
ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ಕಡೆಗೂ ಆಯೋಜನೆ ಮಾಡಲು ಬಿಸಿಸಿಐ ನಿರ್ಧಾರ ಮಾಡಿದ್ದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಕೊರೊನಾವೈರಸ್ ಕಾರಣದಿಂದ ಈ ಬಾರಿ ಕೂಡ ರಣಜಿ ಟ್ರೋಫಿ ಟೂರ್ನಿಯನ್ನು ರದ್ದುಕೊಳಿಸುವ ನಿರ್ಧಾರಕ್ಕೆ ಬಂದಿದ್ದ ಬಳಿಕ ಈ ನಿರ್ಧಾರವನ್ನು ಬದಲಾಯಿಸಿದ್ದು ಎರಡು ಹಂತದಲ್ಲಿ ರಣಜಿ ಟ್ರೋಫಿಯನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ಐಪಿಎಲ್ ನಡೆಯುವ ಮುನ್ನ ಹಾಗೂ ಐಪಿಎಲ್‌ನ ಬಳಿಕ ಎರಡು ಹಂತದಲ್ಲಿ ಈ ಬಾರಿಯ ರಣಜಿ ಟ್ರೋಫಿ ಟೂರ್ನಿ ಆಯೋಜನೆಯಾಗಲಿದೆ. ಮೊದಲ ಹಂತದಲ್ಲಿ ಗ್ರೂಫ್ ಹಂತದ ಎಲ್ಲಾ ಪಂದ್ಯಗಳನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಎರಡನೇ ಹಂತದಲ್ಲಿ ನಾಕೌಟ್ ಹಂತದ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.
ಈ ಋತುವಿನಲ್ಲಿ ರಣಜಿ ಟ್ರೋಫಿಯನ್ನು ಎರಡು ಹಂತಗಳಲ್ಲಿ ನಡೆಸಲು ಮಂಡಳಿ ನಿರ್ಧರಿಸಿದೆ. ಮೊದಲ ಹಂತದಲ್ಲಿ ಎಲ್ಲಾ ಲೀಗ್ ಹಂತದ ಪಂದ್ಯಗಳನ್ನು ನಡೆಸಲು ನಾವು ನಿರ್ಧರಿಸಿದ್ದು ಜೂನ್‌ನಲ್ಲಿ ನಾಕೌಟ್ ಪಂದ್ಯಗಳು ನಡೆಯಲಿದೆ. ಕೊರೊನಾವೈರಸ್‌ನ ಅಪಾಯವನ್ನು ಕಡಿಮೆ ಗೊಳಿಸಲು ನಮ್ಮ ತಂಡ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು ಸ್ಪರ್ಧಾತ್ಮಕ ರೆಡ್‌ಬಾಲ್ ಕ್ರಿಕೆಟ್‌ಅನ್ನು ನಡೆಸಲು ನಾವು ಬದ್ಧವಾಗಿದ್ದೇವೆ" ಎಂದು ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದುವರಿದು ಜಯ್ ಶಾ ತಮ್ಮ ಪ್ರಕಟಣೆಯಲ್ಲಿ "ರಣಜಿ ಟ್ರೋಫಿ ನಮಗೆ ಅತ್ಯಂತ ಪ್ರತಿಷ್ಠಿತ ದೇಶೀಯ ಸ್ಪರ್ಧೆಯಾಗಿದೆ. ಇದು ಪ್ರತಿ ವರ್ಷ ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಪ್ರತಿಭಾವಂತ ಆಟಗಾರರನ್ನು ನೀಡುತ್ತದೆ. ಈ ಅತ್ಯುನ್ನತ ಟೂರ್ನಿಯ ಹಿತಾಸಕ್ತಿಯನ್ನು ಕಾಪಾಡಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ" ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾವೈರಸ್‌ನ ನಾಲ್ಕನೇ ಅಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನವರಿ 4 ರಂದು ಬಿಸಿಸಿಐ ರಣಜಿ ಟ್ರೋಫಿಯನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡು. ರಣಜಿ ಟ್ರೋಫಿ ಮಾತ್ರವಲ್ಲದೆ ಕರ್ನಲ್ ಸಿಕೆ ನಾಯುಡು ಟ್ರೋಫಿ ಕೂಡ ಈ ವರ್ಷದ ಜನವರಿಯಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾವೈರಸ್ ಕಾರಣದಿಂದಾಗಿ ಈ ಟೂರ್ನಿಯನ್ನು ಸಂಪೂರ್ಣವಾಗಿ ರದ್ದು ಮಾಡಲು ಬಿಸಿಸಿಐ ಮುಂದಾಗಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯ ಕ್ರಿಕೆಟ್ ಮಂಡಳಿಗಳು ಬಿಸಿಸಿಐಗೆ ಈ ವಿಚಾರವಾಗಿ ಪತ್ರವನ್ನು ಬರೆದು ರಣ ಟ್ರೋಫಿ ಟೂರ್ನಿಯನ್ನು ರದ್ದು ಪಡಿಸಲದಂತೆ ಮನವಿಯನ್ನು ಮಾಡಿಕೊಂಡಿದ್ದವು.
ಇನ್ನು ಕಳೆದ ಶುಕ್ರವಾರ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ಬಿಸಿಸಿಐ ರಣಜಿ ಟ್ರೋಫಿಯನ್ನು ಕಡೆಗಳಿಸುತ್ತಿದೆ ಎಂಬ ಕಾರಣಕ್ಕೆ ಟ್ವೀಟ್ ಮೂಲಕ ತಿವಿದಿದ್ದರು. ದೇಶದ ಕ್ರಿಕೆಟ್‌ನ ಬೆನ್ನೆಲುಬಾಗಿರುವ ರಣಜಿ ಟ್ರೋಫಿಯನ್ನು ಬಿಸಿಸಿಐ ನಿರ್ಲಕ್ಷಿಸಬಾರದು ಎಂದು ರವಿ ಶಾಸ್ತ್ರಿ ಹೇಳಿದ್ದರು. "ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್‌ನ ಬೆನ್ನೆಲುಬಾಗಿದೆ. ಅದನ್ನು ನೀವು ನಿರ್ಕ್ಷಿಸಿದ ಕ್ಷಣದಿಂದಲೇ ನಮ್ಮ ಕ್ರಿಕೆಟ್ ಬೆನ್ನೆಲುಬಿಲ್ಲದಂತಾಗುತ್ತದೆ" ಎಂದು ರವಿ ಶಾಸ್ತ್ರಿ ಖಡಕ್ಕಾಗಿ ಪ್ರತಿಕ್ರಿಯಸಿದ್ದರು.
ದೇಶೀಯ ಕ್ರಿಕೆಟ್ ಪ್ರೇಮಿಗಳಿಮದ ಸಾಕಷ್ಟು ಟೀಕೆಗಳು ಕಂಡು ಬಂದ ಬಳಿಕ ಬಿಸಿಸಿಐ ಕೂಡ ಇದೀಗ ರಣಜಿ ಟ್ರೋಫಿಯನ್ನು ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಕಳೆದ ವರ್ಷ ಕೂಡ ಕೊರೊನಾವೈರಸ್ ಕಾರಣದಿಂದಾಗಿ ರಣಜಿ ಟ್ರೋಫಿಯನ್ನು ಬಿಸಿಸಿಐ ರದ್ದುಗೊಳಿಸಿತ್ತು.