ಹುಬ್ಬಳ್ಳಿ: ಭರವಸೆಯ ಆಟಗಾರ ಶುಭಂ ಪುಂಡೀರ್ ಅವರು ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಜಮ್ಮು ಕಾಶ್ಮೀರ ತಂಡ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ದಿನದ ಗೌರವ ತನ್ನದಾಗಿಸಿಕೊಂಡಿದೆ.
ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಮಂಗಳವಾರದಿಂದ ಆರಂಭವಾದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮಿರ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯಿತು. ಜಮ್ಮು ತಂಡದ ಆರಂಭಿಕ ಆಟಗಾರರು ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿತು. ಈ ವೇಳೆ ಖಮ್ರಾನ್ ಇಕ್ಬಾಲ್ (6) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲವಾದರು. ಮೊದಲ ವಿಕೆಟ್‌ಗೆ ಜಮ್ಮು ತಂಡ 18 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು.

ಯಾವರ್ ಹಸನ್ ಹಾಗೂ ಶುಭಂ ಪುಂಡೀರ್ ಜೋಡಿ 18 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ತಂಡಕ್ಕೆ ಆಧಾರವಾದರು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಕರ್ನಾಟಕದ ಬೌಲರ್‌ಗಳ ವಿಫಲರಾದರು. ಪಿಚ್ ಮರ್ಮ ಅರಿತು ಬ್ಯಾಟ್ ಮಾಡಿದ ಜೋಡಿ ಹಂತ ಹಂತವಾಗಿ ರನ್‌ಗತಿಗೆ ಚುರುಕು ಮುಟ್ಟಿಸುತ್ತಾ ಸಾಗಿತು. ಎರಡನೇ ವಿಕೆಟ್‌ಗೆ ಈ ಜೋಡಿ 244 ಎಸೆತಗಳಲ್ಲಿ 139 ರನ್ ಬಾರಿಸಿತು. ಈ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದ ಆರಂಭಿಕ ಯಾವರ್ ಹಸನ್ 150 ಎಸೆತಗಳಲ್ಲಿ 13 ಬೌಂಡರಿ ಸೇರಿದಂತೆ 88 ರನ್ ಬಾರಿಸಿ ಔಟ್ ಆದರು. ಪ್ರಸಿದ್ಧ್ ಕೃಷ್ಣ ಅವರ ಔಟ್ ಸೈಡ್ ಆಫ್ ಸ್ಟಂಪ್ ಡೆಲಿವರಿಯನ್ನು ಕೆಣಕಿದ ಯಾವರ್ ಹಸನ್ ಸ್ಲಿಪ್‌ನಲ್ಲಿದ್ದ ರಾಹುಲ್‌ಗೆ ವಿಕೆಟ್ ಒಪ್ಪಿಸಿದರು.
ನಾಯಕ ಪರಾಸ್ ಡೋಗ್ರಾ 9 ರನ್ ಬಾರಿಸಿದ್ದಾಗ ರಿಟೈರ್ಡ್ ಹರ್ಟ್ ಆದರು. ಅಮೋಘ ಬ್ಯಾಟಿಂಗ್ ನಡೆಸುತ್ತಿದ್ದ ಶುಭಂ ಪುಂಡೀರ್ ಅವರಿಗೆ ಉತ್ತಮ ಸಾಥ್ ನೀಡಿದ ಅಬ್ದುಲ್ ಸಮದ್ ತಂಡಕ್ಕೆ ಆಧಾರವಾದರು. ಈ ಜೋಡಿ ಕರ್ನಾಟಕ ತಂಡದ ಬೌಲರ್‌ಗಳ ಕರಾರುವಾಕ್ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ಜೋಡಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿತು. ಈ ಜೋಡಿ 144 ಎಸೆತಗಳಲ್ಲಿ ಅಜೇಯ 105 ರನ್ ಸಿಡಿಸಿದೆ.

ಮಧ್ಯಮ ಕ್ರಮಾಂಕದ ಶುಭಂ ಪುಂಡೀರ್ 221 ಎಸೆತಗಳಲ್ಲಿ 12 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 117 ರನ್ ಬಾರಿಸಿದರೆ, ಅಬ್ದುಲ್ ಸಮದ್ ಅಜೇಯ 52 ರನ್ ಬಾರಿಸಿ ಬುಧವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಿನದಾಟದ ಮುಕ್ತಾಯಕ್ಕೆ ಜಮ್ಮು 2 ವಿಕೆಟ್ ನಷ್ಟಕ್ಕೆ 284 ರನ್ ಸೇರಿಸಿದೆ. ಕರ್ನಾಟಕದ ಪರ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಬಳಿಸಿದರು.
ಎರಡನೇ ದಿನದಾಟದಲ್ಲಿ ಕರ್ನಾಟಕ ಬಿಗುವಿನ ದಾಳಿ ನಡೆಸಿ ಜಮ್ಮು ಕಾಶ್ಮೀರ ಬ್ಯಾಟರ್‌ಗಳನ್ನು ಕಟ್ಟಿ ಹಾಕಬೇಕಿದೆ. ಕರ್ನಾಟಕದ ಅನುಭವಿ ಬೌಲರ್‌ಗಳ ತಮ್ಮ ಅನುಭವದ ಲಾಭ ಪಡೆದು ಬೌಲಿಂಗ್ ನಡೆಸಿ ಜಮ್ಮು ಬ್ಯಾಟರ್‌ಗಳಿಗೆ ಕಾಟ ನೀಡಬೇಕಿದೆ.