WPL 2025 UP vs RCB: ಯುಪಿ ವಿರುದ್ಧ ಸೋತ ಆರ್‌ಸಿಬಿ: ಲೀಗ್ ಹಂತದಿಂದಲೇ ಹಾಲಿ ಚಾಂಪಿಯನ್ಸ್ ಹೊರಕ್ಕೆ
ಭರವಸೆಯ ಆಟಗಾರ್ತಿ ರಿಚಾ ಘೋಷ್ ಬಾರಿಸಿದ (69 ರನ್) ಹಾಗೂ ಕೆಳ ಕ್ರಮಾಂಕದಲ್ಲಿ ಸ್ನೇಹಾ ರಾಣಾ (26 ರನ್) ಕೆಚ್ಚದೆಯ ಬ್ಯಾಟಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಲು ಸಾಕಾಗಲಿಲ್ಲ. ಮಹಿಳಾ ಪ್ರೀಮಿಯರ್ ಲೀಗ್‌ನ 18ನೇ ಪಂದ್ಯದಲ್ಲಿ ಶನಿವಾರ ಆರ್‌ಸಿಬಿ 12 ರನ್‌ಗಳಿಂದ ಯುಪಿ ವಾರಿಯರ್ಸ್ ತಂಡದ ವಿರುದ್ಧ ಸೋಲು ಕಂಡಿತು. ಈ ಮೂಲಕ ಹಾಲಿ ಚಾಂಪಿಯನ್ ಲೀಗ್ ಹಂತದಲ್ಲೇ ಟೂರ್ನಿಗೆ ಗುಡ್ ಬಾಯ್ ಹೇಳಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 225 ರನ್ ಸೇರಿಸಿತು. ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಆರ್‌ಸಿಬಿ 19.3 ಓವರ್‌ಗಳಲ್ಲಿ 213 ರನ್‌ಗಳಿಸಿ ಸೋಲು ಕಂಡಿತು. ಈ ಮೂಲಕ ಆರ್‌ಸಿಬಿ ಆಡಿದ 7 ಪಂದ್ಯಗಳಲ್ಲಿ 2 ಜಯ, 5 ಸೋಲು ಕಂಡಿದ್ದು, 6 ಅಂಕಗಳನ್ನು ಕಲೆ ಹಾಕಿದೆ.

ಸವಾಲಿನ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ನಾಯಕಿ ಸ್ಮೃತಿ ಮಂಧನಾ ಮಹತ್ವದ ಪಂದ್ಯದಲ್ಲೇ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಸಬ್ಭಿನೇನಿ ಮೇಘನಾ 12 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 27 ರನ್ ಸಿಡಿಸಿ ಮಿಂಚಿದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ 28 ರನ್ ಸಿಡಿಸಿ ಔಟ್ ಆದರು. ರಾಘ್ವಿ ಬಿಸ್ತ್ 14 ರನ್ ಸಿಡಿಸಿದರು. ಕನಿಕಾ ಆಹುಜಾ 8 ರನ್‌ಗೆ ಔಟ್ ಆದರು.
ರಿಚಾ ಘೋಷ್ ಅರ್ಧಶತಕ
ಆರನೇ ವಿಕೆಟ್‌ಗೆ ಜಾರ್ಜಿಯಾ ವೇರ್‌ಹ್ಯಾಮ್ (17) ಹಾಗೂ ರಿಚಾ ಘೋಷ್ ಜೊತೆಯಾಟ ಸ್ಥಿರವಾಗಿತ್ತು. ಯುಪಿ ತಂಡದ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಜೋಡಿ ಆರ್ಭಟಿಸಿತು. ಈ ಜೋಡಿ 33 ಎಸೆತಗಳಲ್ಲಿ 64 ರನ್ ಸೇರಿಸಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರಿಚಾ ಘೋಷ್ 33 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 69 ರನ್ ಸಿಡಿಸಿ ಔಟ್ ಆದರು.

ಕೆಳ ಕ್ರಮಾಂಕದಲ್ಲಿ ಸ್ನೇಹಾ ರಾಣಾ ಕೇವಲ 6 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 26 ರನ್ ಸಿಡಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆಗಿ ನಿರಾಸೆ ಅನುಭವಿಸಿದರು. ಪರಿಣಾಮ ಬೆಂಗಳೂರು ತಂಡ ಲೀಗ್ ಹಂತದಲ್ಲಿ ಮತ್ತೊಂದು ಸೋಲು ಕಂಡು, ಮುಂದಿನ ಹಂತದ ಕನಸನ್ನು ಕೈ ಚೆಲ್ಲಿತು.
ಜಾರ್ಜಿಯಾ ವಾಲ್ ಅಬ್ಬರ
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಯುಪಿ ತಂಡದ ಪರ ಜಾರ್ಜಿಯಾ ವಾಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 56 ಎಸೆತಗಳಲ್ಲಿ 17 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 99 ರನ್ ಬಾರಿಸಿ ಮಿಂಚಿದರು. ಆರಂಭಿಕ ಗ್ರೇಸ್ ಹ್ಯಾರಿಸ್ 39, ಕಿರಣ್ ನವಗಿರೆ 46, ಚಿನ್ಲೆ ಹೆನ್ರಿ 19 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications