ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು ಪ್ಲೇ ಆಫ್ ಹತ್ತಿರದಲ್ಲಿ ನಿಂತಿದೆ. ಈ ವೇಳೆ ತಂಡಕ್ಕೆ ದೊಡ್ಡ ಪೆಟ್ಟೊಂದು ಬಿದ್ದಿದೆ. ತಂಡದ ಸ್ಟಾರ್ ಆಟಗಾರ ಗಾಯದ ಕಾರಣದಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಔಟ್ ಆಗಿದ್ದಾರೆ. ಇವರಗೆ ಬದಲಿ ಆಟಗಾರನನ್ನು ಸಹ ಆರ್‌ಸಿಬಿ ಘೋಷಿಸಿದೆ. ಹಾಗಿದ್ರೆ ಆ ಬದಲಿ ಆಟಗಾರ ಯಾರು? ಯಾರು ಟೂರ್ನಿಯಿಂದ ಹೊರ ನಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ಆಟಗಾರ ದೇವದತ್ ಪಡಿಕ್ಕಲ್ ಗಾಯಕ್ಕೆ ತುತ್ತಾಗಿದ್ದಾರೆ. ಸ್ನಾಯು ಸೆಳೆತಕ್ಕೆ ತುತ್ತಾಗಿರುವ ದೇವದತ್ ಮುಂದಿನ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಿರಲಿದ್ದಾರೆ. ಇವರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ. ಇವರು ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಭರವಸೆ ಮೂಡಿಸಿದ್ರು.

ದೇವದತ್ ಪಡಿಕ್ಕಲ್ ಆಡಿದ 10 ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 247 ರನ್ ಸಿಡಿಸಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ. ಇವರು ಮಹತ್ವದ ಪಂದ್ಯಗಳಿಗೂ ಮುನ್ನ ತಂಡದಿಂದ ಹೊರ ನಡೆದಿರುವುದು ತಂಡಕ್ಕೆ ದೊಡ್ಡ ಪೆಟ್ಟು ನೀಡಿದೆ. ಆದರೆ ಇವರ ಬದಲಿಗೆ ದೇಶೀಯ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುವ ಮಯಾಂಕ್ ಅಗರ್‌ವಾಲ್‌ಗೆ ಅವಕಾಶ ಲಭಿಸಿದೆ.
ಮಯಾಂಕ್ ಅಗರ್‌ವಾಲ್ ಅವರಿಗೆ ಆರ್‌ಸಿಬಿ ಒಂದು ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಮಯಾಂಕ್ ಈಗಾಗಲೇ ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿರುವ ಆಟಗಾರ. ಇವರು 2011ರಿಂದ 2013ರ ವರೆಗೆ ಬೆಂಗಳೂರು ತಂಡದ ಪರ ಆಡಿದ್ದು, 492 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 129 ಆಸುಪಾಸಿನಲ್ಲಿದೆ. ಇವರು ಪ್ರಸಕ್ತ ದೇಶೀಯ ಟೂರ್ನಿಯಲ್ಲಿ ನೀಡಿದ ಪ್ರದರ್ಶನವನ್ನೇ ಮುಂದುವರೆಸುವ ಅವಶ್ಯಕತೆ ಇದೆ. ಇನ್ನು ಆರ್‌ಸಿಬಿ ಉಳಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಜಯ ಸಾಧಿಸಿದ್ರೂ ಸಹ ಪ್ಲೇ ಆಫ್‌ಗೆ ಸುಲಭವಾಗಿ ಅರ್ಹತೆ ಪಡೆಯಬಹುದಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಮಯಾಂಕ್ ಅಗರ್‌ವಾಲ್‌ಗೆ ಕನಿಷ್ಠ ನಾಲ್ಕು ಪಂದ್ಯಗಳನ್ನು ಆಡುವ ಅವಕಾಶ ಸಿಗಲಿದೆ. ಇವರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಆರ್‌ಸಿಬಿ ಗೆಲುವಿನಲ್ಲಿ ಮಿಂಚಬೇಕಿದೆ. ಅಂದಾಗ ಮಾತ್ರ ಆರ್‌ಸಿಬಿ ಅಗ್ರ 2 ಸ್ಥಾನದಲ್ಲಿ ಉಳಿಯಬಹುದು.

ಡೆಲ್ಲಿ ಕ್ಯಾಪಿಟಲ್ಸ್ ಸಹ ಹ್ಯಾರಿ ಬ್ರೂಕ್ ಬದಲಿಗೆ ಅಫ್ಘಾನಿಸ್ತಾನದ ಬ್ಯಾಟರ್ ಸೆದಿಕುಲ್ಲಾ ಅಟಲ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದೆ. ಹ್ಯಾರಿ ಬ್ರೂಕ್ ಐಪಿಎಲ್ 2025 ಆರಂಭವಾಗುವ ಮುನ್ನ ಹ್ಯಾರಿ ಬ್ರೂಕ್ ಐಪಿಎಲ್‌ನಿಂದ ಹಿಂದೆ ಸರಿದಿದ್ದರು. ಸೆದಿಕುಲ್ಲಾ ಅಟಲ್ ಅವರಿಗೆ 1.25 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇವರು ಈಗಾಗಲೇ 49 ಟಿ20 ಪಂದ್ಯಗಳಲ್ಲಿ 1507 ರನ್‌ಗಳನ್ನು 34.25ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ.