಹುತೇಕ ಖಚಿತಪಡಿಸಿಕೊಂಡಿತ್ತು. ಆರಂಭಿಕ ಆಟಗಾರ ಹಾರ್ವಿಕ್ ದೇಸಾಯಿ (50) ಅರ್ಧಶತಕ ಗಳಿಸಿ ಉತ್ತಮ ಆರಂಭ ನೀಡಿದ್ದರು.
ಶೆಲ್ಡನ್ ಜಾಕ್ಸನ್ 59 ರನ್ ಗಳಿಸಿದರೆ, ಅರ್ಪಿತ್ ವಸಾವಡ 81 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಚಿರಾಗ್ ಜಾನಿ 60, ಪ್ರೇರಕ್ ಮಂಕಡ್ 33 ರನ್ ಗಳಿಸಿ ಸೌರಾಷ್ಟ್ರ ತಂಡಕ್ಕೆ ದೊಡ್ಡ ಮುನ್ನಡೆಯನ್ನು ತಂದುಕೊಟ್ಟಿದ್ದರು.
ಮುಖೇಶ್ ಕುಮಾರ್ ಬಂಗಾಳ ಪರವಾಗಿ 4 ವಿಕೆಟ್ ಪಡೆದು ಮಿಂಚಿದ್ದರು. ಆಕಾಶ್ ದೀಪ್ ಮತ್ತು ಇಶಾನ್ ಪೊರೆಲ್ ತಲಾ 3 ವಿಕೆಟ್ ಪಡೆದಿದ್ದರು. ಸೌರಾಷ್ಟ್ರ ಅಂತಿಮವಾಗಿ 404 ರನ್‌ಗಳಿಗೆ ಔಟಾಗುವ ಮೂಲಕ 230 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಸಾಧಾರಣ ಮೊತ್ತಕ್ಕೆ ಕುಸಿದ ಬಂಗಾಳ
ದೊಡ್ಡ ಹಿನ್ನಡೆಯನ್ನು ಅನುಭವಿಸಿದ ಬಂಗಾಳ ಎರಡನೇ ಇನ್ನಿಂಗ್ಸ್‌ಗೂ ಮುನ್ನವೇ ಸೋಲೊಪ್ಪಿಕೊಂಡಂತೆ ಕಾಣಿಸಿತು. ಆರಂಭಿಕ ಆಟಗಾರ ಸುಮಂತ ಗುಪ್ತ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು.
ಅಭಿಮನ್ಯು ಈಶ್ವರನ್ 16, ಸುದಿಪ್ ಘರಾಮಿ 14 ರನ್ ಗಳಿಸಿ ಔಟಾಗುವ ಮೂಲಕ ಮತ್ತೆ ವಿಫಲರಾದರು. ಎ ಮಜುಂದಾರ್ ಮತ್ತು ನಾಯಕ ಮನೋಜ್ ತಿವಾರಿ 99 ರನ್‌ಗಳ ಜೊತೆಯಾಟ ಆಡುವ ಮೂಲಕ ಬಂಗಾಳ ತಂಡಕ್ಕೆ ಆಸರೆಯಾದರು. ಆದರೂ ಈ ಜೋಡಿ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.
ಮಜುಂದಾರ್ 61 ರನ್ ಗಳಿಸಿ ಔಟಾದರೆ, ಮನೋಜ್ ತಿವಾರಿ 68 ರನ್ ಗಳಿಸಿ ಔಟಾದರು. ಅಂತಿಮವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ 241 ರನ್‌ಗಳಿಗೆ ಆಲೌಟ್ ಆಗುವ ಮೂಲಕ 12 ರನ್‌ಗಳ ಗುರಿಯನ್ನು ನೀಡಿತು.
1 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಬೆನ್ನತ್ತಿದ ಸೌರಾಷ್ಟ್ರ 9 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ರಣಜಿ ಟ್ರೋಫಿ ಚಾಂಪಿಯನ್ ಆದರು.

ಉನಾದ್ಕತ್ ನಾಯಕನ ಆಟ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಜಯದೇವ್ ಉನಾದ್ಕತ್‌ರನ್ನು ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕಾಗಿ ಬಿಡುಗಡೆ ಮಾಡಿದ್ದರು.
ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ನಾಯಕತ್ವ ವಹಿಸಿಕೊಂಡ ಉನಾದ್ಕತ್ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಯಶಸ್ವಿಯಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆಯುವ ಮೂಲಕ ಬಂಗಾಳ ತಂಡಕ್ಕೆ ಮಾರಕವಾದರು. ಚೇತನ್ ಸಕಾರಿಯ 3 ವಿಕೆಟ್ ಪಡೆದು ಮಿಂಚಿದರು.
ಜಯದೇವ್ ಉನಾದ್ಕತ್ ಅಮೋಘ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರೆ, ಅರ್ಪಿತ್ ವಸಾವಡ 15 ಇನ್ನಿಂಗ್ಸ್‌ಗಳಲ್ಲಿ 907 ರನ್ ಗಳಿಸುವ ಮೂಲಕ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications