ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿದೆ. ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ 83 ಕೋಟಿ ರೂಪಾಯಿಯೊಂದಿಗೆ ಅಂಗಳ ಪ್ರವೇಶಿಸಿದ್ದು, ಹಲವು ವಿದೇಶಿ ಆಟಗಾರರಿಗೆ ಮಣೆ ಹಾಕಿದೆ. ಸ್ಟಾರ್ ಆಟಗಾರರು ಆರ್‌ಸಿಬಿ ತಂಡ ಸೇರಿಕೊಂಡಿದ್ದು, ಅಭಿಮಾನಿಗಳ ಮನ ಗೆದ್ದಿದೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರರಿಗೆ ಬೆಂಗಳೂರು ತಂಡ ಮಣೆ ಹಾಕಿದೆ. ಈ ಬಾರಿ ಆರ್‌ಸಿಬಿ ತಂಡ ಸೇರಿರುವ ವಿದೇಶಿ ಆಟಗಾರರ ಪಟ್ಟಿ ಇಲ್ಲಿದೆ.
ವಿದೇಶಿ ಆಟಗಾರರಿಗೆ ಮಣೆ ಹಾಕುವ ಪದ್ಧತಿಯನ್ನು ಆರ್‌ಸಿಬಿ ಈ ಹರಾಜಿನಲ್ಲೂ ಮುಂದುವರೆಸಿಕೊಂಡು ಬಂದಿದೆ. ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಸಂಘಟಿತ ತಂಡವನ್ನು ಕಟ್ಟವ ನಿಟ್ಟಿನಲ್ಲಿ ಪ್ರಯತ್ನ ಪಟ್ಟಿದೆ. ಆದರೆ ಸ್ಟಾರ್ ಕನ್ನಡಿಗರಿಗೆ ಮಣೆ ಹಾಕುವಲ್ಲಿ ವಿಫಲವಾಗಿದೆ.

ಆರ್‌ಸಿಬಿ ತಂಡ ಖರೀಸಿದ ವಿದೇಶಿ ಆಟಗಾರರಲ್ಲಿ ಇಂಗ್ಲೆಂಡ್ ಆಟಗಾರರಿಗೆ ಹೆಚ್ಚಿನ ಸ್ಥಾನ. ಮೂರು ಇಂಗ್ಲೆಂಡ್ ಪ್ಲೇಯರ್‌ಗಳು ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದರೆ, ಆಸೀಸ್‌ನ ಇಬ್ಬರು ಬೆಂಗಳೂರು ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಇನ್ನು ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡದಿಂದ ತಲಾ ಒಬ್ಬರು ಆರ್‌ಸಿಬಿ ಪರ ಈ ಬಾರಿ ಐಪಿಎಲ್‌ನಲ್ಲಿ ಆಡಲಿದ್ದಾರೆ.
ಆರ್‌ಸಿಬಿ ಈ ಬಾರಿ ಇಂಗ್ಲೆಂಡ್ ತಂಡದ ಆಟಗಾರರಿಗೆ ಬಾಜಿ ಕಟ್ಟು ಗೆದ್ದಿದೆ. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆತೆಲ್ ಅವರಿಗೆ ಮಣೆ ಹಾಕಿದೆ. ಫಿಲ್ ಸಾಲ್ಟ್ ಬಿರುಸಿನ ಆಟಕ್ಕೆ ಹೆಸರುವಾಸಿ. ಲಿಯಾಮ್ ಲಿವಿಂಗ್‌ಸ್ಟೋನ್ ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಹಾಗೂ ಅರೆಕಾಲಿಕ ಬೌಲರ್ ಪಾತ್ರ ನಿಭಾಯಿಸಬಲ್ಲರು. ಅಲ್ಲದೆ 21 ವರ್ಷದ ಯುವ ಜಾಕೋಬ್ ಬೆತೆಲ್ ಅವರಿಗೆ ಆರ್‌ಸಿಬಿ ತಂಡದಲ್ಲಿ ಸ್ಥಾನ ನೀಡಿದೆ.
ಇನ್ನು ಹರಾಜಿನಲ್ಲಿ ಆರ್‌ಸಿಬಿ ಆಸ್ಟ್ರೇಲಿಯಾದ ಇಬ್ಬರು ಆಟಗಾರರಿಗೆ ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇದರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಹೆಸರು ಜೋಶ್ ಹ್ಯಾಜಲ್‌ವುಡ್. ಇವರು ತಮ್ಮ ಶಿಸ್ತು ಬದ್ಧ ದಾಳಿಯಿಂದಲೇ ಹೆಸರುವಾಸಿ. ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ತಂಡ ಕೈ ಬಿಟ್ಟಿದ್ದ ಮಿಡ್ಲ್ ಆರ್ಡರ್ ಬ್ಯಾಟರ್ ಟಿಮ್ ಡೇವಿಡ್ ಅವರಿಗೆ ರೆಡ್ ಕಾರ್ಪೆಟ್ ಹಾಕಿದೆ.
ಶ್ರೀಲಂಕಾ ತಂಡದಿಂದ ನುವಾನ್ ತುಷಾರ, ವೆಸ್ಟ್ ಇಂಡೀಸ್ ತಂಡದ ರೊಮಾರಿಯೋ ಶೆಫರ್ಡ್, ದಕ್ಷಿಣ ಆಫ್ರಿಕಾದ ಲುಂಗಿ ಎನ್‌ಗಿಡಿ ಸಹ ಸೇರಿದ್ದಾರೆ. ಈ ಮೂಲಕ ಆರ್‌ಸಿಬಿ ತನ್ನ ಬೌಲಿಂಗ್ ವಿಭಾಗವನ್ನು ಬಲ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಿದೆ.
ಜೋಶ್ ಹ್ಯಾಜಲ್‌ವುಡ್--- 12.50 ಕೋಟಿ ರೂ.
ಫಿಲ್ ಸಾಲ್ಟ್---11.50 ಕೋಟಿ ರೂ.
ಲಿಯಾಮ್ ಲಿವಿಂಗ್‌ಸ್ಟೋನ್--- 8.75 ಕೋಟಿ ರೂ.
ಟೀಮ್ ಡೇವಿಡ್--- 3.00 ಕೋಟಿ ರೂ.
ಜಾಕೋಬ್ ಬೆತೆಲ್--- 2.60 ಕೋಟಿ ರೂ.
ನುವಾನ್ ತುಷಾರ್--- 1.60 ಕೋಟಿ ರೂ.
ರೊಮಾರಿಯೋ ಶೆಫರ್ಡ್---- 1.50 ಕೋಟಿ ರೂ.
ಲುಂಗಿ ಎನ್‌ಗಿಡಿ--- 1.00 ಕೋಟಿ ರೂ.