R Ashwin: 750 ವಿಕೆಟ್ ಪಡೆದು ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟ ಅಶ್ವಿನ್
ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಗೆಲುವಿಗೆ ಟೀಮ್ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೊಡುಗೆ ಅಪಾರ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಹೊಡೆದು ತಂಡಕ್ಕೆ ಆಸರೆಯಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು.
ಅಶ್ವಿನ್ ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸಿ ಪ್ರವಾಸಿ ತಂಡದ ವಿರುದ್ಧ 280 ರನ್‌ಗಳ ಬೃಹತ್ ಗೆಲುವಿಗೆ ಕಾರಣರಾದರು. ಇದರೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 37ನೇ ಬಾರಿಗೆ ಇನ್ನಿಂಗ್ಸ್‌ವೊಂದರಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಶ್ರೇಷ್ಠ ದಾಖಲೆಯನ್ನು ಮಾಡಿದರು. ಈ ಭರ್ಜರಿ ಪ್ರದರ್ಶನಕ್ಕೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಯಶಸ್ಸಿನ ಗುಟ್ಟು
ಇದಾದ ಬಳಿಕ ತಮ್ಮ ಯಶಸ್ಸಿನ ಗುಟ್ಟಿನ ಬಗ್ಗೆ ಮಾತನಾಡಿರುವ ಅಶ್ವಿನ್, 'ಇದು ನನಗೆ ದೊಡ್ಡ ಸವಾಲಾಗಿತ್ತು. ನಾನು ಬಾಲ್ಯದಲ್ಲಿ ಹರ್ಭಜನ್ ಸಿಂಗ್ ಅವರ ಬೌಲಿಂಗ್ ಆಕ್ಷನ್ ಅನ್ನು ನಕಲು ಮಾಡುತ್ತಿದ್ದೆ. ಆದ್ದರಿಂದ ಅವರು ನನಗೆ ದೊಡ್ಡ ಸ್ಫೂರ್ತಿಯಾಗಿದ್ದರು. ಅವರ ಸ್ಥಾನದಲ್ಲಿ ನಾನು ತಂಡಕ್ಕೆ ಬಂದಾಗ, ನಾವಿಬ್ಬರೂ ಒಂದೇ ಸಮಯದಲ್ಲಿ ಒಟ್ಟಿಗೆ ಆಡುತ್ತೇವೆ ಎಂದು ನಾನು ಎಂದಿಗೂ ಯೋಚಿಸರಲಿಲ್ಲ. ಆದರೆ ಅದು ನಡೆದಿತ್ತು. ಐಪಿಎಲ್‌ನಿಂದ ನಾನು ಬಂದಿದ್ದರಿಂದ ನಾನು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಯಾವಾಗಲೂ ಅನುಮಾನವಿತ್ತು' ಎಂದು ಹೇಳಿದ್ದಾರೆ.
ಅಶ್ವಿನ್ ದಾಖಲೆ
ಚೆನ್ನೈ ಚೆಪಾಕ್ ಮೈದಾನದಲ್ಲಿ ಬಾಂಗ್ಲಾದೇಶ ತಂಡಕ್ಕೆ ಅಶ್ವಿನ್ ತಮ್ಮ ಸ್ಪಿನ್ ಮ್ಯಾಜಿಕ್ ತೋರಿಸಿದರು. ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್‌ನಲ್ಲಿ 88 ರನ್‌ಗಳಿಗೆ 6 ವಿಕೆಟ್ ಪಡೆದು ಟೀಮ್ ಇಂಡಿಯಾ ಗೆಲುವಿಗೆ ನೆರವಾದರು. ಇದರೊಂದಿಗೆ ಅವರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 750 ವಿಕೆಟ್ ಪೂರೈಸಿದರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಆಸ್ಟ್ರೇಲಿಯಾದ ಶೇನ್ ವಾರ್ನ್ ಮತ್ತು ಭಾರತದ ಅನಿಲ್ ಕುಂಬ್ಳೆ ನಂತರ ಈ ಸಾಧನೆ ಮಾಡಿದ ನಾಲ್ಕನೇ ಸ್ಪಿನ್ನರ್ ಎನಿಸಿಕೊಂಡರು.
ಇದಲ್ಲದೆ, ಅಶ್ವಿನ್ 37ನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡುವ ಮೂಲಕ ಶೇನ್ ವಾರ್ನ್ (37) ಅವರೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಮುತ್ತಯ್ಯ ಮುರಳೀಧರನ್ 67 ಬಾರಿ ಐದು ಪಡೆದು ಆಗ್ರ ಸ್ಥಾನದಲ್ಲಿದ್ದಾರೆ. ಜೊತೆಗೆ ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ ಅವರ 519 ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ. ಅಶ್ವಿನ್ ಈಗ 522 ಟೆಸ್ಟ್ ವಿಕೆಟ್‌ಗಳನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications