ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದೆ. ಈ ಲೀಗ್‌ನಲ್ಲಿ ಆರ್‌ಸಿಬಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಅವರ ಒಂದು ವಿಡಿಯೊ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಅವರ ಐಪಿಎಲ್ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಈ ವೇಳೆ ವಿರಾಟ್ ಹಲವು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದಾರೆ. ಆದರೆ ಒಂದು ಪ್ರಶ್ನೆಗೆ ತಪ್ಪು ಉತ್ತರ ನೀಡಿದ್ದಾರೆ. ಹಲವು ದಾಖಲೆಗಳನ್ನು ಐಪಿಎಲ್‌ನಲ್ಲಿ ಹೊಂದಿರುವ ವಿರಾಟ್ ಅವರ ನೆನಪಿನ ಶಕ್ತಿಯು ಅಗಾಧವಾಗಿದೆ.

ಈ ಲೀಗ್‌ನಲ್ಲಿ ಚೇಸ್ ಮಾಡುವಾಗ 4000ಕ್ಕೂ ಅಧಿಕ ರನ್ ಕಲೆ ಹಾಕಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಹೊಂದಿರುವ ವಿರಾಟ್, ಒಂದೇ ಆವೃತ್ತಿಯಲ್ಲಿ 973 ರನ್ ಸಿಡಿಸಿ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಐಪಿಎಲ್‌ನಲ್ಲಿ ಗರಿಷ್ಠ ಶತಕ ಹಾಗೂ ಅರ್ಧಶತಕಗಳನ್ನು ಬಾರಿಸಿದ ವಿರಾಟ್ ಅವರಿಗೆ ಬಿಡುವಿನ ಸಮಯದಲ್ಲಿ ಐದು ಪ್ರಶ್ನೆಗಳನ್ನು ಕೇಳಲಾಯಿತು. ಈ ಪ್ರಶ್ನೆಗಳಲ್ಲಿ ಒಂದಕ್ಕೆ ಮಾತ್ರ ವಿರಾಟ್ ತಪ್ಪಾಗಿ ಉತ್ತರಿಸಿದ್ದಾರೆ.
ಐಪಿಎಲ್‌ನಲ್ಲಿ ಯಾವ ಬೌಲರ್‌ಗೆ ನೀವು ಐಪಿಎಲ್‌ನಲ್ಲಿ ಮೊದಲ ಸಿಕ್ಸರ್ ಬಾರಿಸಿದ್ದೀರಿ ಎಂದು ಪ್ರಶ್ನೆ ಕೇಳಲಾಯಿತು. ಆಗ ವಿರಾಟ್ ಕೊಂಚವೂ ಯೋಚಿಸದೆ ಸನತ್ ಜಯಸೂರ್ಯ ಎಂದು ತಿಳಿಸಿದರು. ವಾಂಖೆಡೆ ಅಂಗಳದಲ್ಲಿ ಬಾರಿಸಿದ ಆ ಸಿಕ್ಸರ್ ಬಗ್ಗೆ ನನಗೆ ಈಗಲೂ ನೆನಪಿದೆ ಎಂದಿದ್ದಾರೆ.

2016ರಲ್ಲಿ ನೀವು ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದಾಗ ಇನ್ನೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಬ್ಯಾಟರ್ ಯಾರು ಎಂದು ಕೇಳಿದಾಗ, ಕೊಂಚವೂ ಯೋಚಿಸದ ವಿರಾಟ್ ಥಟ್ಟನೆ ಕೆಎಲ್ ರಾಹುಲ್ ಎಂದು ತಿಳಿಸಿದ್ದಾರೆ. 2011ರಲ್ಲಿ ನಡೆದ ಐಪಿಎಲ್‌ನಲ್ಲಿ ನೀವು ಎಷ್ಟು ರನ್ ಬಾರಿಸಿದ್ದೀರಿ ಎಂಬ ಪ್ರಶ್ನೆಗೆ ವಿರಾಟ್ 505 ಎಂದು ತಪ್ಪು ಉತ್ತರ ನೀಡಿದರು. ಆದರೆ ಇದರ ಸರಿಯಾದ ಉತ್ತರ 557 ಆಗಿತ್ತು.
ನಾಯಕರಾಗಿ ಮೊದಲ ಆವೃತ್ತಿಯಲ್ಲಿ ನೀವು ಎಷ್ಟು ರನ್ ಗಳಿಸಿದ್ದೀರಿ ಎಂದು ಕೇಳಲಾಯಿತು. ಆಗ ವಿರಾಟ್ 638 ರನ್ ಅಥವಾ ಹೆಚ್ಚು ಕಡಿಮೆ ಎಂದು ತಿಳಿಸಿದ್ದರು. ಆದರೆ 634 ರನ್ ಸಿಡಿಸಿದ ದಾಖಲೆ ಹೊಂದಿದ್ದರು. ಇನ್ನು ಐಪಿಎಲ್‌ನಲ್ಲಿ ದಾಖಲೆಯ 229 ರನ್‌ಗಳ ಜೊತೆಯಾಟವನ್ನು ಆಡಿದಾಗ ನೀವು ಯಾರೊಂದಿಗೆ ಜೊತೆಯಾಟವನ್ನು ಮಾಡಿದ್ದೀರಿ ಎಂದು ಕೇಳಿದಾಗ, ವಿರಾಟ್ ಎಬಿಡಿ ಎಂದು ತಿಳಿಸಿದ್ದಾರೆ.
ಈ ಪ್ರಶ್ನೆಗಳಿಗೆ ವಿರಾಟ್ ನೀಡಿದ ಉತ್ತರವನ್ನು ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಚೇಸಿಂಗ್ ಸ್ಟಾರ್ ಮೈದಾನದಲ್ಲಿ ಅಷ್ಟೇ ಸೂಪರ್ ಬ್ಯಾಟರ್ ಅಲ್ಲ ಅವರು ಜ್ಞಾಪಶಕ್ತಿಯೂ ಅಗಾಧವಾಗಿದೆ ಎಂದು ಬಣ್ಣಿಸುತ್ತಿದ್ದಾರೆ.