ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಭಾಗವಹಿಸುವ 10 ತಂಡಗಳು ಈಗ ಅಭ್ಯಾಸವನ್ನು ಆರಂಭಿಸಿವೆ. ಹಾಲಿ ಚಾಂಪಿಯನ್ ಆರ್‌ಸಿಬಿ ಸಹ ಈ ಬಾರಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚಿತ್ತ ನೆಟ್ಟಿದೆ. ಇದೇ ವೇಳೆ ಆರ್‌ಸಿಬಿ ತಂಡದ ಮಾರಾಟದ ಸುದ್ದಿಯೊಂದು ಹೊರ ಬಿದ್ದಿದೆ. ಈ ತಂಡವನ್ನು ಖರೀದಿಸಲು ದೈತ್ಯ ಸಂಸ್ಥೆಯೊಂದು ಹೆಜ್ಜೆ ಇಟ್ಟಿದೆ ಎಂದು ತಿಳಿದು ಬಂದಿದೆ. ಹಾಗಿದ್ದರೆ ಆ ಸಂಸ್ಥೆ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.
ಆರ್‌ಸಿಬಿ ಖರೀದಿಸುವ ರೇಸ್‌ನಲ್ಲಿ ಹೊಸ ಹೆಸರು ಮತ್ತೊಂದು ಸೇರ್ಪಡೆ ಆಗಿದೆ. ಆದಿತ್ಯ ಬಿರ್ಲಾ ಗ್ರುಪ್ ಸಹ ಈ ತಂಡದ ಖರೀದಿಗೆ ಆಸಕ್ತಿ ತೋರಿದೆ ಎಂದು ತಿಳಿದು ಬಂದಿದೆ. ಈಗ ರೇಸ್‌ನಲ್ಲಿ ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ಸಹ ಆಸಕ್ತಿ ತೋರಿದೆ ಎಂದು ತಿಳಿದು ಬಂದಿದೆ.

ಆರ್‌ಸಿಬಿ ಈಗ ಬರೀ ತಂಡವಾಗಿ ಉಳಿದಿಲ್ಲ ಬ್ರ್ಯಾಂಡ್ ಆಗಿದೆ. ಇದರ ಮೌಲ್ಯ ದಿನೇ ದಿನೇ ಬೆಳೆಯುತ್ತಲೇ ಇದೆ. ಹೀಗಾಗಿ ಪ್ರಮುಖ ಹೂಡಿಕೆದಾರರು ಈ ತಂಡವನ್ನು ಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಈ ತಂಡವನ್ನು ಖರೀದಿಸಲು ಬಿರ್ಲಾ-ಬ್ಲಿಟ್ಜರ್ ಕಣಕ್ಕೆ ಇಳಿದಿಲ್ಲ ನಿಶ್ಚಿತವಾಗಿ ಈ ಒಪ್ಪಂದವು ಇತಿಹಾಸದಲ್ಲೇ ಅತಿ ದೊಡ್ಡ ಒಪ್ಪಂದವಾಗಬಹುದಾಗಿದೆ. ಹೀಗಾಗಿ ಎಲ್ಲರ ಚಿತ್ತ ಈಗ ಆರ್‌ಸಿಬಿ ತಂಡದ ಮೇಲೆ ನೆಟ್ಟಿದೆ. ಬಿರ್ಲಾ ಹಾಗೂ ಬ್ಲಿಟ್ಜರ್ ಇಬ್ಬರೂ ಸಮನಾಂತರ ಮೌಲ್ಯಮಾಪಾನ ಮಾಡುತ್ತಿವೆ ಎಂದು ತಿಳಿದು ಬಂದಿದೆ. ಆರ್‌ಸಿಬಿ ಹಾಗೂ ಆರ್‌ಆರ್ ತಂಡಗಳ ಬಿಡ್ ಏಕಕಾಲದಲ್ಲಿ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಆರ್‌ಸಿಬಿ ಐಪಿಎಲ್‌ನಲ್ಲಿ ಪುರುಷರ ಹಾಗೂ ಡಬ್ಲ್ಯೂಪಿಎಲ್‌ನಲ್ಲಿ ಮಹಿಳೆಯರ ತಂಡಗಳನ್ನು ಹೊಂದಿದೆ. ಆರ್‌ಸಿಬಿ ಒಡೆತನದ ಆರ್‌ಸಿಎಸ್‌ಪಿಎಲ್ ತನ್ನ ಪಾಲನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ. ಈ ಹಿಂದೆ ಆರ್‌ಆರ್ ತಂಡವನ್ನು ಕೊಳ್ಳಲು ಆಸಕ್ತಿ ಹೊಂದಿದ್ದ ಆದಿತ್ಯ ಬಿರ್ಲಾ ಹಾಗೂ ಬ್ಲಿಟ್ಜರ್ ಸಂಸ್ಥೆಗಳು ಈಗ ಆರ್‌ಸಿಬಿ ಖರೀದಿಸಲು ಮನಸ್ಸು ಮಾಡಿವೆ.
ಹಾಲಿ ಚಾಂಪಿಯನ್ ಆರ್‌ಸಿಬಿ ಒಡೆತನದ ಕಂಪನಿ ಸುಮಾರು 2 ಬಿಲಿಯನ್ ಡಾಲರ್ ಅಥವಾ 16 ಸಾವಿರ ಕೋಟಿಗಳ ಮೌಲ್ಯ ಹೊಂದಿದೆ. ಆದರೆ ಹೂಡಿಕೆದಾರರು ಮಾತ್ರ 1.5 ಬಿಲಿಯನ್ ಡಾಲರ್‌ನಿಂದ 1.7 ಬಿಲಿಯನ್ ಡಾಲರ್ ವರೆಗೆ ಅಂದಾಜಿಸಿದ್ದಾರೆ. ಪರಿಶೀಲನೆಯ ಬಳಿಕವೇ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ. ಐಪಿಎಲ್ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ಅಥವಾ ಕಂಪನಿಯು ಏಕಕಾಲದಲ್ಲಿ ಎರಡು ತಂಡಗಳನ್ನು ಹೊಂದಲು ಸಾಧ್ಯವಿಲ್ಲ. ಆದ್ದರಿಂದ, ಹೂಡಿಕೆದಾರರು ಆರ್‌ಸಿಬಿ ಖರೀದಿಸಿದಲ್ಲಿ, ಬೇರೆ ತಂಡಗಳಿಂದ ದೂರವಿರಬೇಕಾಗುತ್ತದೆ.

19ನೇ ಆವೃತ್ತಿಯ ಐಪಿಎಲ್ ಮಾರ್ಚ್ 28 ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ.