ಟೀಮ್ ಇಂಡಿಯಾ ಜೊತೆ ಇಂಗ್ಲೆಂಡ್‌ಗೆ ಹಾರಿಲ್ಲ ಅಶ್ವಿನ್; ಪ್ರಮುಖ ಆಟಗಾರನನ್ನು ಬಿಟ್ಟು ಹೋಗಲು ಕಾರಣವಿದು

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ನಂತರ ಭಾರತ ಪ್ರವಾಸವನ್ನು ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸಿದ ಟೀಮ್ ಇಂಡಿಯಾ ತನ್ನ ಮುಂದಿನ ಅಂತರರಾಷ್ಟ್ರೀಯ ಸರಣಿಗಳಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.
ಐರ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ ಇದೇ ತಿಂಗಳ ಅಂತ್ಯದಲ್ಲಿ ಜರುಗಲಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಮ್ ಇಂಡಿಯಾ ಈ ಸರಣಿಗಾಗಿ ಐರ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದ್ದರೆ, ರೋಹಿತ್ ಶರ್ಮಾ ನಾಯಕತ್ವದ ಮತ್ತೊಂದು ಭಾರತ ತಂಡ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು ಕಳೆದ ವರ್ಷದಿಂದ ಮುಂದೂಡಲ್ಪಟ್ಟಿರುವ ಒಂದು ಟೆಸ್ಟ್ ಪಂದ್ಯ ಹಾಗೂ ಈ ಬಾರಿ ಆಯೋಜನೆಯಾಗಿರುವ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಆಂಗ್ಲರ ವಿರುದ್ಧ ಸೆಣಸಾಟ ನಡೆಸಲಿದೆ.
ಹೌದು, ಕಳೆದ ವರ್ಷ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿ 4 ಪಂದ್ಯಗಳು ಮುಕ್ತಾಯವಾದ ನಂತರ 2-1 ಅಂತರದ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಸರಣಿಯ ಅಂತಿಮ ಪಂದ್ಯ ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟು ಈ ವರ್ಷ ಆಯೋಜನೆಯಾಗಿದೆ. ಇನ್ನು ಈ ಮಹತ್ವದ ಪಂದ್ಯದಲ್ಲಿ ಕಣಕ್ಕಿಳಿಯಲು ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ಹೊರಗುಳಿದು ವಿಶ್ರಾಂತಿ ಪಡೆದಿದ್ದ ಎಲ್ಲಾ ಆಟಗಾರರು ಈಗಾಗಲೇ ಇಂಗ್ಲೆಂಡ್ ತಲುಪಿದ್ದು, ತಂಡದ ಪ್ರಮುಖ ಆಟಗಾರನಾದ ರವಿಚಂದ್ರನ್ ಅಶ್ವಿನ್ ಮಾತ್ರ ಇಂಗ್ಲೆಂಡ್ ಪ್ರಯಾಣವನ್ನು ಬೆಳೆಸದೇ ತವರಿನಲ್ಲಿಯೇ ಉಳಿದಿದ್ದಾರೆ. ಅಷ್ಟಕ್ಕೂ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ಪ್ರವಾಸ ಕೈಗೊಳ್ಳದೇ ತವರು ನೆಲದಲ್ಲಿಯೇ ಉಳಿಯಲು ಕಾರಣವೇನು ಎಂಬುದರ ಕುರಿತ ಮಾಹಿತಿ ಮುಂದಿದೆ ಓದಿ..

ಅಶ್ವಿನ್ ಕೊವಿಡ್ ಪಾಸಿಟಿವ್
ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣದಿಂದಾಗಿ ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳದೇ ಸದ್ಯ ಕ್ವಾರಂಟೈನ್ ನಿಯಮವನ್ನು ಅನುಸರಿಸುತ್ತಿದ್ದಾರೆ ಎಂದು ಬಿಸಿಸಿಐನ ಮೂಲಗಳು ಪಿಟಿಐಗೆ ತಿಳಿಸಿವೆ. ಪ್ರವಾಸ ಕೈಗೊಳ್ಳುವ ಸನಿಹದಲ್ಲಿ ರವಿಚಂದ್ರನ್ ಅಶ್ವಿನ್ ಕೋವಿಡ್ ವರದಿ ಪಾಸಿಟಿವ್ ಬಂದಿದೆ.

ಅಭ್ಯಾಸ ಪಂದ್ಯಕ್ಕೆ ಅಶ್ವಿನ್ ಅಲಭ್ಯ
ಇನ್ನು ಜುಲೈ 1ರಿಂದ 5ರವರೆಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಆ ಸಮಯಕ್ಕೆ ರವಿಚಂದ್ರನ್ ಅಶ್ವಿನ್ ಚೇತರಿಕೆ ಕಂಡು ತಂಡ ಸೇರಲಿದ್ದಾರೆ ಎಂಬ ಭರವಸೆ ಇದೆ. ಆದರೆ, ಇದಕ್ಕೂ ಮುನ್ನ ಜೂನ್ 24ರಿಂದ ನಡೆಯಲಿರುವ ಅಭ್ಯಾಸ ಪಂದ್ಯಕ್ಕೆ ಅಶ್ವಿನ್ ಅಲಭ್ಯರಾಗುವುದು ಖಚಿತವಾಗಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಪ್ರಕಟವಾಗಿರುವ ತಂಡ ಹಾಗೂ ಪ್ರವಾಸದ ವೇಳಾಪಟ್ಟಿ
ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ
ವೇಳಾಪಟ್ಟಿ:
• ಐದನೇ ಟೆಸ್ಟ್ ಪಂದ್ಯ ( ಮುಂದೂಡಲ್ಪಟ್ಟ ) - ಜುಲೈ 1 - 5: ಬರ್ಮಿಂಗ್ ಹ್ಯಾಮ್
• ಪ್ರಥಮ ಟಿ ಟ್ವೆಂಟಿ ಪಂದ್ಯ - ಜುಲೈ 7 - ಸೌತಾಂಪ್ಟನ್
• ದ್ವಿತೀಯ ಟಿ ಟ್ವೆಂಟಿ ಪಂದ್ಯ - ಜುಲೈ 9 - ಬರ್ಮಿಂಗ್ ಹ್ಯಾಮ್
• ತೃತೀಯ ಟಿ ಟ್ವೆಂಟಿ ಪಂದ್ಯ - ಜುಲೈ 10 - ನಾಟಿಂಗ್ ಹ್ಯಾಮ್
• ಪ್ರಥಮ ಏಕದಿನ ಪಂದ್ಯ - ಜುಲೈ 12 - ಓವಲ್
• ದ್ವಿತೀಯ ಏಕದಿನ ಪಂದ್ಯ - ಜುಲೈ 14 - ಲಾರ್ಡ್ಸ್
• ತೃತೀಯ ಏಕದಿನ ಪಂದ್ಯ - ಜುಲೈ 17 - ಮ್ಯಾಂಚೆಸ್ಟರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications