RCB: ಆರ್‌ಸಿಬಿ ಬಿರ್ಲಾ ಗ್ರೂಪ್ ಕೈವಶ, ₹16,660 ಕೋಟಿಗೆ ಡೀಲ್
RCB IPL 2027: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಐತಿಹಾಸಿಕ ಒಪ್ಪಂದವೊಂದಕ್ಕೆ ಸಿಸಿಐ ಅಧಿಕೃತ ಒಪ್ಪಿಗೆ ಸೂಚಿಸಿದೆ. ಇಂಡಿಯನ್ ಪ್ರೀಮಿಯರ್‌ನ ಲೀಗ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕತ್ವ ಹಸ್ತಾಂತರ ಪ್ರಕ್ರಿಯೆಗೆ ಮಂಗಳವಾರ (ಜೂನ್ 30) ಗ್ರೀನ್ ಸಿಗ್ನಲ್ ನೀಡಿದೆ.
ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಪ್ರಭಾವಿ ಉದ್ಯಮಿಗಳ ಒಕ್ಕೂಟವು ಆರ್‌ಸಿಬಿ ತಂಡವನ್ನು 16,660 ಕೋಟಿ ರೂಪಾಯಿಗಳ ಬೃಹತ್ ಮೊತ್ತಕ್ಕೆ ಖರೀದಿ ಮಾಡಿತ್ತು. ಇದೀಗ ಈ ಸಂಪೂರ್ಣ ನಗದು ಒಪ್ಪಂದದ ಮೂಲಕ ಸ್ವಾಧೀನಪಡಿಸಿಕೊಳ್ಳಲು ಇಂದು ಅನುಮೋದನೆ ನೀಡಿದೆ. ಈ ಮೂಲಕ ಆರ್‌ಸಿಬಿ ಅಧಿಕೃತವಾಗಿ ಹೊಸ ಮಾಲೀಕರ ವಶಕ್ಕೆ ಸೇರಿದೆ.

ಸಿಸಿಐ ಅಧಿಕೃತ ಅನುಮೋದನೆ
ಈ ವರ್ಷ 2026ರ ಮಾರ್ಚ್‌ನಲ್ಲಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ತನ್ನ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 16,660 ಕೋಟಿ ರೂಪಾಯಿಗಳ ಸಂಪೂರ್ಣ ನಗದು ಒಪ್ಪಂದದ ಮೂಲಕ ಒಕ್ಕೂಟಕ್ಕೆ ಮಾರಾಟ ಮಾಡುವುದಾಗಿ ಘೋಷಿಸಿತು. ಅದರಂತೆಯೇ ಇದೀಗ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟಕ್ಕೆ ಆರ್‌ಸಿಬಿ ತಂಡವನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಸಿಸಿಐ ಅಧಿಕೃತ ಅನುಮೋದನೆ ನೀಡಿದೆ.
ಆರ್‌ಸಿಬಿ ಖರೀದಿಸಿದ ಒಕ್ಕೂಟದಲ್ಲಿ ಯಾರೆಲ್ಲಾ ಇದ್ದಾರೆ?
ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಿಸಿಐ, 'ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್‌ನ ಶೇಕಡಾ 100ರಷ್ಟು ಷೇರುಗಳನ್ನು ಬಿಗ್ ಬನ್ಯನ್ ಹೋಲ್ಡಿಂಗ್ಸ್, ಬೋಲ್ಟ್ ಐಪಿಎಲ್ ಹೋಲ್ಡಿಂಗ್ಸ್, ಟೈಮ್ಸ್ ಇಂಟರ್ನೆಟ್, ಟೈಮ್ಸ್ ಕ್ರಿಕೆಟ್, ಐಸಿಕ್ಯೂ ಆಪರ್ಚುನಿಟೀಸ್ ಮತ್ತು ಏಷ್ಯಾ ಇನ್ವೆಸ್ಟ್‌ಮೆಂಟ್ ಟಾಪ್‌ಕೋ II ಸೇರಿದಂತೆ ವಿವಿಧ ಪ್ರಮುಖ ಸಂಸ್ಥೆಗಳನ್ನೊಳಗೊಂಡ ಒಕ್ಕೂಟಕ್ಕೆ ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡಲಾಗಿದೆ,' ಎಂದು ತಿಳಿಸಿದೆ. ಈ ಒಕ್ಕೂಟದಲ್ಲಿ ಪ್ರಮುಖವಾಗಿ ಆದಿತ್ಯ ಬಿರ್ಲಾ ಗ್ರೂಪ್, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಜಾಗತಿಕ ಹೂಡಿಕೆ ಸಂಸ್ಥೆಯಾದ ಬ್ಲ್ಯಾಕ್‌ಸ್ಟೋನ್ ಸೇರಿವೆ.
'ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮೌಲ್ಯದ ಒಪ್ಪಂದಗಳಿಗೆ ಸಿಸಿಐ ಅನುಮೋದನೆಯ ಅಗತ್ಯವಿರುತ್ತದೆ. ಈ ಸಂಸ್ಥೆಯು ಮಾರುಕಟ್ಟೆಯಲ್ಲಿ ದೊಟ್ಟ ಮಟ್ಟದ ವ್ಯವಹಾರಗಳ ಮೇಲೆ ನಿಗಾ ಇಡುವುದರ ಜೊತೆಗೆ, ಮುಕ್ತ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ,'
ಆರ್‌ಸಿಬಿಗೆ ಹೊಸ ಮಾಲೀಕ
ಈ ಮಾಲೀಕತ್ವದ ಬದಲಾವಣೆಯೊಂದಿಗೆ ಆರ್‌ಸಿಬಿ ತಂಡದ ಆಡಳಿತ ಮಂಡಳಿಯಲ್ಲೂ ಹೊಸ ಬದಲಾವಣೆಗಳಾಗಲಿವೆ. ಹೊಸ ನಾಯಕತ್ವದ ರಚನೆಯಡಿಯಲ್ಲಿ ಮಾಜಿ ವೃತ್ತಿಪರ ಕ್ರಿಕೆಟಿಗರೂ ಆಗಿರುವ ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಆರ್‌ಸಿಬಿ ಫ್ರಾಂಚೈಸಿಯ ಹೊಸ ಚೇರ್ಮನ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ಟೈಮ್ಸ್ ಇಂಟರ್ನೆಟ್‌ನ ಸತ್ಯನ್ ಗಜ್ವಾನಿ ಅವರು Vice Chairman ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಐಪಿಎಲ್‌ನಲ್ಲಿ ದಾಖಲೆಯ ಮೌಲ್ಯ
ಡಿಯಾಜಿಯೊ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯಿಂದ ಜಾಗತಿಕ ಮತ್ತು ಭಾರತೀಯ ಪ್ರಮುಖ ಉದ್ಯಮ ಸಂಸ್ಥೆಗಳಿಗೆ ಆರ್‌ಸಿಬಿ ಹಸ್ತಾಂತರವಾಗಿರುವುದು ಐಪಿಎಲ್‌ನ 19 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಒಪ್ಪಂದವಾಗಿದೆ. ಇತ್ತೀಚೆಗಷ್ಟೇ ಐಪಿಎಲ್ ಮತ್ತು ಡಬ್ಲ್ಯೂಪಿಎಲ್ ಎರಡರಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್‌ಸಿಬಿ ತಂಡದ ಮೌಲ್ಯವು ಈ ಒಪ್ಪಂದದ ಮೂಲಕ ಗಗನಕ್ಕೇರಿದೆ. ಈ ಬದಲಾವಣೆಯು ಕ್ರಿಕೆಟ್ ಪ್ರೇಮಿಗಳು ಹಾಗೂ ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಕುತೂಹಲವನ್ನು ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications