Ranji Trophy: ಕರ್ನಾಟಕ ಮಾರಕ ದಾಳಿಗೆ ತತ್ತರಿಸಿದ ಉತ್ತರಾಖಂಡ: 116 ರನ್‌ಗಳಿಗೆ ಆಲೌಟ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮೇಲುಗೈ ಸಾಧಿಸಿದೆ. ಕರ್ನಾಟಕದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಉತ್ತರಾಖಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 116 ರನ್‌ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಮಯಾಂಕ್ ಅಗರ್ವಾಲ್ ನಿರ್ಧಾರಕ್ಕೆ ನ್ಯಾಯ ಒದಗಿಸುವಂತೆ ಬೌಲಿಂಗ್ ಮಾಡಿದರು. ಉತ್ತರಾಖಂಡದ ನಾಲ್ವರು ಬ್ಯಾಟರ್ ಮಾತ್ರ ಎರಡಂಕಿ ಸ್ಕೋರ್ ಗಳಿಸಿದರು.
ನಾಯಕ ಜೀವನ್ಜೋತ್ ಸಿಂಗ್ ಸಿಂಗ್ ಕೇವಲ 1 ರನ್‌ಗಳಿಗೆ ಔಟಾಗುವ ಮೂಲಕ ಉತ್ತರಾಖಂಡದ ಪತನ ಆರಂಭವಾಯಿತು. ಕುನಾಲ್ ಚಂಡೇಲಾ 31 ರನ್ ಗಳಿಸಿ ಉತ್ತರಾಖಂಡದ ಪರವಾಗಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು.
ಅವನೀಶ್ ಸುಧಾ 17, ಅಭಯ್ ನೇಗಿ 9, ಸ್ವಪ್ನಿಲ್ ಸಿಂಗ್ 0, ಆದಿತ್ಯ ತಾರೆ 14, ಅಖಿಲ್ ರಾವತ್ 14, ದಿಕ್ಷಾಂಶು ನೇಗಿ 1, ಮಯಾಂಕ್ ಮಿಶ್ರಾ 7, ದೀಪಕ್ ಧಪೋಲಾ 5 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಅಂತಿಮವಾಗಿ 55.4 ಓವರ್ ಗಳಲ್ಲಿ 116 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.

ಪದಾರ್ಪಣ ಪಂದ್ಯದಲ್ಲೇ ಮುರಳೀಧರ ವೆಂಕಟೇಶ್ ಮಿಂಚು
ಕರ್ನಾಟಕದ ಪರವಾಗಿ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಮುರಳೀಧರ ವೆಂಕಟೇಶ್ ಮಾರಕ ಬೌಲಿಂಗ್ ಮಾಡಿದರು. ಪ್ರಮುಖ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಉತ್ತರಾಖಂಡದ ಬ್ಯಾಟಿಂಗ್ ಪಡೆಯನ್ನು ಕಂಗೆಡಿಸಿದರು. ಇವರಿಗೆ ಅತ್ಯುತ್ತಮವಾಗಿ ಸಾಥ್ ನೀಡಿದ ವಿಧ್ವತ್ ಕಾವೇರಪ್ಪ ಮತ್ತು ಕೃಷ್ಣಪ್ಪ ಗೌತಮ್ ತಲಾ 2 ವಿಕೆಟ್ ಪಡೆದು ಮಿಂಚಿದರು. ವಿಜಯ್‌ಕುಮಾರ್ ವೈಶಾಕ್ 1 ವಿಕೆಟ್ ಪಡೆದುಕೊಂಡರು.
ಗುಂಪು ಹಂತದ ಪಂದ್ಯಗಳಲ್ಲಿ ಉಭಯ ತಂಡಗಳು ಸೋಲನ್ನು ಕಂಡಿರಲಿಲ್ಲ, ಕ್ವಾರ್ಟರ್ ಫೈನಲ್‌ನಲ್ಲಿ ಉಭಯ ತಂಡಗಳ ನಡುವೆ ಸಮಬಲದ ಹೋರಾಟ ನಿರೀಕ್ಷೆ ಮಾಡಲಾಗಿತ್ತಾದರೂ, ಕರ್ನಾಟಕದ ಮಾರಕ ಬೌಲಿಂಗ್ ದಾಳಿ ಮುಂದೆ ಉತ್ತರಾಖಂಡ ಮಂಡಿಯೂರಿದೆ.
ಉಭಯ ತಂಡಗಳ ಆಡುವ ಬಳಗ
ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್(ನಾಯಕ), ದೇವದತ್ ಪಡಿಕ್ಕಲ್, ಶರತ್ ಬಿಆರ್(ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಮನೀಶ್ ಪಾಂಡೆ, ನಿಕಿನ್ ಜೋಸ್, ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ವೆಂಕಟೇಶ್ ಎಂ.
ಉತ್ತರಾಖಂಡ: ಅಭಯ್ ನೇಗಿ, ಆದಿತ್ಯ ತಾರೆ, ಅಖಿಲ್ ರಾವತ್, ಅವನೀಶ್ ಸುಧಾ, ದೀಪಕ್ ಧಾಪೋಲಾ, ದೀಕ್ಷಾಂಶು ನೇಗಿ, ಜೀವನ್ಜೋತ್ ಸಿಂಗ್ (ನಾಯಕ), ಕುನಾಲ್ ಚಂಡೇಲಾ, ಮಯಾಂಕ್ ಮಿಶ್ರಾ, ನಿಖಿಲ್ ಕೊಹ್ಲಿ, ಸ್ವಪ್ನಿಲ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications