ಭಾರತ ತಂಡದ ಕುರಿತ ಮೈಕಲ್ ವಾನ್ ಹೇಳಿಕೆಗೆ 'ಬೆಂಕಿ' ಉತ್ತರ ಕೊಟ್ಟ ರವಿಚಂದ್ರನ್ ಅಶ್ವಿನ್!
ಇತ್ತೀಚಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಟೆಸ್ಟ್ ತಂಡವು ನಿರೀಕ್ಷಿಸಿದ ರೀತಿಯ ಫಲಿತಾಂಶವನ್ನು ಕಾಣಲು ಸಾಧ್ಯವಾಗಲಿಲ್ಲ. ಏಕೆಂದರೆ ರೋಹಿತ್ ಶರ್ಮಾ ನಾಯಕತ್ವದ ತಂಡವು ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿತು. ಹೀಗಾಗಿ ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ದೊಡ್ಡ ಅವಕಾಶವನ್ನು ಹಾಳುಮಾಡಿಕೊಂಡಿತು.
ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನವು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅವರು ಭಾರತವನ್ನು ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ "ಕಡಿಮೆ ಸಾಧಿಸುವ ತಂಡ'ವೆಂದು ಬ್ರಾಂಡ್ ಮಾಡಲು ಪ್ರೇರೇಪಿಸಿತು.

ಮೈಕಲ್ ವಾನ್ ಅವರ ಈ ಕಾಮೆಂಟ್ ಕೆಲವು ಭಾರತೀಯ ಮಾಜಿ ಕ್ರಿಕೆಟಿಗರು ಅವರ ಹೇಳಿಕೆಗಳನ್ನು ಪ್ರತಿಧ್ವನಿಸುವಂತೆ ಮಾಡಿತು. ಆದರೆ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದಕ್ಕೆ ಖಡಕ್ ಆಗಿ ಪ್ರತ್ಯುತ್ತರ ನೀಡಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್‌ನ ವಿಡಿಯೋದಲ್ಲಿ ರವಿಚಂದ್ರನ್ ಅಶ್ವಿನ್ ತಿರುಗೇಟು ನೀಡಿದ್ದು, ಭಾರತ ತಂಡವು ವಿಶ್ವ ಕ್ರಿಕೆಟ್‌ನಲ್ಲಿ, ವಿಶೇಷವಾಗಿ ಟೆಸ್ಟ್ ಸ್ವರೂಪದಲ್ಲಿ ಎಷ್ಟು ಉತ್ತಮ ಸಾಧನೆ ಮಾಡಿದೆ ಎಂಬುದನ್ನು ಪರಿಗಣಿಸಿ ಇಂತಹ ಹೇಳಿಕೆಗಳು ತಮ್ಮನ್ನು 'ನಗುವಂತೆ ಮಾಡಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
"ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ ಮೈಕಲ್ ವಾನ್ ಹೇಳಿಕೆ ನೀಡಿದ್ದು, ಭಾರತ ಕಳಪೆ ಸಾಧನೆ ಮಾಡುವ ತಂಡವಾಗಿದೆ. ಹೌದು, ನಾವು ದಶಕದಿಂದ ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ. ನಾವು ನಮ್ಮನ್ನು ಕ್ರಿಕೆಟ್‌ನ ಶಕ್ತಿ ಕೇಂದ್ರವೆಂದು ಕರೆಯುತ್ತೇವೆ. ಆದರೆ ಟೆಸ್ಟ್ ತಂಡವು ಅತ್ಯುತ್ತಮ ಪ್ರವಾಸಿ ತಂಡಗಳಲ್ಲಿ ಒಂದಾಗಿದೆ. ನಾವು ಅನೇಕ ಉತ್ತಮ ಫಲಿತಾಂಶಗಳನ್ನು ಕಂಡಿದ್ದೇವೆ," ಎಂದು ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಿಳಿಸಿದರು.
"ಮೈಕಲ್ ವಾನ್ ಹೇಳಿದ ನಂತರ, ನಮ್ಮದೇ ದೇಶದ ಅನೇಕ ಕ್ರಿಕೆಟ್ ಪರಿಣಿತರು ಭಾರತವು ಕಳಪೆ ತಂಡವೇ ಎಂದು ಪ್ರಶ್ನಿಸಲು ಪ್ರಾರಂಭಿಸಿದರು. ನನಗೆ ನಾನೇ ನಗು ತರಿಸಿಕೊಂಡೆ. ನೀವೇ ಊಹಿಸಿಕೊಳ್ಳಿ, ಪರಿಸ್ಥಿತಿಯನ್ನು ರಿವರ್ಸ್ ಮಾಡಿ ನೋಡಿ. ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನಂತರ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿತು".

"ಅದೇ ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿದ್ದರೆ, 65 ರನ್‌ಗಳಿಗೆ ಆಲೌಟ್ ಆಗುವ ಅವಕಾಶ ಇರಲಿಲ್ಲವೇ? ಭಾರತ ಕೂಡ 20 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಪರಿಸ್ಥಿರಿಯಲ್ಲಿತ್ತು. ಭಾರತ ತಂಡವನ್ನು ರಕ್ಷಿಸಲು ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಜೊತೆಯಾಟ ನೆರವಾಯಿತು," ಎಂದು ಆರ್ ಅಶ್ವಿನ್ ಹೇಳಿದರು.
"ಹೀಗಾಗಿ, ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ಎರಡನ್ನೂ ಉತ್ತಮ ಅಂತರದಿಂದ ಪ್ರತ್ಯೇಕಿಸಬೇಕಿದೆ. ಭಾರತ ದೇಶದ ಪ್ರತಿ ಮೂಲೆ ಮೂಲೆಯಲ್ಲಿ ನಾವು ಕ್ರಿಕೆಟ್ ಬಗ್ಗೆ ಮಾತನಾಡುತ್ತೇವೆ ಮತ್ತು ಕ್ರಿಕೆಟ್ ಅನ್ನು ಧರ್ಮವೆಂದು ಪರಿಗಣಿಸುತ್ತೇವೆ. ನಾವು ಟೀಕಿಸುತ್ತೇವೆ, ಅತಿಯಾಗಿ ಕೆಣಕುತ್ತೇವೆ ಮತ್ತು ಅನಗತ್ಯ ವಿವರಗಳನ್ನು ಪಡೆಯುತ್ತೇವೆ. ಇವು ನಮ್ಮನ್ನು ಕುರುಡರನ್ನಾಗಿಸುತ್ತಿವೆ ಎಂದು ನಾನು ಭಾವಿಸುತ್ತೇನೆ," ಎಂದು ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಿಡಿಕಾರಿದರು.
ಫಾಕ್ಸ್ ಸ್ಪೋರ್ಟ್ಸ್‌ನಲ್ಲಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಅವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಮೈಕಲ್ ವಾನ್, "ಇತ್ತೀಚಿನ ದಿನಗಳಲ್ಲಿ ಭಾರತ ಹೆಚ್ಚಿನದನ್ನು ಗೆದ್ದಿಲ್ಲ. ಅವರು ಕಡಿಮೆ ಸಾಧಿಸುವ ತಂಡ ಎಂದು ನಾನು ಭಾವಿಸುತ್ತೇನೆ. ಅವರು ಏನನ್ನೂ ಗೆಲ್ಲುವುದಿಲ್ಲ. ಅವರು ಕೊನೆಯ ಬಾರಿಗೆ ಏನನ್ನಾದರೂ ಗೆದ್ದದ್ದು ಯಾವಾಗ? ಅವರಲ್ಲಿರುವ ಎಲ್ಲಾ ಕೌಶಲ್ಯವಿರುವ ಪ್ರತಿಭೆಗಳೊಂದಿಗೆ ಹೆಚ್ಚಿನದನ್ನು ಸಾಧಿಸಬೇಕಾಗಿತ್ತು," ಎಂದು ಹೇಳಿದ್ದರು.
ಭಾರತ ತಂಡವು ಸತತ ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳಲ್ಲಿ ಸೋತಿದೆ ಎಂದು ರವಿಚಂದ್ರನ್ ಅಶ್ವಿನ್ ಒಪ್ಪಿಕೊಂಡರು. ಆದರೆ, ಕ್ರಿಕೆಟ್‌ನ ದೀರ್ಘ ಸ್ವರೂಪದಲ್ಲಿ ವಿದೇಶಿ ಸರಣಿಗಳಿಗೆ ಬಂದಾಗ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಸಮರ್ಥಿಸಿಕೊಂಡರು.
"ನಾವು ಅರ್ಥಮಾಡಿಕೊಳ್ಳಬೇಕಾದ ಸಂಗತಿಯೆಂದರೆ, ಉತ್ತಮ ಮಾನಸಿಕ ಸ್ಥೈರ್ಯ ಮತ್ತು ಮಾನಸಿಕ ಕೌಶಲ್ಯ ಹೊಂದಿರುವ ಗುಣಮಟ್ಟದ ಕ್ರಿಕೆಟ್ ತಂಡವು ಎಲ್ಲಿದ್ದರೂ ಪುನರಾಗಮನ ಮಾಡಬಹುದು ಮತ್ತು ಭಾರತ ತಂಡವು ಅದನ್ನು ಮತ್ತೆ ಮತ್ತೆ ಸಾಬೀತುಪಡಿಸಿದೆ. ಹೌದು, ನಾವು ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳನ್ನು ಸೋತಿದ್ದೇವೆ. ನಾನು ಅದನ್ನು ಪೂರ್ಣ ಹೃದಯದಿಂದ ಸ್ವೀಕರಿಸುತ್ತೇನೆ. ಆದರೆ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಯಾವಾಗಲೂ ಪುನರಾಗಮನ ಮಾಡಿದೆ," ಎಂದು ತಿರುಗೇಟು ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications