ಆರ್‌ಸಿಬಿ ಎಂಬ ಫ್ರಾಂಚೈಸಿಯ ಹಲವು ವರ್ಷಗಳ ಪ್ರಶಸ್ತಿ ಗೆಲುವಿನ ಬರ ಕೊನೆಗೂ ಅಂತ್ಯವಾಗಿದೆ. ಆರ್‌ಸಿಬಿ ಶೋಕೆಸ್‌ಗೆ ಮೊದಲ ಟ್ರೋಫಿ ಎಂಟ್ರಿ ಹೊಡೆದಿದೆ. wpl ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಚೊಚ್ಚಲ ಪ್ರಶಸ್ತಿಯ ನಗು ಬೀರಿದೆ. ಈ ಮೂಲಕ ಆರ್‌ಸಿಬಿ ಅಭಿಮಾನಿಗಳ ವೀಕೆಂಡ್ ಮೋಜನ್ನು ಹೆಚ್ಚಿಸಿದೆ.
ಅರುಣ್ ಜೆಟ್ಲಿ ಅಂಗಳದಲ್ಲಿ ರಿಚಾ ಘೋಷ್ ಬೌಂಡರಿ ಬಾರಿಸುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿತ್ತು. ಅಸಲಿಗೆ 16 ವರ್ಷಗಳ ಬರ ಕೊನೆಗೂ ನೀಗಿದೆ. ಆರ್‌ಸಿಬಿ ಮೊದಲ ಬಾರಿಗೆ ಕಪ್ ಎತ್ತಿದೆ. ಈ ಸಾಧನೆಯ ಹಿಂದೆ ಮಹಿಳಾ ಆಟಗಾರರ್ತಿಯರ ಸಾಧನೆ ಎಷ್ಟು ಎದ್ದು ಕಾಣುತ್ತದೋ ಅಷ್ಟೇ ಆರ್‌ಸಿಬಿ ಅಭಿಮಾನಿಗಳ ಅಭಿಮಾನಿವು ಎದ್ದು ಕಾಣುತ್ತದೆ. ಇಲ್ಲಿ ಒಂದಂತೂ ಸತ್ಯ ಆರ್‌ಸಿಬಿ ಈ ಬಾರಿ ಅಂಗಳದಲ್ಲಿ ಒನ್ ವುಮೆನ್ ಶೋ ರೀತಿ ಆಡಲೇ ಇಲ್ಲ. ಟೀಮ್ ಶೋ ರೀತಿ ಆಡಿ ಕಪ್ ಗೆದ್ದಿದೆ. ಆರ್‌ಸಿಬಿ ಟೀಮ್ ಶೋ ನೀಡಿದ್ದು ಹೇಗಿದೆ ಎಂಬ ಬಗ್ಗೆ ವರದಿ ಇಲ್ಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಮೊದಲು ಬ್ಯಾಟ್ ಮಾಡಿ ಯುಪಿ ವಾರಿಯರ್ಸ್ ತಂಡಕ್ಕೆ 158 ರನ್‌ಗಳ ಗುರಿಯನ್ನು ನೀಡಿತ್ತು. ಈ ಸಾಧಾರಣ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಆಶಾ ಶೊಬನಾ ಪಾತ್ರ ದೊಡ್ಡದು. ಇವರ ಈ ಪಂದ್ಯದಲ್ಲಿ ನಾಲ್ಕು ಓವರ್ ಬೌಲಿಂಗ್ ಮಾಡಿ ಐದು ವಿಕೆಟ್ ಕಬಳಿಸಿ, ಮಿಂಚಿದರು. ಪರಿಣಾಮ ಆರ್‌ಸಿಬಿ ಗೆಲುವಿನ ರುವಾರಿ ಆದರು.

ಆರ್‌ಸಿಬಿ ಎರಡನೇ ಪಂದ್ಯದಲ್ಲಿ ಗೆಲುವು ದಾಖಲಿಸುವುಲ್ಲಿ ರೆಣುಕಾ ಸಿಂಗ್ ಪಾತ್ರ ದೊಡ್ಡದರು. ಇವರ ಮೊನಚಾದ ದಾಳಿಯನ್ನು ಅರಿಯುವಲ್ಲಿ ಗುಜರಾತ್ ಜೈಂಟ್ಸ್ ಆಟಗಾರ್ತಿಯರು ವಿಫಲರಾದರು. ಪರಿಣಾಮ ಮೊದಲು ಬ್ಯಾಟ್ ಮಾಡಿದ ಗುಜರಾತ್ 107 ರನ್ ಗಳನ್ನಷ್ಟೇ ಸೇರಿಸಲು ಸಾಧ್ಯವಾಯಿತು. ಈ ಪಂದ್ಯವನ್ನು ಆರ್‌ಸಿಬಿ ಎಂಟು ವಿಕೆಟ್ ಗಳಿಂದ ಗೆದ್ದು ಬೀಗಿತು.

ಆರ್‌ಸಿಬಿ ತಂಡ ಯುಪಿ ವಾರಿಯರ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಈ ಪಂದ್ಯದಲ್ಲಿ 50 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ 80 ರನ್ ಸೇರಿಸಿ ಮಿಂಚಿದರು. ಈ ಮೂಲಕ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 198 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಯುಪಿ 23 ರನ್‌ಗಳಿಂದ ಸೋಲು ಕಂಡಿತು.

ನಿಜಕ್ಕೂ ಆಸ್ಟ್ರೇಲಿಯಾದ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಆರ್‌ಸಿಬಿ ಪಾಲಿಗೆ ಸ್ಟಾರ್ ಆಟಗಾರ್ತಿಯಾಗಿ ಕಾಣಿಸಿಕೊಂಡರು. ಒತ್ತಡದ ಸನ್ನಿವೇಶದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿ ತಂಡಕ್ಕೆ ನೆರವಾದ ಇವರು ಆರ್‌ಸಿಬಿಗೆ ಕಪ್ ಗೆಲ್ಲುವಲ್ಲಿ ಮಹತ್ವದ ಕಾಣಿಕೆ ನೀಡಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಲೀಗ್ ಪಂದ್ಯ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ತಂಡ ಜಯ ಸಾಧಿಸುವಲ್ಲಿ ಇವರ ಕೊಡುಗೆ ಅಪಾರ.
ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡಕ್ಕೆ ಬೌಲಿಂಗ್ ಮೂಲಕ ಎಲ್ಲಿಸ್ ಕಾಡಿದರು. ಇವರು 4 ಓವರ್ ಬೌಲಿಂಗ್ ಮಾಡಿ 15 ರನ್ ನೀಡಿ 6 ವಿಕೆಟ್ ಕಬಳಿಸಿದರು. ಪರಿಣಾಮ ಮುಂಬೈ ತಂಡವನ್ನು 113 ರನ್‌ಗಳಿಗೆ ಕಟ್ಟಿ ಹಾಕಿತು. ಆರ್‌ಸಿಬಿ ಈ ಪಂದ್ಯವನ್ನು ಏಳು ವಿಕೆಟ್ ಗಳಿಂದ ಗೆದ್ದು ಬೀಗಿತು.
ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ದಾಖಲಿಸುವಲ್ಲಿ ಪೆರ್ರಿ ಸಾಧನೆ ಅಮೋಘ. ಪಟಪಟನೆ ಒಂದು ಬದಿಯಲ್ಲಿ ವಿಕೆಟ್ ಬೀಳುತ್ತಾ ಇದ್ರೂ ಸಹ ಆತ್ಮವಿಶ್ವಾಸದಿಂದಲೇ ಬ್ಯಾಟ್ ಮಾಡಿದ ಎಲ್ಲಿಸ್ 66 ರನ್‌ಗಳ ಅಮೋಘ ಇನ್ನಿಂಗ್ಸ್ ಕಟ್ಟಿದರು. ಅಲ್ಲದೆ ಬೌಲಿಂಗ್‌ನಲ್ಲಿ ಒಂದು ವಿಕೆಟ್ ಪಡೆದು ಅಬ್ಬರಿಸಿದರು.

ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸುವಲ್ಲಿ ಸೋಫಿ ಮೊಲಿನೆಕ್ಸ್ ಪಾತ್ರ ದೊಡ್ಡದು. ಒಂದು ಹಂತದಲ್ಲಿ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 64 ರನ್‌ಗಳಿಸಿ ಭರ್ಜರಿ ಆರಂಭ ಪಡೆದಿದ್ದಾಗ, ಬೌಲಿಂಗ್ ಮಾಡಿದ ಇವರು ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿ ಪಂದ್ಯದ ದಿಕ್ಕನೇ ಬದಲಿಸಿದರು.
ಆರ್‌ಸಿಬಿ ಈ ಬಾರಿ ಕಪ್ ಗೆಲ್ಲುವಲ್ಲಿ ಈ ಆಟಗಾರರಷ್ಟೇ ಅಲ್ಲ ತಂಡದ ಶ್ರಮ ಇಂಪಾರ್ಟೆಂಟ್. ತಂಡದ ಶ್ರಮದಿಂದಲೇ ಈ ಬಾರಿ ಕಪ್ ನಮ್ದಾಗಿದೆ.