ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಅಭಿಮಾನಿಗಳು ಮರೆಯಲಾಗದ ಪ್ರದರ್ಶನ ನೀಡಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಜತ್ ಪಟಿದಾರ್ ನೇತೃತ್ವದ ಆರ್‌ಸಿಬಿ ತಂಡವು 5 ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಈ ಸೋಲಿನೊಂದಿಗೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರ್‌ಸಿಬಿ ಹಿಂದಿಕ್ಕುವ ಮೂಲಕ ಐಪಿಎಲ್‌ನಲ್ಲಿ ಅನಗತ್ಯ ದಾಖಲೆಯನ್ನು ಸೃಷ್ಟಿಸಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ತಂಡದ ಸೋಲು, ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 46ನೇ ಸೋಲಾಗಿದೆ. 46ನೇ ಸೋಲನ್ನು ದಾಖಲಿಸಿದ ಆರ್‌ಸಿಬಿ, ಐಪಿಎಲ್ ಇತಿಹಾಸದಲ್ಲಿ ಒಂದೇ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಮಳೆಯಿಂದ ಪಂದ್ಯ ತಡವಾಗಿ ಆರಂಭವಾದ ಕಾರಣ 14 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಪಂದ್ಯದಲ್ಲಿ ಟಾಸ್ ಸೋತು ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. ಆರ್‌ಸಿಬಿ ತಂಡವು ಬ್ಯಾಟಿಂಗ್‌ನಲ್ಲಿ ಬಿಗ್ ಸ್ಕೋರ್ ಕಲೆ ಹಾಕುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪಿಬಿಕೆಎಸ್ ಬೌಲಿಂಗ್ ದಾಳಿಗೆ ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ತತ್ತರಿಸಿತು.
ಪಂಜಾಬ್ ತಂಡದ ಬೌಲರ್ಸ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಆರ್‌ಸಿಬಿ ತಂಡವನ್ನು 95 ರನ್‌ಗಳಿಗೆ ಕಟ್ಟಿ ಹಾಕಿದರು. ಈ ಗುರಿ ಬೆನ್ನಟ್ಟಿದ ಇದಾದ ನಂತರ, ನೆಹಾಲ್ ವಧೇರಾ ಅವರ ಅದ್ಭುತ ಇನ್ನಿಂಗ್ಸ್‌ನಿಂದ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗಳ ಅದ್ಭುತ ಜಯ ಸಾಧಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು- 46 ಸೋಲು, ಎಂ ಚಿನ್ನಸ್ವಾಮಿ ಸ್ಟೇಡಿಯಂ
ಡೆಲ್ಲಿ ಕ್ಯಾಪಿಟಲ್ಸ್- 45 ಸೋಲು, ಅರುಣ್ ಜೇಟ್ಲಿ ಸ್ಟೇಡಿಯಂ
ಕೋಲ್ಕತ್ತಾ ನೈಟ್ ರೈಡರ್ಸ್- 38 ಸೋಲು, ಈಡನ್ ಗಾರ್ಡನ್ ಸ್ಟೇಡಿಯಂ
ಮುಂಬೈ ಇಂಡಿಯನ್ಸ್- 34 ಸೋಲು, ವಾಂಖೆಡೆ ಸ್ಟೇಡಿಯಂ
ಪಂಜಾಬ್ ಕಿಂಗ್ಸ್- 30 ಸೋಲು, ಮೊಹಾಲಿ ಸ್ಟೇಡಿಯಂ
ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ ಟೇಬಲ್ ಕುಸಿತ ಕಂಡಿದೆ. ಆರ್‌ಸಿಬಿ ಇಲ್ಲಿವರೆಗೆ ಆಡಿರುವ 7 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು 3 ರಲ್ಲಿ ಸೋತಿದೆ. ಹೀಗಾಗಿ 8 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇತ್ತ ಪಂಜಾಬ್ ಕಿಂಗ್ಸ್ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿದರೆ, 2 ರಲ್ಲಿ ಸೋತಿದೆ. 10 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ 2 ಸ್ಥಾನದಲ್ಲಿದೆ.