ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅತ್ಯಂತ ಕೆಟ್ಟ ಆರಂಭ ಮಾಡಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತಿದ್ದು, ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ.
ಗಮನಾರ್ಹವಾಗಿ, ತವರಿನ ಅಂಗಳದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದು, ಎರಡರಲ್ಲಿ ಮುಖಭಂಗ ಅನುಭವಿಸಿದೆ. ಕಳೆದ 16 ವರ್ಷಗಳಿಂದಲೂ ಆರ್‌ಸಿಬಿ ಪುರುಷರ ತಂಡ ಟ್ರೋಫಿ ಬರ ಎದುರಿಸುತ್ತಿದೆ. 2024ರ ಮಹಿಳಾ ಪ್ರೀಮಿಯರ್ ಲೀಗ್ ಗೆದ್ದು ಮಹಿಳಾ ತಂಡ ಆರ್‌ಸಿಬಿ ಫ್ರಾಂಚೈಸಿಯ ಕ್ಯಾಬಿನೆಟ್ ತುಂಬಿಸಿದೆ.

ಇದೀಗ 2024ರ ಐಪಿಎಲ್‌ನಲ್ಲಿ ಆರ್‌ಸಿಬಿ ಪುರುಷರ ತಂಡದ ಮೇಲೆ ಪ್ರಶಸ್ತಿ ಗೆಲ್ಲುವ ಒತ್ತಡ ಹೆಚ್ಚಾಗತಲಿದ್ದರೆ, ಮತ್ತೊಂದೆಡೆ, ಸತತ ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಆರ್‌ಸಿಬಿ ತಂಡ ಯಾವಾಗಲೂ ಕಾಗದದ ಮೇಲೆ ಬಲಿಷ್ಠವಾಗಿ ಕಂಡರೂ, ಮೈದಾನಕ್ಕಿಳಿದಾಗ ಅದರ ಅಸಲಿ ಬಣ್ಣ ಹೊರಬರುತ್ತದೆ. ದೊಡ್ಡ ಆಟಗಾರರ ಎನಿಸಿಕೊಂಡವರು ನಿರ್ಣಾಯಕ ಹಂತದಲ್ಲಿ ಕೈಕೊಡುವುದು ಹೊಸತೇನಲ್ಲ. ವಿರಾಟ್ ಕೊಹ್ಲಿ ಏಕೈಕ ಹೆಸರಿನೊಂದಿಗೆ ಆರ್‌ಸಿಬಿ ಫ್ರಾಂಚೈಸಿ ಇಂದು ಬ್ರ್ಯಾಂಡ್ ಅಗಿ ಬೆಳದಿದೆ. ಮೈದಾನದಲ್ಲೂ ವಿರಾಟ್ ಕೊಹ್ಲಿ ಒಬ್ಬರೇ ಹೋರಾಡುವಂತಾಗಿದೆ.

ಪ್ರತಿ ವರ್ಷವೂ ಆರ್‌ಸಿಬಿ ತಂಡದ ಮೇಲೆ ನಿಷ್ಠಾವಂತ ಅಭಿಮಾನಿಗಳ ನಂಬಿಕೆ ಹಾಗೂ ಪ್ರೋತ್ಸಾಹ ಹೆಚ್ಚಾಗುತಲಿದ್ದರೂ, ತಂಡವು ಮೈದಾನದಲ್ಲಿ ಅದಕ್ಕೆ ತಕ್ಕಂತೆ ಹೋರಾಟ ನೀಡಲು ವಿಫಲವಾಗಿದೆ. ಇದು ಅಭಿಮಾನಿಗಳ ಅಕ್ರೋಶಕ್ಕೂ ಕಾರಣವಾಗಿದೆ.
ವಿಶ್ವದಲ್ಲೇ ಅತ್ಯುತ್ತಮ ಹಾಗೂ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿ ಫ್ರಾಂಚೈಸಿಗೆ ಅಭಿಮಾನಿಗಳ ಕೂಗು ಕೇಳಿಸುತ್ತಿಲ್ಲವೇ ಎಂದು ಪ್ರಶ್ನಿಸುವಂತಾಗಿದೆ. ಪಂದ್ಯಾವಳಿ ಆರಂಭಕ್ಕೂ ಮುನ್ನ "ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್'ನಲ್ಲಿ "ಇದು ಆರ್‌ಸಿಬಿಯ ಹೊಸ ಅಧ್ಯಾಯ' ಎಂಬ ಘೋಷಣೆಯೊಂದಿಗೆ ಅಭಿಯಾನ ಆರಂಭಿಸಿತು. ಆದರೆ, ಮೈದಾನದಲ್ಲಿ ಪ್ರದರ್ಶನ ಮಾತ್ರ ಹಳೆಯ ಅಧ್ಯಾಯವೇ ಚೆನ್ನಾಗಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಆರ್‌ಸಿಬಿ ಫ್ರಾಂಚೈಸಿಯು ಐಪಿಎಲ್ ಹರಾಜಿನಲ್ಲಿ ಪ್ರತಿಭಾವಂತ ಆಟಗಾರರನ್ನು ಖರೀದಿಸುವ ಬದಲು, ದೊಡ್ಡ ಹೆಸರಿನ ಆಟಗಾರರತ್ತ ಗಮನ ಹರಿಸುತ್ತಾರೆ. ಉತ್ತಮ ಆಟಗಾರರನ್ನು ಖರೀದಿಸಿದರೂ, ಅವರನ್ನು ಬೆಂಬಲಿಸುವುದಿಲ್ಲ ಮತ್ತು ಬೆಂಚ್ ಕಾಯಿಸುವಂತೆ ಮಾಡುತ್ತಾರೆ ಎನ್ನುವುದು ಅಭಿಮಾನಿಗಳ ಆರೋಪ.
ಇತ್ತೀಚಿಗೆ ಆರ್‌ಸಿಬಿ ತಂಡವು ಪಂದ್ಯ ಸೋತ ಬಳಿಕ, ಅಭಿಮಾನಿಗಳನ್ನು ಕೇಳಿದಾಗ ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ವರ್ಷವೂ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣ ಮತ್ತು ಉತ್ತರವನ್ನೇ ಕಂಡುಹಿಡಿಯದಿರುವುದು ಫ್ರಾಂಚೈಸಿ ವೈಫಲ್ಯತೆಗೆ ಸಾಕ್ಷಿಯಾಗಿದೆ.
ಒಬ್ಬ ಮಹಿಳಾ ಅಭಿಮಾನಿಯು ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್ ಅನ್ನು ಕಾಲೇಜು ಮ್ಯಾನೇಜ್‌ಮೆಂಟ್‌ಗೆ ಹೋಲಿಕೆ ಮಾಡಿದರು. "ಏನ್ ಹೇಳ್ತಾರೆ ಬ್ರೋ ಅವರಿಗೆ, ನಮ್ ಕಾಲೇಜ್ ಲೆಕ್ಚರರ್ಸ್‌ಗೆ ಏನಾದ್ರೂ ಹೇಳೋಕೆ ಆಗುತ್ತಾ. ಏನ್ ಹೇಳಿದ್ರೂ ಅವರು ಕೇಳ್ತಾರಾ?, ಆರ್‌ಸಿಬಿ ಮ್ಯಾನೇಜ್‌ಮೆಂಟ್, ಕಾಲೇಜ್ ಮ್ಯಾನೇಜ್‌ಮೆಂಟ್ ಇದ್ದಂಗೆ. ಮಾತು ಕೇಳೋರಿಗೆ ಏನಾದ್ರೂ ಹೇಳಬಹುದು, ಕೇಳದೆ ಇರೋರಿಗೆ ಏನ್ ಹೇಳೋಕೆ ಅಗುತ್ತೆ? ಏನೂ ಅಗಲ್ಲ," ಎಂದು ಆಕ್ರೋಶ ಹೊರಹಾಕಿದರು.
ಮತ್ತೊಬ್ಬ ಅಭಿಮಾನಿಯು, "16 ವರ್ಷಗಳಿಂದ ಕಪ್ ಗೆಲ್ಲಲ್ಲ, ಕಪ್ ಗೆಲ್ಲಲ್ಲ ಅಂತಾ ಹೇಳ್ತಾರೆ. ಇಂಥಾ ಮ್ಯಾನೇಜ್‌ಮೆಂಟ್, ಟೀಮ್ ಇದ್ದರೆ ಏನ್ ಮಾಡ್ತಾರೆ?, ಫ್ಯಾನ್ಸ್ ಫೀಲಿಂಗ್ ಜೊತೆ ತುಂಬಾ ಆಟ ಆಡ್ತಿದಾರೆ, ಹೋಮ್ ಪಂದ್ಯಗಳನ್ನು ಗೆಲ್ಲದಿದ್ದರೆ ಹೇಗೆ?'' ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನೋರ್ವ ಅಭಿಮಾನಿಯು "ಮ್ಯಾಚ್ ಸೋಲೋದು ಓಕೆ. ಪ್ರತಿ ಮ್ಯಾಚ್ ಗೆಲ್ಲಬೇಕು ಅಂತಾ ಹೇಳಲ್ಲ. ಆದ್ರೆ ಈ ಥರ ಹೀನಾಯವಾಗಿ, 50 ರನ್‌ಗಳಿಂದ 80 ರನ್‌ಗಳಿಂದ ಸೋತ್ರೆ ನಮಗೆ ನಿರಾಸೆ ಆಗುತ್ತೆ. ಫೈಟ್ ಕೊಟ್ಟು ಸೋತ್ರು ನಮಗೆ ಬೇಜಾರಿಲ್ಲ. ಇಡೀ ತಂಡದಲ್ಲಿ ಮೂರು ಜನ ಮಾತ್ರ ಸರಿಯಾಗಿ ಆಡ್ತಾರೆ, ಉಳಿದೋರು ರನ್ ಹೊಡೆಯಲ್ಲ, ವಿಕೆಟ್ ಪಡೆಯಲ್ಲ ಆ ಥರಾ ಇದಾರೆ. ಮುಖ್ಯವಾಗಿ ತಂಡದ ಮ್ಯಾನೇಜ್‌ಮೆಂಟ್, ಆಯ್ಕೆ ಪ್ರಕ್ರಿಯೆ ಸರಿ ಇಲ್ಲ," ಅಂತಾ ಟೀಕಿಸುತ್ತಿದ್ದಾರೆ.