ಬೆಂಗಳೂರು: ಸಂಘಟಿತ ಆಟದ ಪ್ರದರ್ಶನ ನೀಡಿದ ಮಧ್ಯಪ್ರದೇಶ ರಣಜಿ ಟ್ರೋಫಿ ಎಲೈಟ್ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 217 ರನ್‌ಗಳಿಂದ ಮಣಿಸಿದೆ. ಈ ಗೆಲುವಿನ ಮೂಲಕ ಮಧ್ಯಪ್ರದೇಶ ಆಡಿರುವ 6 ಪಂದ್ಯಗಳಲ್ಲಿ 2 ಗೆಲುವು, 4 ಡ್ರಾ ಸಾಧಿಸಿದ್ದು, 22 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಕರ್ನಾಟಕ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದ್ದು, 21 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಭಾನುವಾರ ಎರಡನೇ ಇನಿಂಗ್ಸ್‌ನ್ನು ಮಧ್ಯಪ್ರದೇಶ 6 ವಿಕೆಟ್‌ಗೆ 204 ರನ್‌ಗಳಿಂದ ಆಟ ಮುಂದುವರಿಸಿತು. ಅಲ್ಲದೆ 8 ವಿಕೆಟ್‌ಗೆ 229 ರನ್ ಸೇರಿಸಿದ್ದಾಗ ಡಿಕ್ಲೇರ್ ಮಾಡಲಾಯಿತು. ಕರ್ನಾಟಕದ ಪರ ವಿದ್ಯಾಧರ್ ಪಾಟೇಲ್ 4, ಶಿಖರ್ ಶೆಟ್ಟಿ, ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದರು.

362 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡದ ಆರಂಭಿಕ ಮಯಾಂಕ್ ಅಗರ್‌ವಾಲ್ (7), ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ (0) ಎರಡನೇ ಇನಿಂಗ್ಸ್‌ನಲ್ಲೂ ನಿರಾಸೆ ಅನುಭವಿಸಿದರು. ಮೂರನೇ ವಿಕೆಟ್‌ಗೆ ಆರಂಭಿಕ ಕೆವಿ ಅನೀಶ್ ಹಾಗೂ ನಿಕ್ಕಿನ್ ಜೋಸ್ ಜೋಡಿ ತಂಡಕ್ಕೆ ಕೊಂಚ ಆಧಾರವಾಯಿತು. ಈ ಜೋಡಿ 3ನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ನಿಕ್ಕಿನ್ 2 ಬೌಂಡರಿ ನೆರವಿನಿಂದ 26 ರನ್ ಸೇರಿಸಿದರು.
ಆಲ್‌ರೌಂಡರ್ ಶ್ರೇಯಸ್ ಗೋಪಾಲ್, ಅಭಿನವ್ ಮನೋಹರ್, ಕೃಷ್ಣಾ ಶ್ರೀಜೇತ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಕೆವಿ ಅನೀಶ್ ಸಮಯೋಚಿತ ಆಟವನ್ನು ನಡೆಸಿದರು. ಇವರು 147 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 57 ರನ್ ಬಾರಿಸಿ ಔಟ್ ಆದರು. ಕೆಳ ಕ್ರಮಾಂಕದಲ್ಲಿ ವಿದ್ಯಾಧರ್ ಪಾಟೀಲ್ 5 ಬೌಂಡರಿ ಸಹಾಯದಿಂದ ಅಜೇಯ 26 ರನ್ ಬಾರಿಸಿದರು. ಉಳಿದಂತೆ ಕರ್ನಾಟಕ 144 ರನ್‌ಗಳಿಗೆ ಆಲೌಟ್ ಆಯಿತು.
ಮಧ್ಯಪ್ರದೇಶದ ಪರ ಸರಾಂಶ್ ಜೈನ್ ಹಾಗೂ ಸಾಗರ್ ಸೋಳಂಕಿ ತಲಾ 3 ವಿಕೆಟ್ ಪಡೆದರು. ಸರಾಂಶ್ ಜೈನ್ ಮೊದಲ ಇನಿಂಗ್ಸ್‌ನಲ್ಲಿ 32 ರನ್ ಬಾರಿಸಿದ್ದರು. ಅಲ್ಲದೆ ಮೊದಲ ಇನಿಂಗ್ಸ್‌ನಲ್ಲಿ 4 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದರು. ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಗ್ರುಪ್ ಸಿ ಪಂದ್ಯದಲ್ಲಿ ಬಂಗಾಳ ತಂಡ ಇನಿಂಗ್ಸ್ ಹಾಗೂ 46 ರನ್ ಜಯ ಸಾಧಿಸಿದೆ. ಮೊದಲ ಬ್ಯಾಟ್ ಮಾಡಿದ ಬಂಗಾಳ ತಂಡ 519 ರನ್‌ಗಳಿಗೆ ಆಲೌಟ್ ಆಯಿತು. ಸರ್ವಿಸಸ್ ಮೊದಲ ಇನಿಂಗ್ಸ್‌ನಲ್ಲಿ 186 ರನ್‌ಗೆ ಆಲೌಟ್ ಆದರೆ, ಎರಡನೇ ಇನಿಂಗ್ಸ್‌ನಲ್ಲಿ 287 ರನ್‌ಗೆ ಸರ್ವಪತನ ಕಂಡಿತು.
ಇನ್ನೊಂದು ಪಂದ್ಯದಲ್ಲಿ ಮುಂಬೈ ಸಹ ಭರ್ಜರಿ ಜಯ ದಾಖಲಿಸಿದೆ. ಹೈದರಾಬಾದ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 560 ರನ್‌ಗಳಿಗೆ ಆಲೌಟ್ ಆಯಿತು. ಹೈದರಾಬಾದ್ ಮೊದಲ ಇನಿಂಗ್ಸ್‌ನಲ್ಲಿ 267 ರನ್ ಸೇರಿಸಿತು. ಫಾಲೋಅನ್ ಪಡೆದ ಹೈದರಾಬಾದ್ 302 ರನ್ ಗೆ ಆಲೌಟ್ ಆಯಿತು. ಅಲ್ಪಮೊತ್ತ ಹಿಂಬಾಲಿಸಿದ ಮುಂಬೈ 1 ವಿಕೆಟ್ ನಷ್ಟಕ್ಕೆ 12 ರನ್ ಸೇರಿಸಿ ಜಯ ಸಾಧಿಸಿತು. ಮುಂಬೈ ಪರ ಮೊದಲ ಇನಿಂಗ್ಸ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ದ್ವಿಶತಕ ಬಾರಿಸಿದ್ದ ಸರ್ಫರಾಜ್ ಖಾನ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.