ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತ ಪುಣೆ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಕಂಡಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 1-0 ಮುನ್ನಡೆ ಸಾಧಿಸಿದೆ.
ಪುಣೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ಮಧ್ಯಾಹ್ನ ಊಟದ ಸಮಯಕ್ಕೆ 2 ವಿಕೆಟ್ ಕಳೆದುಕೊಂಡು 92 ರನ್ ಗಳಿಸಿದೆ. ನಾಯಕ ಟಾಮ್ ಲ್ಯಾಥಮ್ (15) ಮತ್ತು ವಿಲ್ ಯಂಗ್ (18) ಔಟಾಗಿದ್ದಾರೆ. ಕ್ರೀಸ್‌ನಲ್ಲಿ ಡೆವೊನ್ ಕಾನ್ವೇ (45) ಹಾಗು ರಚಿನ್ ರವೀಂದ್ರ (5) ಅಜೇಯರಾಗಿ ಉಳಿದಿದ್ದಾರೆ. ಭಾರತದ ಪರ ರವಿಚಂದ್ರನ್ ಅಶ್ವಿನ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ 2 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಶ್ವಿನ್ ಹೊರೆತುಪಡಿಸಿ ಭಾರತದ ಉಳಿದ ಬೌಲರ್‌ಗಳು ಜವಾಬ್ದಾರಿಯುವ ಬೌಲಿಂಗ್ ದಾಳಿ ಮಾಡುತ್ತಿದ್ದಾರೆ.

ನ್ಯೂಜಿಲೆಂಡ್‌ನ ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ದಾಖಲೆ ಮಾಡಿದ್ದಾರೆ. ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಅವರನ್ನು ಹಿಂದಿಕ್ಕಿದ್ದಾರೆ.
ಡಬ್ಲ್ಯೂಟಿಸಿ ಇತಿಹಾಸದಲ್ಲಿ ನಾಥನ್ ಲಿಯಾನ್ 43 ಟೆಸ್ಟ್ ಪಂದ್ಯಗಳಲ್ಲಿ 187 ವಿಕೆಟ್‌ಗಳನ್ನು ಪಡೆದಿದ್ದಾರೆ. ನಾಥನ್ ಲಿಯಾನ್ ಅವರನ್ನು ಹಿಂದಿಕ್ಕಲು ಅಶ್ವಿನ್ ಅವರಿಗೆ ಎರಡು ವಿಕೆಟ್‌ಗಳ ಅವಶ್ಯಕತೆಯಿತ್ತು. ಇದೀಗ ಪುಣೆ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಬ್ಯಾಟರ್‌ಗಳಾದ ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ಅವರನ್ನು ಔಟಾ ಮಾಡುವ ಮೂಲಕ ಅಶ್ವಿನ್ ಡಬ್ಲ್ಯೂಟಿಸಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದವರ ಪಟ್ಟಿಯಲ್ಲಿ ಆಗ್ರ ಸ್ಥಾನಕ್ಕೇರಿದ್ದಾರೆ.
ಇದಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ 530 ವಿಕೆಟ್‌ಗಳ ಗಡಿ ಮುಟ್ಟಿದ್ದಾರೆ. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 530 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಭಾರತದ ಪರ ಈ ದಾಖಲೆಯನ್ನು ಮಾಡಲು ಮಾಜಿ ದಿಗ್ಗಜ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರಿಂದ ಸಾಧ್ಯವಾಗಿತ್ತು. ಈಗ ಅನಿಲ್ ಕುಂಬ್ಳೆ ಅವರೊಂದಿಗೆ ಅಶ್ವಿನ್ ಕೂಡ ದಾಖಲೆ ಪಟ್ಟಿಯಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್ ಪಡೆದಿದ್ದಾರೆ.