ರಣಜಿ ಟ್ರೋಫಿ 2024ರ ಆವೃತ್ತಿಯಲ್ಲಿ ಮುಂಬೈ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ಮಂಗಳವಾರ ಮುಂಬೈ ರಣಜಿ ಟ್ರೋಫಿ ತಂಡದಿಂದ ಪೃಥ್ವಿ ಶಾ ಅವರನ್ನು ಕೈ ಬಿಡಲಾಗಿತ್ತು. ಫಿಟ್ನೆಸ್ ಸಮಸ್ಯೆಯಿಂದಾಗಿ ಅವರನ್ನು ಕೈ ಬಿಟ್ಟಿರುವ ಬಗ್ಗೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.
ಇದೀಗ ಮುಂಬೈನ ಸ್ಟಾರ್ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ತ್ರಿಪುರಾ ವಿರುದ್ಧದ ಮುಂದಿನ ರಣಜಿ ಪಂದ್ಯದಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಶ್ರೇಯಸ್ ಅಯ್ಯರ್ ಭಾರತ ತಂಡಕ್ಕೆ ಮರಳುವ ಹಾದಿಯಲ್ಲಿಯೂ ಅಡಚಣೆ ಉಂಟಾಗಿದೆ. ಶ್ರೇಯಸ್ ತ್ರಿಪುರ ವಿರುದ್ಧದ ರಣಜಿ ಪಂದ್ಯದಿಂದ ಹೊರಗುಳಿದಿರುವ ಬಗ್ಗೆ ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಮೂಲಗಳು ಮಾಹಿತಿ ನೀಡಿವೆ.

ಮುಂಬೈ ಮತ್ತು ತ್ರಿಪುರ ನಡುವಿನ ಪಂದ್ಯ ಅಕ್ಟೋಬರ್ 26 ರಿಂದ 29 ರವರೆಗೆ ಅಗರ್ತಲಾದಲ್ಲಿ ನಡೆಯಲಿದೆ. ಹಲವು ಪಂದ್ಯಗಳನ್ನು ಆಡಿದ ಶ್ರೇಯಸ್‌ಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿರುವುದರಿಂದ ತ್ರಿಪುರಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಮುಂಬೈ ತಂಡವು ಈಗಾಗಲೇ 16 ಸದಸ್ಯರ ತಂಡವನ್ನು ಪ್ರಕಟಿಸಿರುವುದೆರಿಂದ ಶ್ರೇಯಸ್ ಅಯ್ಯರ್‌ಗೆ ಯಾವುದೇ ಬದಲಿ ಆಟಗಾರನನ್ನು ಘೋಷಿಸಿಲ್ಲ ಎಂದು ಎಂಸಿಎ ಮೂಲಗಳು ತಿಳಿಸಿವೆ.
ರಣಜಿ ಟ್ರೋಫಿ 2025ರ ಆವೃತ್ತಿಯಲ್ಲಿ ಮುಂಬೈ ತಂಡ ಬರೋಡಾ ವಿರುದ್ಧದ ಸೋಲಿನೊಂದಿಗೆ ಅಭಿಯಾನವನ್ನು ಪ್ರಾರಂಭಿಸಿತು. ಬಳಿಕ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ಮಹಾರಾಷ್ಟ್ರ ವಿರುದ್ಧದ ಗೆಲುವಿನೊಂದಿಗೆ ಮುಂಬೈ ಪುನರಾಗಮನ ಮಾಡಿತ್ತು. ಮಹಾರಾಷ್ಟ್ರ ವಿರುದ್ಧದ ಶ್ರೇಯಸ್ ಅಯ್ಯರ್ ಮಿಂಚಿನ ಬ್ಯಾಟಿಂಗ್ ಮಾಡಿದ್ದರು. ಮಹಾರಾಷ್ಟ್ರ ಬೌಲರ್‌ಗಳಿಗೆ ಬೆವರಿಳಿಸಿದ ಅಯ್ಯರ್ 142 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಈ ಪಂದ್ಯವನ್ನು ಮುಂಬೈ ತಂಡವು 9 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.
ಮುಂದಿನ ತಿಂಗಳು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿ ಉಭಯ ತಂಡಗಳು ಐದು ಟೆಸ್ಟ್ ಪಂದ್ಯಗಳನ್ನು ಆಡಲಿವೆ. ಇದಕ್ಕೂ ಮುನ್ನ ಭಾರತ ಎ ತಂಡದೊಂದಿಗೆ ಆಸ್ಟ್ರೇಲಿಯಾ ಎರಡು ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಸೋಮವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ನೇತೃತ್ವದ ಸಮಿತಿ ಭಾರತ ಎ ತಂಡವನ್ನು ಪ್ರಕಟಿಸಿದೆ.
ಭಾರತ ಎ ತಂಡವನ್ನು ಋತುರಾಜ್ ಗಾಯಕ್ವಾಡ್ ನಾಯಕರಾಗಿ ಮುನ್ನಡೆಸಲಿದ್ದು, ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿದ ಅಭಿಮನ್ಯು ಈಶ್ವರನ್ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ. ದೀರ್ಘಕಾಲ ಭಾರತ ತಂಡದಿಂದ ಹೊರಗುಳಿದಿದ್ದ ಇಶಾನ್ ಕಿಶನ್ ಅವರನ್ನು ವಾಪಾಸ್ ಸೇರಿಸಿಕೊಳ್ಳಲಾಗಿದೆ. ಆದರೆ ರಣಜಿ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ಶತಲ ಬಾರಿಸಿದರೂ, ಆಸ್ಟ್ರೇಲಿಯಾ ಪ್ರವಾಸದ ಭಾರತ ಎ ತಂಡಕ್ಕೆ ಅವರನ್ನು ಆಯ್ಕೆ ಮಾಡಿಲ್ಲ. ಆದರೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದಲ್ಲಿ ಅಯ್ಯರ್‌ಗೆ ಸ್ಥಾನ ಪಡೆಯುವ ಅವಕಾಶವಿದೆ. ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆಯಲು ಹಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಬೇಕಿದೆ.