
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ Vs ಸೌರಾಷ್ಟ್ರ ಪಂದ್ಯ ಸೆಮಿಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದೆ. ಸೌರಾಷ್ಟ್ರ ತಂಡವನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ 527 ರನ್‌ಗಳಿಗೆ ಆಲೌಟ್ ಮಾಡಿದ ಕರ್ನಾಟಕ, 4ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ.
ಕರ್ನಾಟಕ ಮೊದಲನೇ ಇನ್ನಿಂಗ್ಸ್‌ನಲ್ಲಿ 407 ರನ್‌ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕ ಅರ್ಪಿತ್ ವಸಾವಡ ದ್ವಿಶತಕ ಸಿಡಿಸಿ ಮಿಂಚಿದರು. ಶೆಲ್ಡನ್ ಜಾಕ್ಸನ್ ಅತ್ಯುತ್ತಮ ಶತಕ ಸಿಡಿಸಿದರು. ಅಂತಿಮವಾಗಿ ಸೌರಾಷ್ಟ್ರ 527 ರನ್‌ಗಳಿಗೆ ಆಲೌಟ್ ಆಗುವ ಮೂಲಕ 120 ರನ್‌ಗಳ ಮುನ್ನಡೆ ಸಾಧಿಸಿತು.
ವಿಧ್ವತ್ ಕಾವೇರಪ್ಪ 5 ವಿಕೆಟ್ ಪಡೆದು ಮಿಂಚಿದರೆ, ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು. ವಾಸುಕಿ ಕೌಶಿಕ್ ಮತ್ತು ಕೃಷ್ಣಪ್ಪ ಗೌತಮ್ ತಲಾ ಒಂದು ವಿಕೆಟ್ ಪಡೆದರು.
120 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ರವಿಕುಮಾರ್ ಸಮರ್ಥ್ ಮೊದಲನೇ ಎಸೆತದಲ್ಲೇ ಚೇತನ್ ಸಕಾರಿಯಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ದೇವದತ್ ಪಡಿಕ್ಕಲ್ ಕೂಡ 7 ರನ್ ಗಳಿಸುವಷ್ಟರಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಮಯಾಂಕ್ ಅಗರ್ವಾಲ್-ನಿಕಿನ್ ಜೋಸ್ ಆಸರೆ
14 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ ಮತ್ತು ನಿಕಿನ್ ಜೋಸ್ ಆಸರೆಯಾದರು. ಮಯಾಂಕ್ ಅಗರ್ವಾಲ್ 65 ಎಸೆತಗಳಲ್ಲಿ 5 ಬೌಂಡರಿ ಸಹಿತ 55 ರನ್ ಗಳಿಸುವ ಮೂಲಕ ನಿಕಿನ್ ಜೋಸ್ ಜೊತೆಯಲ್ಲಿ 100 ರನ್‌ಗಳ ಜೊತೆಯಾಟ ಆಡಿದರು.
ನಿಕಿನ್ ಜೋಸ್ ಕೂಡ ಅತ್ಯುತ್ತಮ ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾದರು. 73 ಎಸೆತಗಳಲ್ಲಿ 6 ಬೌಂಡರಿ ಸಹಿತ ಅಜೇಯ 54 ರನ್ ಗಳಿಸಿದ್ದು 5ನೇ ದಿನಕ್ಕೆ ವಿಕೆಟ್ ಕಾಪಾಡಿಕೊಂಡಿದ್ದಾರೆ. ಅನುಭವಿ ಬ್ಯಾಟರ್ ಮನೀಶ್ ಪಾಂಡೆ 4 ರನ್ ಗಳಿಸುವಷ್ಟರಲ್ಲಿ ಔಟಾಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದ್ದಾರೆ. 4ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದ್ದು 3 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

5ನೇ ದಿನದಲ್ಲಿ ರೋಚಕ ಕಾದಾಟ ನಿರೀಕ್ಷೆ
5ನೇ ದಿನ ಪಂದ್ಯದ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಹೆಚ್ಚಾಗಿದೆ. ಕರ್ನಾಟಕ ತಂಡ ವೇಗವಾಗಿ ರನ್ ಕಲೆಹಾಕುವ ಪ್ರಯತ್ನದಲ್ಲಿದೆ. ಕರ್ನಾಟಕ ತಂಡವನ್ನು ಬೇಗನೆ ಆಲೌಟ್ ಮಾಡಿ ಕಡಿಮೆ ಮೊತ್ತವನ್ನು ಚೇಸ್ ಮಾಡುವ ಲೆಕ್ಕಾಚಾರದಲ್ಲಿದೆ ಸೌರಾಷ್ಟ್ರ.
ನಿಕಿನ್ ಜೋಸ್ ಉತ್ತಮವಾಗಿ ಆಡುತ್ತಿದ್ದು ಅವರ ಬ್ಯಾಟಿಂಗ್ ತಂಡಕ್ಕೆ ಮುಖ್ಯವಾಗಲಿದೆ. ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್, ಶ್ರೀನಿವಾಸ್ ಶರತ್, ಶ್ರೇಯಸ್ ಗೋಪಾಲ್‌ರಂತಹ ಬ್ಯಾಟರ್ ಗಳಿದ್ದು ಕಡಿಮೆ ಓವರ್ ಗಳಲ್ಲಿ ಹೆಚ್ಚಿನ ರನ್ ಗಳಿಸಿದರೆ, ಕರ್ನಾಟಕ ತಂಡಕ್ಕೆ ಗೆಲುವಿನ ಅವಕಾಶ ಇರುತ್ತದೆ.