ರವಿಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಸ್ಥಾನವನ್ನು ಬಿಟ್ಟುಕೊಡ್ತಾರಾ? ಬಿಸಿಸಿಐ ಅಧಿಕಾರಿಗಳು ಹೇಳಿದ್ದಿಷ್ಟು

ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಸದ್ಯ ಟೀಮ್ ಇಂಡಿಯಾದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಇವರ ಸೇವೆಯ ಅವಧಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಪಂದ್ಯಾವಳಿ ಮುಗಿದ ನಂತರ ಅಂತ್ಯಗೊಳ್ಳಲಿದೆ.
ಹೀಗಾಗಿ ರವಿಶಾಸ್ತ್ರಿ ಅವರ ಅವಧಿ ಮುಗಿದ ನಂತರ ಯಾರು ಟೀಮ್ ಇಂಡಿಯಾ ಪ್ರಮುಖ ಕೋಚ್ ಆಗಿ ಆಯ್ಕೆಯಾಗಲಿದ್ದಾರೆ ಎಂಬುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಹಲವಾರು ಹೆಸರುಗಳು ಕೇಳಿಬರುತ್ತಿವೆ. ಇತ್ತೀಚಿಗಷ್ಟೆ ರವಿಶಾಸ್ತ್ರಿ ಅವರು ಟಿ ಟ್ವೆಂಟಿ ವಿಶ್ವಕಪ್ ಮುಗಿದ ಬಳಿಕ ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದು ಅವರಿಗೆ ಟೀಮ್ ಇಂಡಿಯಾ ಕೋಚ್ ಆಗಿ ಮುಂದುವರಿಯುವುದು ಇಷ್ಟವಿಲ್ಲ ಎಂಬ ಮಾತುಗಳು ಹರಿದಾಡುತ್ತಿದ್ದವು. ಆದರೆ ಇದೀಗ ಈ ಕುರಿತು ಬಿಸಿಸಿಐನ ಅಧಿಕಾರಿಯೊಬ್ಬರು ಸಂದರ್ಶನವೊಂದರಲ್ಲಿ ಮಾತನಾಡಿದ್ದು ರವಿಶಾಸ್ತ್ರಿ ಅವರು ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿಯುವುದರ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಬಿಸಿಸಿಐನ ಅಧಿಕಾರಿಯೊಬ್ಬರ ಪ್ರಕಾರ ರವಿಶಾಸ್ತ್ರಿ ಅವರಿಗೆ ಟೀಮ್ ಇಂಡಿಯಾ ಕೋಚ್ ಆಗಿ ಇನ್ನೊಂದಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಲು ಇಷ್ಟವಿದೆಯಂತೆ. ಹೌದು, ರವಿಶಾಸ್ತ್ರಿ ಅವರು ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿಯಲು ಇಷ್ಟಪಡುತ್ತಿಲ್ಲ ಎಂದು ಬಿಸಿಸಿಐನ ಅಧಿಕಾರಿಯೇ ಸ್ವತಃ ಹೇಳಿಕೆ ನೀಡಿದ್ದಾರೆ. ಹಾಗೂ ಕೋಚ್ ಬದಲಾವಣೆಯ ಕುರಿತು ಬಿಸಿಸಿಐ ತನ್ನ ಎಲ್ಲ ಸಿಬ್ಬಂದಿ ವರ್ಗದಿಂದಲೂ ಅಭಿಪ್ರಾಯವನ್ನು ಪಡೆದುಕೊಳ್ಳುತ್ತದೆ ಎನ್ನಲಾಗುತ್ತಿದೆ. ಹೀಗೆ ಕೋಚ್ ಸ್ಥಾನದಿಂದ ಕೆಳಗಿಳಿಯುವ ಯೋಜನೆ ಸದ್ಯಕ್ಕೆ ರವಿಶಾಸ್ತ್ರಿ ಅವರಿಗಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ರವಿಶಾಸ್ತ್ರಿ ಕೋಚ್ ಆಗಿ ಮುಂದುವರಿಯುವುದು ಟಿ ಟ್ವೆಂಟಿ ವಿಶ್ವಕಪ್ ಮೇಲೆ ನಿಂತಿದೆ
ಅಕ್ಟೋಬರ್ 17 ರಿಂದ ಬಹುನಿರೀಕ್ಷಿತ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿ ಟ್ರೋಫಿ ವಿಜೇತರಾದರೆ ರವಿಶಾಸ್ತ್ರಿ ಇನ್ನಷ್ಟು ದಿನ ಟೀಮ್ ಇಂಡಿಯಾ ಕೋಚ್ ಆಗಿ ಮುಂದುವರಿಯುವುದು ಖಚಿತ. 2019 ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಹಂತದಲ್ಲಿ ಹೊರಬಿದ್ದ ನಂತರ ರವಿಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಕೂಗು ಕೊಂಚಮಟ್ಟದಲ್ಲಿ ಕೇಳಿಬಂದಿತ್ತು. ಆದರೆ ನಂತರ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಟೀಮ್ ಇಂಡಿಯಾ ತೋರಿದ ಅತ್ಯುತ್ತಮ ಪ್ರದರ್ಶನದ ಮುಂದೆ ಆ ಕೂಗುಗಳು ಸದ್ದಿಲ್ಲದೆ ಮರೆಯಾಗಿ ಹೋದವು. ಹೀಗಾಗಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದರೆ ಮತ್ತೊಂದಿಷ್ಟು ದಿನ ರವಿಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಆಗಿ ಮುಂದುವರಿಯಲಿದ್ದಾರೆ ಎನ್ನಬಹುದು.

ರವಿಶಾಸ್ತ್ರಿ ನಂತರ ಕೋಚ್ ಸ್ಥಾನದ ಮೇಲೆ ಕಣ್ಣಿಟ್ಟಿರುವವರು
ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ರವಿಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿದರೆ ಆ ಸ್ಥಾನಕ್ಕೆ ಯಾರು ಆಯ್ಕೆಯಾಗಬಹುದು ಎಂಬ ಚರ್ಚೆಗಳು ಸಾಕಷ್ಟು ನಡೆಯುತ್ತಿವೆ. ಈಗಾಗಲೇ ವಿರೇಂದ್ರ ಸೆಹ್ವಾಗ್, ವಿಕ್ರಂ ರಾಥೋರ್ ಮತ್ತು ಲಾಲ್‌ಚಂದ್ ರಜಪೂತ್ ಈ ಮೂವರ ಹೆಸರುಗಳು ಮುಂದಿನ ಟೀಮ್ ಇಂಡಿಯಾದ ಕೋಚ್ ಸ್ಥಾನಕ್ಕೆ ಕೇಳಿಬರುತ್ತಿವೆ.

ದ್ರಾವಿಡ್ ಕೋಚ್ ಆಗುವುದಿಲ್ಲ
ರವಿಶಾಸ್ತ್ರಿ ನಂತರ ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಈ ಕೆಲ ತಿಂಗಳ ಹಿಂದೆ ಸುದ್ದಿ ಹರಿದಾಡುತ್ತಿತ್ತು. ಆದರೆ ಇದೀಗ ಈ ಬಿಸಿಸಿಐ ಅಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ ರಾಹುಲ್ ದ್ರಾವಿಡ್ ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾ ಕೋಚ್ ಸ್ಥಾನವನ್ನು ಅಲಂಕರಿಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications