ಮೋಹಾಲಿ: ನಾಯಕ ದೇವದತ್ ಪಡಿಕ್ಕಲ್ ಅವರ ಕೆಚ್ಚೆದೆಯ ಆಟದ ನೆರೆವಿನಿಂದ ಕರ್ನಾಟಕ ರಣಜಿ ಟ್ರೋಫಿ ಬಿ ಗುಂಪಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಪಂಜಾಬ್ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದೆ.
ಒತ್ತಡವನ್ನು ಹೇಗೆ ಮೆಟ್ಟಿನಿಲ್ಲಬೇಕು ಎಂಬುದನ್ನು ಕರಗತ ಮಾಡಿಕೊಂಡಿದ್ದ ದೇವದತ್ ಪಡಿಕ್ಕಲ್ ಪಂಜಾಬ್ ಬೌಲರ್‌ಗಳ ಸವಾಲನ್ನು ಮೆಟ್ಟಿನಿಂತರು. ಮಹತ್ವದ ಪಂದ್ಯದಲ್ಲಿ ಕರ್ನಾಟಕ ಈ ಪಂದ್ಯದಲ್ಲಿ ಜಯ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಬೇಕಾಗಿದ್ದಲ್ಲಿ ಟಿ20 ಶೈಲಿಯಲ್ಲಿ ಬ್ಯಾಟ್ ಮಾಡುವುದು ಅನಿವಾರ್ಯವಾಗಿತ್ತು. ಈ ಸವಾಲನ್ನು ಅರಿತ ನಾಯಕ ದೇವದತ್ ಪಡಿಕ್ಕಲ್ ತಮ್ಮ ಅನುಭವವನ್ನು ಧಾರೆ ಎರೆದು ಬ್ಯಾಟ್ ಮಾಡಿದರು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ದೇವದತ್ ಅಬ್ಬರಿಸಿದರು.

ರಣಜಿ ಟ್ರೋಫಿ ವೃತ್ತಿ ಜೀವನದಲ್ಲಿ ದೇವದತ್ ಪಡಿಕ್ಕಲ್ ಇದೇ ಮೊದಲ ಬಾರಿಗೆ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದರು. ಇವರ ಶತಕ ಕರ್ನಾಟಕ ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿತು. 85 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ನೆರವಿನಿಂದ ದೇವದತ್ ಅಜೇಯ 120 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು.
ದೇವದತ್ ಪಡಿಕ್ಕಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಕೆಎಲ್ ರಾಹುಲ್ 13 ರನ್‌ಗಳಿಗೆ ಆಟ ಮುಗಿಸಿದರು. 17 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ದೇವದತ್ ಹಾಗೂ ಅನುಭವಿ ಆಟಗಾರ ಮಯಾಂಕ್ ಅಗರ್‌ವಾಲ್ ಜೊಡಿ ಆಧಾರವಾಯಿತು. ಈ ಜೋಡಿ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾಯಿತು. ಈ ಹಂತದಲ್ಲಿ ಮಯಾಂಕ್ ಅಗರ್‌ವಾಲ್ 53 ರನ್ ಬಾರಿಸಿ ಮುನ್ನಗುತ್ತಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಕೆವಿ ಅನೀಶ್, ಆರ್ ಸ್ಮರಣ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಲಿಲ್ಲ. ಆಲ್‌ರೌಂಡರ್ ಶ್ರೇಯಸ್ ಗೋಪಾಲ್ 33 ರನ್ ಬಾರಿಸಿದರು. ವಿದ್ಯಾಧರ್ ಪಾಟೀಲ್ ಸಹ ಅಜೇಯ 14 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ದಾಟಿಸಿದರು. ಕರ್ನಾಟಕ 250 ರನ್‌ಗಳ ಗುರಿಯನ್ನು ಕೇವಲ 27.5 ಓವರ್‌ಗಳಲ್ಲಿ ಮುಟ್ಟಿ ಬೀಗಿತು. ಈ ವೇಳೆ ರನ್ ರೇಟ್ 9.05 ಆಗಿತ್ತು.
ಇದಕ್ಕೂ ಮೊದಲ ಪಂಜಾಬ್ 3 ವಿಕೆಟ್‌ಗೆ 119 ರನ್‌ಗಳಿಂದ ನಾಲ್ಕನೇ ದಿನದಾಟವನ್ನು ಆರಂಭಿಸಿತು. ನಾಯಕ ಉದಯ್ ಸಹರಾನ್ ಅವರು ನೆಲಕಚ್ಚಿನಿಂತು ಬ್ಯಾಟ್ ಮಾಡಿದರು. ಅಲ್ಲದೆ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಇವರು 166 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 93 ರನ್ ಬಾರಿಸಿ ಶಿಖರ್ ಶೆಟ್ಟಿ ತೋಡಿದ ಖೆಡ್ಡಾಗೆ ಬಲಿಯಾದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅನ್ಮೋಲ್‌ಪ್ರೀತ್ ಸಿಂಗ್ 44 ರನ್ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು. ಹರ್ಪಿತ್ ಬ್ರಾರ್ 29 ರನ್ ಸಿಡಿಸಿ ತಂಡವನ್ನು ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಪಂಜಾಬ್ 256 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಪರ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ, ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್ ಉರುಳಿಸಿದರು. ಶಿಖರ್ ಶೆಟ್ಟಿ 2 ವಿಕೆಟ್ ಪಡೆದರು.
ಎಲೈಟ್ ಬಿ ಗುಂಪಿನಲ್ಲಿ ಕರ್ನಾಟಕ ಅಬ್ಬರದ ಪ್ರದರ್ಶನ ನೀಡುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದೆ. ಕರ್ನಾಟಕ ಆಡಿದ 7 ಪಂದ್ಯಗಳಲ್ಲಿ 3 ಜಯ, 1 ಸೋಲು, 3 ಡ್ರಾ ಸಾಧಿಸಿದ್ದು, 27 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಇನ್ನು ಪಂಜಾಬ್ 7 ಪಂದ್ಯಗಳಲ್ಲಿ 3 ಜಯ ಸಾಧಿಸಿದ್ದು, 28 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.