ಇನ್ನೇನು ಕೆಲವೇ ಘಂಟೆಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಶುಭಾರಂಭ ಮಾಡುವ ಕನಸು ಆರ್‌ಸಿಬಿ ತಂಡದ್ದಾಗಿದೆ. ಆದರೆ ಆರ್‌ಸಿಬಿ ಆಟಗಾರ್ತಿಯರು ಮೈದಾನಕ್ಕೆ ಇಳಿಯುವ ಮುನ್ನವೇ ಪೆಟ್ಟು ಬಿದ್ದಿದೆ. ಆರ್‌ಸಿಬಿಯ ಸ್ಟಾರ್ ಆಟಗಾರ್ತಿಯೊಬ್ಬರು ಪ್ರಸಕ್ತ ಸರಣಿಯಿಂದಲೇ ಹೊರ ನಡೆದಿದ್ದಾರೆ.
ತನ್ನ ಬಿಗುವಿನ ದಾಳಿಯಿಂದಲೇ ಹೆಸರುವಾಸಿಯಾಗಿರುವ ಆಶಾ ಸೋಭಾನ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಈ ಬಗ್ಗೆ ತಂಡ ಗುರುವಾರ ಮಹತ್ವದ ತೀರ್ಮಾನವನ್ನು ಸಾಮಾಜಿಕ ತಾಣದಲ್ಲಿ ಪ್ರಕಟಿಸಿದೆ. ನಮ್ಮ ತಂಡದ ಚಾಂಪಿಯನ್ ಆಲ್‌ರೌಂಡರ್ ಆಶಾ ಶೋಭನಾ ಮಹಿಳಾ ಪ್ರೀಮಿಯರ್ ಲಿಗ್ 2025ರಿಂದ ಹೊರಗುಳಿದಿದ್ದಾರೆ. ಅವರ ಮೊಣಕಾಲಿನ ಗಾಯದ ಸಮಸ್ಯೆಯನ್ನು ಎದುರಿಸುತಿದ್ದಾರೆ ಎಂದು ಆರ್‌ಸಿಬಿ ತಿಳಿಸಿದೆ. ಅಲ್ಲದೆ ಈ ಆಟಗಾರ್ತಿಯ ಬದಲಿಗೆ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನುಜತ್ ಪರ್ವೀನ್ ತಂಡ ಸೇರಿದ್ದಾರೆ ಎಂದು ತಿಳಿಸಿದೆ.

ಮೂರನೇ ಆವೃತ್ತಿಯ ಮಹಿಳಾ ಪ್ರೀಮೀಯರ್ ಲೀಗ್ ಶುಕ್ರವಾರದಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. 17 ವರ್ಷ ಪುರುಷರ ತಂಡ ಮಾಡಲು ಆಗದ ಸಾಧನೆಯನ್ನು ಮಹಿಳಾ ತಂಡ ಕಳೆದ ಆವೃತ್ತಿಯಲ್ಲಿ ಮಾಡಿ ಅಭಿಮಾನಿಗಳ ಮನ ಗೆದ್ದಿತ್ತು. ಈಗ ತನ್ನ ಪಟ್ಟವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
ಆರ್‌ಸಿಬಿ ತಂಡದಲ್ಲಿ ಗಾಯದಿಂದ ಟೂರ್ನಿಯಿಂದ ಹೊರ ನಡೆಯುತ್ತಿರುವ ಆಟಗಾರ್ತಿಯರ ಪಟ್ಟಿ ದಿನೇ ದಿನೇ ಬೆಳೆಯುತ್ತಲೆ ಇದೆ. ಈ ಮೊದಲು ಸೋಫಿ ಮೊಲಿನೆಕ್ಸ್ ಗಾಯಕ್ಕೆ ತುತ್ತಾಗಿದ್ದರು. ಈಗಾಯದ ನೋವು ಮಾಸವು ಮುನ್ನವೇ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಶೋಭನಾ ತಂಡದಿಂದ ಹೊರ ನಡೆದಿದ್ದಾರೆ. ಆಶಾ ಅವರು ಭಾರತದ ಪರ ಟಿ20 ವಿಶ್ವಕಪ್ ಆಡುವಾಗ ಗಾಯಕ್ಕೆ ತುತ್ತಾಗಿದ್ದರು. ಇನ್ನು ಚೇತರಿಸಿಕೊಳ್ಳದ ಕಾರಣ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಆಶಾ ಶೋಭನಾ ಬದಲಿಗೆ ನುಜತ್ ಪರ್ವೀನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇವರು ರೈಲ್ವೇಸ್ ಪರ ಆಡುತ್ತಿದ್ದು, ಈಗಾಗಲೇ ಭಾರತದ ಪರ ಐದು ಟಿ20 ಪಂದ್ಯಗಳನ್ನು ಆಡಿ ಸೈ ಎನಿಸಿಕೊಂಡಿದ್ದಾರೆ. ಇವರಿಗೆ ತಂಡ 30 ಲಕ್ಷ ನೀಡಿದೆ.
ಭಾರತದ ಭರವಸೆಯ ಆಲ್‌ರೌಂಡರ್ ಆಶಾ ಶೋಭನಾ ಲೀಗ್‌ನ ಅತ್ಯಂತ ಯಶಸ್ವಿ ಆಟಗಾರ್ತಿಯರಲ್ಲಿ ಒಬ್ಬರು. ಇವರು ಆರ್‌ಸಿಬಿ ಪರ 15 ಪಂದ್ಯಗಳನ್ನು ಆಡಿದ್ದು 17 ವಿಕೆಟ್ ಕಬಳಿಸಿದ್ದಾರೆ.