ಟೀಮ್ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡವುಣ ಮೊದಲ ಟೆಸ್ಟ್ ಪಂದ್ಯ ಅಹಮದಾಬಾದ್‌ನಲ್ಲಿ ಮುಕ್ತಾಯವಾಗಿದೆ. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ರವೀಂದ್ರ ಜಡೇಜಾ, ಕೆಎಲ್ ರಾಹುಲ್, ಧ್ರುವ್ ಜುರೇಲ್ ಶತಕ ಬಾರಿಸಿ ಮಿಂಚಿದ್ದಾರೆ. ಇನ್ನು ಎಲ್ಲರ ಚಿತ್ತ ಎರಡನೇ ಟೆಸ್ಟ್ ಮೇಲೆ ನೆಟ್ಟಿದೆ. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರು ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಶತಕ ಸಿಡಿಸಿದರು. ಇವರು ತಮ್ಮ ಈ ಅಮೋಘ ಫಾರ್ಮ್ ಮುಂದುವರೆಸಿದ್ದೇ ಆದಲ್ಲಿ ದೆಹಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ದೊಡ್ಡ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ. ಈಗಾಗಲೇ ಇವರು 300 ವಿಕೆಟ್ ಹಾಗೂ 6 ಶತಕ ಬಾರಿಸಿದ ವಿಶೇಷ ಕ್ಲಬ್ ಸೇರಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆಯನ್ನು ಈ ಮೊದಲು ಇಯಾನ್ ಬೋಥಮ್ (ಇಂಗ್ಲೆಂಡ್), ಕಪಿಲ್ ದೇವ್ (ಭಾರತ), ರವಿ ಅಶ್ವಿನ್ (ಭಾರತ), ಇಮ್ರಾನ್ ಖಾನ್ (ಪಾಕಿಸ್ತಾನ), ಮತ್ತು ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್) ಮಾತ್ರ ಈ ಸಾಧನೆ ಮಾಡಿದ್ದರು. ಈಗ ಈ ಸಾಲಿಗೆ ಜಡ್ಡು ಸೇರ್ಪಡೆ ಆಗಿದ್ದಾರೆ.

ನವದೆಹಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಡೇಜಾ 10 ರನ್ ಬಾರಿಸುವಲ್ಲಿ ಸಫಲರಾದಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಪೂರ್ಣಗೊಳಿಸಿದ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೂಲಕ 300 ವಿಕೆಟ್ ಹಾಗೂ ಟೆಸ್ಟ್‌ನಲ್ಲಿ 4 ಸಾವಿರ ರನ್ ಬಾರಿಸಿದ ಎರಡನೇ ಭಾರತೀಯ ಆಲ್‌ರೌಂಡರ್ ಎಂಬ ಹೆಗ್ಗಳಿಕೆ ಇವರದ್ದಾಗುತ್ತದೆ. ಈ ಅಪರೂಪದ ಸಾಧನೆಯನ್ನು ಪ್ರಸ್ತುತ ಕಪಿಲ್ ದೇವ್, ಇಯಾನ್ ಬೋಥಮ್ ಮತ್ತು ಡೇನಿಯಲ್ ವೆಟ್ಟೋರಿ ಮಾತ್ರ ಮಾಡಿದ್ದಾರೆ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಈಗಾಗಲೇ ಭಾರತದ ಪರ 86 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ವೇಳೆ 38.73ರ ಸರಾಸರಿಯಲ್ಲಿ 3990 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು 6 ಶತಕ, 27 ಅರ್ಧಶತಕ ಸಿಡಿಸಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ 175 ರನ್ ಗಳಿಸಿದ್ದೇ ಗರಿಷ್ಠ ರನ್ ಆಗಿತ್ತು. ಇನ್ನು ಇದೇ ವೇಳೆ 334 ವಿಕೆಟ್ ಪಡೆದಿದ್ದಾರೆ. ಈ ವೇಳೆ 15 ಬಾರಿ 5ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.

ರವೀಂದ್ರ ಜಡೇಜಾ ಆಂಡರ್ಸನ್, ತೆಂಡೂಲ್ಕರ್ ಸರಣಿಯಲ್ಲೂ ಅಮೋಘ ಪ್ರದರ್ಶನ ನೀಡಿದ್ದರು. ಇವರು ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ 5 ಪಂದ್ಯಗಳಲ್ಲಿ 86ರ ಸರಾಸರಿಯಲ್ಲಿ 516 ರನ್ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 5 ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇವರ ಈ ಅಮೋಘ ಪ್ರದರ್ಶನವನ್ನು ಭಾರತದಲ್ಲಿ ಮುಂದುವರೆಸಿದ್ದಾರೆ.