ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನವನ್ನು ನೀಡಿ ಜಯ ಸಾಧಿಸಿದೆ. ಆಡಿದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಆರ್‌ಸಿಬಿ ಅಬ್ಬರಿಸಿದೆ. ಈ ಮೂಲಕ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಆರ್‌ಸಿಬಿ ಪೂರ್ಣ ಅಂಕವನ್ನು ಕಲೆ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸಿದೆ. ಈ ಪಂದ್ಯದಲ್ಲಿ ದಾಖಲಿಸಿದ ಗೆಲುವನ್ನು ಆರ್‌ಸಿಬಿ ಆ 11 ಜನರಿಗೆ ಅರ್ಪಿಸಿದೆ.
ಆರ್‌ಸಿಬಿ ಮೊದಲ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನವನ್ನು ನೀಡಿತ್ತು. ಬೌಲಿಂಗ್‌ನಲ್ಲಿ ಜೇಕಬ್ ಡಫಿ ಮೂರು ವಿಕೆಟ್ ಪಡೆದು ಮಿಂಚಿದರೆ, ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಭರ್ಜರಿ ಪ್ರದರ್ಶನ ನೀಡಿ ಅರ್ಧಶತಕ ಬಾರಿಸಿದರು. ಪರಿಣಾಮ ಆರ್‌ಸಿಬಿ 202 ರನ್‌ಗಳ ಗುರಿಯನ್ನು 15.4 ಓವರ್‌ಗಳಲ್ಲಿ ಮುಟ್ಟಿ ಬೀಗಿತು. ಈ ಗೆಲುವನ್ನು ಆರ್‌ಸಿಬಿ ಕಳೆದ ವರ್ಷ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಅರ್ಪಿಸುವುದಾಗಿ ತಿಳಿಸಿದೆ.

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಣ ಉದ್ಘಾಟನಾ ಪಂದ್ಯಕ್ಕೂ ಮುನ್ನ ಮೃತ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಕೋರಿ 1 ನಿಮಿಷ ಮೌನ ಆಚರಿಸಲಾಯಿತು. ಅಲ್ಲದೆ ಆರ್‌ಸಿಬಿ ಆಟಗಾರರು ತೋಳಿಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಪಂದ್ಯವನ್ನು ಆಡಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೃತ 11 ಅಭಿಮಾನಿಗಳ ಸ್ಮರಣಾರ್ಥ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಪಂದ್ಯದ ವೇಳೆ 11 ಆಸನಗಳನ್ನು ಖಾಲಿ ಬಿಡಲು ನಿರ್ಧರಿಸಿದೆ.
ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಯಾವುದೇ ಪಂದ್ಯಗಳು ನಡೆದಿರಲಿಲ್ಲ. ರಾಜ್ಯ ಸರ್ಕಾರ ಕಾಲ್ತುಳಿತದ ಪ್ರಕರಣದ ತನಿಖೆ ನಡೆಸಲು ಸಮಿತಿಯನ್ನು ನೇಮಿಸಿತು. ಇದೇ ಸಮಿತಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿತು. ಅದರ ಅನುಸಾರ ಈಗ ಕೆಲವು ಮಾರ್ಪಾಡು ಮಾಡಿಕೊಂಡು ಪಂದ್ಯವನ್ನು ನಡೆಸಲಾಗುತ್ತಿದೆ. ಪಂದ್ಯವನ್ನು ನಡೆಸಲು ಸರ್ಕಾರದ ಅನುಮತಿ ಸಹ ಸಿಕ್ಕಿದೆ.
ಈ ಬಾರಿ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಲೀಗ್ ಹಂತದ ಐದು ಪಂದ್ಯಗಳನ್ನು ಆಡಲಿದ್ದು, ಇನ್ನು ಎರಡು ಪಂದ್ಯಗಳು ರಾಯ್‌ಪುರದಲ್ಲಿ ನಡೆಯಲಿವೆ. ಆರ್‌ಸಿಬಿ ಲೀಗ್ ಹಂತದ ಮುಂದಿನ ಪಂದ್ಯವನ್ನು ಇದೇ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.