
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲನೇ ಟೆಸ್ಟ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಉಭಯ ತಂಡಗಳು ಈಗ ಗೆಲ್ಲುವ ಹಠಕ್ಕೆ ಬಿದ್ದಿದ್ದು, ರಣತಂತ್ರ ರೂಪಿಸುತ್ತಿವೆ.
ಭಾರತದ ಸ್ಪಿನ್ ದಾಳಿಯನ್ನು ಎದುರಿಸಲು ಆಸ್ಟ್ರೇಲಿಯಾ ಭಾರತದ ಯುವ ಸ್ಪಿನ್ನರ್ ಗಳನ್ನು ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಕೇಳಿಕೊಂಡಿತ್ತು. ಬರೋಡಾದ 21 ವರ್ಷದ ಯುವ ಬೌಲರ್ ಮಹೇಶ್ ಪಿಥಿಯಾ ಆಲೂರಿನಲ್ಲಿ ಆಸ್ಟ್ರೇಲಿಯಾ ತಂಡದ ನೆಟ್ ಬೌಲರ್ ಆಗಿದ್ದರು.
ರವಿಚಂದ್ರನ್ ಅಶ್ವಿನ್‌ರಂತೆಯೇ ಬೌಲಿಂಗ್ ಮಾಡುವುದು ಮಹೇಶ್ ಪಿಥಿಯಾ ವಿಶೇಷತೆ. ಅಶ್ವಿನ್‌ರನ್ನು ನೋಡಿಯೇ ಪಿಥಿಯಾ ಬೌಲಿಂಗ್ ಕಲಿತದ್ದು ಎಂದು ಹೇಳಿದ್ದಾರೆ. ಅಶ್ವಿನ್ ವಿರುದ್ಧ ಆಡಲು ಅನುಕೂಲವಾಗಲು ಆಸ್ಟ್ರೇಲಿಯಾ ಆಟಗಾರರು ಹೆಚ್ಚಿನ ಅಭ್ಯಾಸ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಅಭ್ಯಾಸ ಮುಗಿದ ಬಳಿಕ ಮಹೇಶ್ ಪಿಥಿಯಾ ಆಸ್ಟ್ರೇಲಿಯಾ ತಂಡದ ಜೊತೆ ನಾಗ್ಪುರಕ್ಕೆ ಪ್ರಯಾಣಿಸಿದ್ದಾರೆ.
ನಾಗ್ಪುರದಲ್ಲಿ ಅಭ್ಯಾಸದ ವೇಳೆ ಮಹೇಶ್ ಪಿಥಿಯಾ ರವಿಚಂದ್ರನ್ ಅಶ್ವಿನ್ ಮತ್ತು ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಮಹೇಶ್ ಪಿಥಿಯಾ ಅಶ್ವಿನ್ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಅಶ್ವಿನ್ ಕೂಡ ಯುವ ಕ್ರಿಕೆಟಿಗನನ್ನು ಅಪ್ಪಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ.

ಬೌಲಿಂಗ್ ಗುಟ್ಟು ತಿಳಿದುಕೊಂಡ ಅಶ್ವಿನ್
ಅಶ್ವಿನ್‌ರನ್ನು ಭೇಟಿಯಾದ ಬಗ್ಗೆ ಮಹೇಶ್ ಪಿಥಿಯಾ ಸಂತಸ ವ್ಯಕ್ತಪಡಿಸಿದ್ದಾರೆ. "ಇಂದು ನಾನು ನನ್ನ ಆರಾಧ್ಯ ದೈವದ ಆಶೀರ್ವಾದ ಪಡೆದಿದ್ದೇನೆ. ಯಾವಾಗಲೂ ಅವರಂತೆಯೇ ಬೌಲಿಂಗ್ ಮಾಡಲು ಬಯಸುತ್ತೇನೆ. ಅವರು ನೆಟ್ಸ್‌ಗೆ ಪ್ರವೇಶಿಸುತ್ತಿದ್ದಂತೆ ನಾನು ಅವರನ್ನು ಭೇಟಿಯಾದಾಗ, ನಾನು ಅವರ ಕಾಲಿಗೆ ಬಿದ್ದು ಆಶೀರ್ವಾದ ಕೋರಿದೆ. ಅವರು ನನ್ನನ್ನು ತಬ್ಬಿಕೊಂಡರು ಮತ್ತು ನೆಟ್ಸ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರಿಗೆ ನೆಟ್ಸ್‌ನಲ್ಲಿ ಹೇಗೆ ಬೌಲಿಂಗ್ ಮಾಡುತ್ತಿದ್ದೇನೆ ಎನ್ನುವ ಬಗ್ಗೆ ಕೇಳಿದರು. ವಿರಾಟ್ ಕೊಹ್ಲಿ ಕೂಡ ನನ್ನನ್ನು ನೋಡಿ ಮುಗುಳ್ನಗುತ್ತಾ ಹೆಬ್ಬೆರಳು ತೋರಿಸಿ ಶುಭಹಾರೈಸಿದರು" ಎಂದು ಪಿಥಿಯಾ ಹೇಳಿದ್ದಾರೆ.
ಸ್ಮಿತ್‌ಗೆ ಬೌಲಿಂಗ್ ಮಾಡಿದ ಬಗ್ಗೆ ಮಹೇಶ್ ಪಿಥಿಯಾ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಸ್ಪಿನ್ ವಿರುದ್ಧ ಆಡಲು ಆಸ್ಟ್ರೇಲಿಯಾ ಹೇಗೆಲ್ಲ ಸಿದ್ಧತೆ ಮಾಡಿಕೊಂಡಿದೆ ಎನ್ನುವುದರ ಅಂದಾಜು ಈಗ ಅಶ್ವಿನ್‌ಗೆ ಸಿಕ್ಕಿದೆ. ಸ್ಮಿತ್ ಮತ್ತು ಉಳಿದ ಬ್ಯಾಟರ್ ಗಳ ವಿರುದ್ಧ ಅಶ್ವಿನ್ ಏನೆಲ್ಲಾ ರಣತಂತ್ರ ಮಾಡ್ತಾರೆ ಅನ್ನೋದು ನಾಗ್ಪುರ ಟೆಸ್ಟ್‌ನಲ್ಲಿ ತಿಳಿಯಲಿದೆ. ಫೆಬ್ರವರಿ 9ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಆರಂಭವಾಗಲಿದೆ.