Ranji Trophy: ದೆಹಲಿ ಪರ ಕಣಕ್ಕೀಳಿಯಲಿರುವ ರಿಷಬ್ ಪಂತ್
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಟೆಸ್ಟ್ ಸರಣಿಗಳನ್ನು ಕಳೆದುಕೊಂಡ ನಂತರ ಭಾರತ ತಂಡ ಆಟಗಾರರು ಟೀಕೆಗೆ ಬಲಿಯಾಗುತ್ತಿದ್ದಾರೆ. ಬ್ಯಾಟರ್‌ಗಳ ಕಳಪೆ ಫಾರ್ಮ್ ಭಾರತ ತಂಡವನ್ನು ಹೆಚ್ಚು ತೊಂದರೆಗೀಡು ಮಾಡಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ ಆಟಗಾರರು ಸಾಧ್ಯವಾದಷ್ಟು ದೇಶಿ ಪಂದ್ಯಗಳನ್ನು ಆಡಬೇಕು ಎಂದು ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ. ಅದರ ಪರಿಣಾಮ ಟೀಮ್ ಇಂಡಿಯಾದ ಹಲವು ಸ್ಟಾರ್ ಆಟಗಾರರು ರಣಜಿ ಟ್ರೋಫಿಯಲ್ಲಿ ಆಡಲು ಸಿದ್ಧರಾಗಿದ್ದಾರೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಕಾರ್ಯದರ್ಶಿ ಅಶೋಕ್ ಶರ್ಮಾ ಮಾತನಾಡಿ, ಜನವರಿ 23 ರಿಂದ ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧ ದೆಹಲಿಯ ಮುಂಬರುವ ರಣಜಿ ಟ್ರೋಫಿ ಪಂದ್ಯಕ್ಕೆ ರಿಷಬ್ ಪಂತ್ ಲಭ್ಯವಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪಂತ್ ಕೊನೆಯ ಬಾರಿಗೆ 2017-2018 ರ ರಣಜಿ ಟ್ರೋಫಿಯಲ್ಲಿ ದೆಹಲಿಯನ್ನು ಪ್ರತಿನಿಧಿಸಿದ್ದರು.

ರಿಷಬ್ ಪಂತ್ 7 ವರ್ಷಗಳ ನಂತರ ತವರಿನ ತಂಡದ ಪರ ರಣಜಿ ಟ್ರೋಫಿಯಲ್ಲಿ ಆಡಲು ಉತ್ಸಾಹಕರಾಗಿದ್ದಾರೆ. ಇದರ ಮಧ್ಯೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದೆಹಲಿ ತಂಡದ ಪರ ಆಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಕೊಹ್ಲಿ ತಮ್ಮ ಕೊನೆಯ ರಣಜಿ ಪಂದ್ಯವನ್ನು 2012 ರಲ್ಲಿ ಆಡಿದ್ದರು.
ಖಚಿತಪಡಿಸಿದ ಪಂತ್
ರಿಷಬ್ ಪಂತ್ ಅವರು ರಣಜಿ ಟ್ರೋಫಿಯಲ್ಲಿ ದೆಹಲಿ ಪರ ಆಡುವುದನ್ನು ಖಚಿತಪಡಿಸಿದ್ದಾರೆ. ನೇರವಾಗಿ ರಾಜ್‌ಕೋಟ್‌ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ಕೂಡ ಆಡಬೇಕೆಂದು ನಾವು ಬಯಸುತ್ತೇವೆ. ಆದರೆ ನಮಗೆ ಅವರ ಪ್ರತಿಕ್ರಿಯೆ ಬಂದಿಲ್ಲ. ಹರ್ಷಿತ್ ರಾಣಾ ಭಾರತ ಟಿ20 ತಂಡದಲ್ಲಿ ಆಯ್ಕೆಯಾಗಿದ್ದಾರೆ. ವಿಶೇಷವಾಗಿ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ರೋಹಿತ್ ಶರ್ಮಾ ಮತ್ತು ಕೊಹ್ಲಿ ದೇಶೀಯ ಕ್ರಿಕೆಟ್ ಅನ್ನು ಆಡುತ್ತಾರೆ ಎಂದು ಅಶೋಕ್ ಶರ್ಮಾ ಹೇಳಿದ್ದಾರೆ.
ಮುಂಬೈ ಪರ ಯಶಸ್ವಿ-ರೋಹಿತ್?
ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ ಮುಂಬೈ ಪರ ಆಡುವ ನಿರೀಕ್ಷೆ ಇದೆ. ರೋಹಿತ್ ಮಂಗಳವಾರ ಮುಂಬೈ ತಂಡದೊಂದಿಗೆ ತರಬೇತಿ ಆರಂಭಿಸುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಜನವರಿ 23 ರಿಂದ ಪ್ರಾರಂಭವಾಗುವ ಮುಂದಿನ ಸುತ್ತಿನ ರಣಜಿ ಟ್ರೋಫಿ ಪಂದ್ಯಗಳಿಗೆ ಅವರು ಲಭ್ಯವಾಗುತ್ತಾರೆಯೇ? ಎಂಬುದು ಪ್ರಶ್ನೆಯಾಗಿದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಅವರಂತಹ ಸ್ಟಾರ್ ಆಟಗಾರರನ್ನು ಸಂಭಾವ್ಯರ ಪಟ್ಟಿಯಲ್ಲಿ ಸೇರಿಸುವುದು ಸಹಜ. ಆದರೆ ಅಂತಿಮ ತಂಡದಲ್ಲಿ ಅವರ ಸೇರ್ಪಡೆ ಅವರ ಲಭ್ಯತೆಯ ಮೇಲೆ ಅವಲಂಬಿತವಾಗಿದೆ.
ಶುಭಮನ್ ಗಿಲ್ ಕೂಡ ಜನವರಿ 23 ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ವಿರುದ್ಧದ ಆರನೇ ಸುತ್ತಿನ ರಣಜಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ಪರ ಆಡಲಿದ್ದಾರೆ. ಆದರೆ, ಪಂಜಾಬ್ ತಂಡವನ್ನು ಇನ್ನೂ ಪ್ರಕಟಿಸಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications