ಬಲಿಷ್ಠ ಮುಂಬೈ ತಂಡವು ಮೇಘಾಲಯ ವಿರುದ್ಧ ರಣಜಿ ಟ್ರೋಫಿಯ ಕೊನೆಯ ಲೀಗ್ ಪಂದ್ಯವನ್ನು ಆಡಲು ಸಜ್ಜಾಗಿದೆ. ಮುಂಬೈ ಮತ್ತು ಮೇಘಾಲಯ ನಡುವಿನ ಪಂದ್ಯವೂ ಜನವರಿ 30 ಗುರುವಾರದಿಂದ ಬಿಕೆಸಿಯ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ತಂಡವನ್ನು ಪ್ರಕಟಿಸಿದೆ. ಮುಂಬೈ ತಂಡದಿಂದ ಟೀಮ್ ಇಂಡಿಯಾದ ಅನುಭವಿ ಸ್ಟಾರ್ ಆಟಗಾರರು ಹೊರಗುಳಿದಿದ್ದಾರೆ. ಮೇಘಾಲಯ ವಿರುದ್ಧದ ರಣಜಿ ಟ್ರೋಫಿಯ ಕೊನೆಯ ಲೀಗ್ ಪಂದ್ಯದಿಂದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಹೊರಗುಳಿದಿರುವ ಬಗ್ಗೆ
ವರದಿಯಾಗಿದೆ.
ಕಳೆದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಮುಂಬೈ ತಂಡ ಹೀನಾಯ ಸೋಲು ಕಂಡಿತ್ತು. ಮುಂಬೈ ತಂಡದಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರರ ದಂಡೆಯಿದ್ದರೂ, ಹೇಳಿಕೊಳ್ಳುವಂತಹ ಪ್ರದರ್ಶನ ಕಂಡು ಬಂದಿರಲಿಲ್ಲ. ಜಮ್ಮು ಮತ್ತು ಕಾಶ್ಮೀರ ವಿರುದ್ಧ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಬಿಗ್ ಇನ್ನಿಂಗ್ಸ್ ಆಡುವುದರಲ್ಲಿ ವಿಫಲಾವಾಗದ್ದರು. ಪರಿಣಾಮ ಮುಂಬೈ ವಿರುದ್ಧ ಜಮ್ಮು ಮತ್ತು ಕಾಶ್ಮೀರ 5 ವಿಕೆಟ್‌ಗಳ ಅದ್ಭತ ಗೆಲುವು ಸಾಧಿಸಿತ್ತು. ಇದೀಗ ರಣಜಿ ಟ್ರೋಫಿ ಟೂರ್ನಿ ಮೂಲಕ ಫಾರ್ಮ್‌ಗೆ ಮರಳುವ ಭಾರತ ತಂಡದ ನಾಯಕ ರೋಹಿತ್ ಶರ್ಮಾರ ಕನಸು ಈಡೇರಿಲ್ಲ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ನಡೆಯುವ ನಾಗ್ಪುರ ಶಿಬಿರದಲ್ಲಿ ಭಾಗವಹಿಸಲು ಟೀಮ್ ಇಂಡಿಯಾ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರು ರಣಜಿ ಟ್ರೋಫಿ ಪಂದ್ಯದಿಂದ ಹೊರಗುಳಿದಿದ್ದಾರೆ. ಶಿವಂ ದುಬೆ ಭಾರತ ಟಿ20 ತಂಡದಲ್ಲಿ ಸೇರಿದ್ದರಿಂದ ಮುಂಬೈ ರಣಜಿ ಟ್ರೋಫಿ ಪಂದ್ಯದಿಂದ ಹೊರಗುಳಿದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ಈ ನಾಲ್ವರೂ ಆಟಗಾರರು ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದರು.
ಪ್ರಸ್ತುತ ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಇದಾದ ನಂತರ ಉಭಯ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿವೆ. ಇದರ ಮಧ್ಯೆ ಟಿ20 ಭಾರತ ತಂಡದ ಭಾಗವಾಗಿರದ ಆಟಗಾರರು ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರ ಹೆಸರುಗಳು ಸೇರಿವೆ. ಇದೀಗ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೂ ಮುನ್ನ ಈ ಮೂವರು ಆಟಗಾರರು ಮುಂಬೈ ತಂಡದಿಂದ ಹೊರಗುಳಿದಿದ್ದಾರೆ.
ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ), ಆಯುಷ್ ಮ್ಹಾತ್ರೆ, ಅಂಗ್ಕ್ರಿಶ್ ರಘುವಂಶಿ, ಅಮೋಘ್ ಭಟ್ಕಳ್, ಸಿದ್ಧೇಶ್ ಲಾಡ್, ಆಕಾಶ್ ಆನಂದ್ (ವಿಕೆಟ್‌ಕೀಪರ್), ಹಾರ್ದಿಕ್ ತಮೋರ್ (ವಿಕೆಟ್‌ಕೀಪರ್), ಸೂರ್ಯಾಂಶ್ ಶೆಡ್ಜ್, ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಮೋಹಿತ್ ಅವಸ್ತಿ, ಸಿಲ್ವೆಸ್ಟರ್ ಡಿ' ರಾಯ್ಸ್ಟನ್ ಡಯಾಸ್, ಶ್ರೇಯಸ್ ಗುರವ್, ಅಥರ್ವ ಅಂಕೋಲೆಕರ್.