WPL 2026: ಸ್ಮೃತಿ 96 ರನ್ ಭರ್ಜರಿ ಆಟ: RCB ಗೆಲುವಿನ ನಾಗಾಲೋಟ
ನವಿ ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ನಾಲ್ಕನೇ ಗೆಲುವಿನ ನಗೆ ಬೀರಿದೆ. ಈ ಮೂಲಕ ಆರ್‌ಸಿಬಿ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯ ಓಟವನ್ನು ಮುನ್ನಡೆಸಿದೆ. ಆರ್‌ಸಿಬಿ ಲೀಗ್ ಹಂತದ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಅಬ್ಬರಿಸಿದೆ. ಈ ಮೂಲಕ ಆರ್‌ಸಿಬಿ ಆಡಿದ 4 ಪಂದ್ಯಗ ಗೆದ್ದು 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
167 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡದ ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ತಂಡ ಮೊತ್ತ 14 ಆಗಿದ್ದಾಗ ಪೆವಿಲಿಯನ್ ಸೇರಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕಿ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವೋಲ್ ಜೋಡಿ ಭರ್ಜರಿ ಜೊತೆಯಾಟದ ಪ್ರದರ್ಶನ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳು ವಿಫಲರಾದರು. ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದಂತೆ ಬ್ಯಾಟ್ ಮಾಡಿದ ಆರ್‌ಸಿಬಿ 37 ರನ್ ಸೇರಿಸಿತು.

ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿದ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವೋಲ್ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಮಿಡ್ಲ್ ಓವರ್‌ಗಳಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಲು ನೆರವಾದರು. ಈ ಜೋಡಿ 92 ಎಸೆತಗಳಲ್ಲಿ 142 ರನ್ ಸೇರಿಸಿ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿತು.
ಸ್ಮೃತಿ ಅಬ್ಬರ
ನಾಯಕಿ ಸ್ಮೃತಿ ಮಂಧಾನ ಅಮೋಘ ಬ್ಯಾಟಿಂಗ್‌ನಿಂದ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದರು. ಇವರು 4 ರನ್‌ಗಳಿಂದ ಶತಕ ವಂಚಿತರಾದರೂ ಸಹ ಅಬ್ಬರಿಸಿದರು. ಸ್ಮೃತಿ 61 ಎಸೆತಗಳಲ್ಲಿ 13 ಬೌಂಡರಿ, 3 ಸಿಕ್ಸರ್ ಸಹಾಯದಿಂದ 96 ರನ್ ಬಾರಿಸಿ ನಂದಿನಿ ಶರ್ಮಾ ತೋಡಿದ ಖೆಡ್ಡಾಗೆ ಬಲಿಯಾದರು.
ಆರ್‌ಸಿಬಿ ತಂಡದ ಜಾರ್ಜಿಯಾ ವೋಲ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 54 ರನ್ ಸಿಡಿಸಿ ಮಿಂಚಿದರು. ಅಂತಿಮವಾಗಿ ಆರ್‌ಸಿಬಿ 18.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್ ಸೇರಿಸಿ ಮತ್ತೊಂದು ಜಯ ಸಾಧಿಸಿತು.
ಕಳಪೆ ಆರಂಭ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಡೆಲ್ಲಿ ತಂಡದ ಪರ ಲಿಜೆಲ್ ಲೀ, ಲಾರಾ ವೋಲ್ವಾರ್ಡ್, ನಾಯಕಿ ಜೆಮಿಮಾ ರೊಡ್ರಿಗಸ್, ಮರಿಜಾನ್ನೆ ಕಪ್ಪ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ಡೆಲ್ಲಿ ಕ್ಯಾಪಿಟಲ್ಸ್ ಮೊದಲ 1.3 ಓವರ್‌ಗಳಲ್ಲಿ 10 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

5ನೇ ವಿಕೆಟ್‌ಗೆ ಶಫಾಲಿ ವರ್ಮಾ ಹಾಗೂ ನಿಕಿ ಪ್ರಸಾದ್ (12) ಜೋಡಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಜೋಡಿ 35 ಎಸೆತಗಳಲ್ಲಿ 59 ರನ್ ಜೊತೆಯಾಟದ ಕಾಣಿಕೆ ನೀಡಿ ಅಬ್ಬರಿಸಿತು. ಆರಂಭಿಕ ಶಫಾಲಿ ವರ್ಮಾ 41 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 62 ರನ್ ಸಿಡಿಸಿ ಔಟ್ ಆದರು. ಸ್ನೇಹಾ ರಾಣಾ 22, ಲೂಸಿ ಹ್ಯಾಮಿಲ್ಟನ್ 36, ಶ್ರೀ ಚರಣಿ 11 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ ಪರ ವೇಗದ ಬೌಲರ್‌ಗಳಾದ ಲಾರೆನ್ ಬೆಲ್, ಸಯಾಲಿ ಸಾತ್ಘರೆ ತಲಾ 3 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications