ಭಾರತ ತಂಡದ ಸ್ಟಾರ್ ಯಂಗ್ ಬ್ಯಾಟರ್ ಪೃಥ್ವಿ ಶಾ ಅವರ ವೃತ್ತಿಜೀವನ ಅಂತ್ಯ ಕಾಣುವಂತೆ ಭಾಸವಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪೃಥ್ವಿ ಶಾ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಟೀಮ್ ಇಂಡಿಯಾದ ಅದೃಷ್ಟದ ಬಾಗಿಲು ಪೃಥ್ವಿ ಶಾ ಅವರ ಪಾಲಿಗೆ ತೆರೆಯುತ್ತಿಲ್ಲ.
ಇದೀಗ ಪೃಥ್ವಿ ಶಾ ಅವರು ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಮುಂಬೈ ರಣಜಿ ಟ್ರೋಫಿ ತಂಡದಿಂದ ಪೃಥ್ವಿ ಶಾ ಅವರನ್ನು ಕೈ ಬಿಡಲಾಗಿದೆ. ಫಿಟ್ನೆಸ್ ಸಮಸ್ಯೆಯಿಂದಾಗಿ ಅವರನ್ನು ಕೈ ಬಿಟ್ಟಿರುವ ಬಗ್ಗೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪೃಥ್ವಿ ಶಾ ಆರಂಭದಿಂದಲ್ಲೂ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಅವರು ಬ್ಯಾಟಿಂಗ್‌ನಲ್ಲಿ ತಮ್ಮ ಖದರ್ ಉಳಿಸಿಕೊಂಡಿದ್ದಾರೆ. ಆದರೂ ಫಿಟ್ನೆಸ್ ಸಮಸ್ಯೆಯಿಂದ ಅವರು ತ್ರಿಪುರಾ ವಿರುದ್ಧದ ಮುಂದಿನ ಪಂದ್ಯದಿಂದ ಹೊರಗುಳಿಯಬೇಕಾಗಿದೆ. ಅಕ್ಟೋಬರ್ 26 ರಿಂದ 29 ರವರೆಗೆ ಅಗರ್ತಲಾದಲ್ಲಿ ಮುಂಬೈ ಮತ್ತು ತ್ರಿಪುರ ನಡುವೆ ಪಂದ್ಯ ನಡೆಯಲಿದೆ. ತಂಡದಿಂದ ಕೈ ಬಿಡುತ್ತಿರುವ ಬಗ್ಗೆ ಪೃಥ್ವಿ ಶಾ ಅವರಿಗೆ ಕೋಚ್ ಮತ್ತು ಆಯ್ಕೆ ಸಮಿತಿ ತಿಳಿಸಿದ ಬಳಿಕವೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಪೃಥ್ವಿ ಅಧಿಕ ತೂಕ ಹೊಂದಿರುವ ಕಾರಣ ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸಬೇಕೆಂದು ಎಂಸಿಎ ಖಡಕ್ ಎಚ್ಚರಿಕೆ ಕೊಟ್ಟಿದೆ.
ವರದಿಗಳ ಪ್ರಕಾರ, ನೆಟ್ ಅಭ್ಯಾಸ ಅವಧಿಯಲ್ಲೂ ಪೃಥ್ವಿ ಶಾ ಬೇಜವಾಬ್ದಾರಿ ವರ್ತನೆಯಿಂದ ಎಂಸಿಎ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತು ಮುಂಬೈ ತಂಡದ ಆಡಳಿತ ಮಂಡಳಿಯಿಂದ ಆಯ್ಕೆಗಾರರಿಗೆ ದೂರು ಕೂಡ ಸಲ್ಲಿಕೆಯಾಗಿದೆ. ಎಂಸಿಎನ ಎರಡು ವಾರಗಳ ಫಿಟ್ನೆಸ್ ವೇಳಾಪಟ್ಟಿ ಅನುಸರಿಸಲು ಪೃಥ್ವಿ ಶಾ ಅವರಿಗೆ ಸಲಹೆ ನೀಡಲಾಗಿದೆ. ಪೃಥ್ವಿ ಶಾ ದೇಹದಲ್ಲಿ ಶೇಕಡಾ 35 ರಷ್ಟು ಕೊಬ್ಬು ಇರುವುದನ್ನು ಕಂಡುಕೊಂಡಿರುವ ಮ್ಯಾನೇಜ್‌ಮೆಂಟ್, ತಂಡಕ್ಕೆ ಮರಳುವ ಮುನ್ನ ತರಬೇತಿಯ ಅಗತ್ಯವಿದೆ ಎಂದು ಎಂಸಿಎಗೆ ತಿಳಿಸಿದೆ. ಮತ್ತೊಂದೆಡೆ ಪೃಥ್ವಿ ಶಾ ಮುಂಬೈ ರಣಜಿ ತಂಡದಿಂದ ಹೊರಗುಳಿದಿರುವುದು ಮುಂಬರುವ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅವರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ರಣಜಿ ಟ್ರೋಫಿ 2024ರಲ್ಲಿ ಮುಂಬೈ ಪರ ಆರಂಭಿಕರಾಗಿ ಬ್ಯಾಟ್ ಬೀಸಿರುವ ಪೃಥ್ವಿ ಶಾ 2 ಟೆಸ್ಟ್ ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ ಇದುವರೆಗೆ 7,12,1 39* ರನ್ ಗಳಿಸಿದ್ದಾರೆ. 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಪರ ಶಾ ಪಾದಾರ್ಪಣೆ ಮಾಡಿದ್ದರು. ಆದರೆ ಮೈದಾನದ ಹೊರಗಿನ ಸಮಸ್ಯೆಗಳಿಂದಾಗಿ ಅವರ ವೃತ್ತಿಜೀವನವು ಕುಗ್ಗಿತ್ತು. ಭಾರತ ತಂಡದ ಪರ ಶಾ 6 ಏಕದಿನ ಪಂದ್ಯಗಳಲ್ಲಿ 189 ರನ್ ಹಾಗೂ 9 ಟೆಸ್ಟ್ ಪಂದ್ಯಗಳಲ್ಲಿ 42.37 ಸರಾಸರಿಯಲ್ಲಿ 339 ರನ್ ಕಲೆ ಹಾಕಿದ್ದಾರೆ.