ರಣಜಿ ಟ್ರೋಫಿ 2024-25ರ ಟೂರ್ನಿಯಲ್ಲಿ 42 ಬಾರಿ ಚಾಂಪಿಯನ್ ಮುಂಬೈ ತಂಡವನ್ನು ಜಮ್ಮು ಮತ್ತು ಕಾಶ್ಮೀರ ಸೋಲಿಸಿದೆ. ಜಮ್ಮು ಮತ್ತು ಕಾಶ್ಮೀರ ವಿರುದ್ಧ, ಟೀಮ್ ಇಂಡಿಯಾದ 7 ಸ್ಟಾರ್ ಆಟಗಾರರನ್ನು ಹೊಂದಿದ್ದರೂ ಮುಂಬೈ ತಂಡಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಶಿವಂ ದುಬೆ ಮತ್ತು ಶಾರ್ದೂಲ್ ಠಾಕೂರ್ ಅವರಂತಹ ಸ್ಟಾರ್ ಆಟಗಾರರನ್ನು ಹೊಂದಿರುವ ಮುಂಬೈ ತಂಡವನ್ನು ಜಮ್ಮು ಮತ್ತು ಕಾಶ್ಮೀರ ತಂಡವು 5 ವಿಕೆಟ್‌ಗಳಿಂದ ಸೋಲಿಸಿದೆ.
ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 120 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲ ಇನಿಂಗ್ಸ್‌ನಲ್ಲಿ 206 ರನ್ ಗಳಿಸಿ ಮುಂಬೈ ವಿರುದ್ಧ 86 ರನ್‌ಗಳ ಮುನ್ನಡೆ ಸಾಧಿಸಿತ್ತು.

ಮುಂಬೈ ಎರಡನೇ ಇನ್ನಿಂಗ್ಸ್‌ನಲ್ಲಿ 290 ರನ್ ಗಳಿಸಿ ಆಲೌಟ್ ಆಗಿದ್ದು, ಜಮ್ಮು ಮತ್ತು ಕಾಶ್ಮೀರ ಗೆಲುವಿಗೆ 205 ರನ್‌ಗಳ ಗುರಿ ಪಡೆದಿತ್ತು. ಈ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು. ಇದರೊಂದಿಗೆ ಮುಂಬೈ 5 ವಿಕೆಟ್‌ಗಳಿಂದ ಸೋಲನುಭವಿಸಬೇಕಾಯಿತು.
ಜಮ್ಮು ಮತ್ತು ಕಾಶ್ಮೀರ ವಿರುದ್ಧ ಭಾರತ ಕ್ರಿಕೆಟ್ ತಂಡದ ಸ್ಟಾರ್ ಟೆಸ್ಟ್ ಜೋಡಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ರೋಹಿತ್ ಮತ್ತು ಯಶಸ್ವಿ ಫ್ಲಾಪ್ ಆಗಿದ್ದು ಮುಂಬೈ ಸೋಲಿಗೆ ಕಾರಣವಾಯಿತು. ಇವರಿಬ್ಬರನ್ನು ಹೊರತುಪಡಿಸಿ ಇತರ ಬ್ಯಾಟರ್‌ಗಳು ಕೂಡ ಮುಂಬೈ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಮುಂಬೈ 5 ವಿಕೆಟ್‌ಗಳ ಸೋಲು ಕಂಡಿತ್ತು. ರೋಹಿತ್ ಮೊದಲ ಇನಿಂಗ್ಸ್‌ನಲ್ಲಿ 3 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 28 ರನ್ ಗಳಿಸಿದರು. ಜೈಸ್ವಾಲ್ ಮೊದಲ ಇನ್ನಿಂಗ್ಸ್‌ನಲ್ಲಿ 4 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 26 ರನ್ ಕಲೆ ಹಾಕಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಶಾರ್ದೂಲ್ ಠಾಕೂರ್ ಮುಂಬೈ ಪರ 51 ರನ್‌ಗಳ ಅರ್ಧಶತಕವನ್ನು ಬಾರಿಸಿದರು. ಜಮ್ಮು ಪರ ಉಮರ್ ನಜೀರ್ ಮಿರ್ ಮತ್ತು ಯುದ್ವೀರ್ ಸಿಂಗ್ ತಲಾ 4 ವಿಕೆಟ್ ಪಡೆದು ಮಿಂಚಿದರು. ಜಮ್ಮು ಪರ ಮೊದಲ ಇನ್ನಿಂಗ್ಸ್‌ನಲ್ಲಿ ಶುಭಂ ಖಜುರಿಯಾ 55 ರನ್ ಮತ್ತು ಅಬಿದ್ ಮುಷ್ತಾಕ್ 44 ರನ್ ಕೊಡುಗೆ ನೀಡಿದರೆ, ಮುಂಬೈ ಪರ ಮೋಹಿತ್ ಅವಸ್ತಿ ಮತ್ತು ಶಾರ್ದೂಲ್ ಠಾಕೂರ್ ತಲಾ 5 ಉರುಳಿಸಿದರು.
ಮುಂಬೈ ಎರಡನೇ ಇನಿಂಗ್ಸ್‌ನಲ್ಲಿ 91 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಆದರೆ, ಶಾರ್ದೂಲ್ ಠಾಕೂರ್ 135 ಎಸೆತಗಳಲ್ಲಿ 18 ಬೌಂಡರಿಗಳ ಸಹಿತ 119 ರನ್‌ಗಳ ಅದ್ಭುತ ಶತಕ ಬಾರಿಸಿ ಸಂಭ್ರಮಿಸಿದರು. ಮುಂಬೈ ತಂಡವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 290 ಕ್ಕೆ ಕೊಂಡೊಯ್ದರು. ಆದರೆ ಅವರ ಇನ್ನಿಂಗ್ಸ್ ವ್ಯರ್ಥವಾಯಿತು. ಜಮ್ಮು ಮತ್ತು ಕಾಶ್ಮೀರ 205 ರನ್‌ಗಳನ್ನು ಬೆನ್ನಟ್ಟಿತು. ಜಮ್ಮು ಮತ್ತು ಕಾಶ್ಮೀರ ಪರ ಶುಭಂ ಖಜುರಿಯಾ 45 , ವಿವರಂತ್ ಶರ್ಮಾ 38 ಮತ್ತು ಅಬಿದ್ ಮುಷ್ತಾಕ್ 32 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.