ಫೈನಲ್ಸ್ ಸಿಂಹಾಸನದತ್ತ RCB ಲಗ್ಗೆ; ಈ ಬಾರಿಯೂ ಕಪ್ ನಮ್ದೇ ಎನ್ನಲೊಂದೇ ಹೆಜ್ಜೆ
ಧರ್ಮಶಾಲಾ: ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್)ನ ಮೊದಲ ಕ್ವಾಲಿಫೈಯರ್‌ನ ಒತ್ತಡವನ್ನು ಹೇಗೆ ಮೆಟ್ಟಿನಿಲ್ಲಬೇಕು ಎಂಬುದನ್ನು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಬೆಂಗಳೂರು ಭರ್ಜರಿಯಾಗಿ ತೋರಿಸಿದೆ. ಮಂಗಳವಾರ ನಡೆದ ಈ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಸಂಘಟಿತ ಆಟದ ಪ್ರದರ್ಶನ ನೀಡಿ ಗುಜರಾತ್ ಟೈಟಾನ್ಸ್ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ. ಪ್ರಸಕ್ತ ಐಪಿಎಲ್‌ನ ಫೈನಲ್ ಪಂದ್ಯ ಮೇ 31 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.
ಆರ್‌ಸಿಬಿ ಕ್ವಾಲಿಫೈಯರ್‌ನಲ್ಲಿ ಸೋತಿದ್ದು ಟಾಸ್ ಸೋತು ಮಾತ್ರ. ಉಳಿದ ಎಲ್ಲ ವಿಭಾಗಗಳಲ್ಲೂ ಆರ್‌ಸಿಬಿ ಸಂಘಟಿತ ಆಟದ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್‌ನಲ್ಲಿ ರಜತ್ ಪಾಟೀದಾರ್ ಅಬ್ಬರಿಸಿದರು. ನಾಯಕನ ಆಟವನ್ನು ಆಡಿದ ರಜತ್ ಪಾಟೀದಾರ್ ಆರ್‌ಸಿಬಿ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲರಾದರು. ಪರಿಣಾಮ ಆರ್‌ಸಿಬಿ 255 ರನ್‌ಗಳ ಸವಾಲಿನ ಮೊತ್ತದ ಗುರಿಯನ್ನು ಗುಜರಾತ್ ಟೈಟಾನ್ಸ್‌ಗೆ ನೀಡಿತು.

ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಪವರ್ ಕಟ್
ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ವಿಭಾಗವನ್ನು ಈ ಲೀಗ್‌ನಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ಮುನ್ನಡೆಸಿದ್ದಾರೆ. ಆದರೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿತು. ಆರಂಭಿಕ ಆಟಗಾರ ಸಾಯಿ ಸುದರ್ಶನ್ ಹಿಟ್ ವಿಕೆಟ್ ರೂಪದಲ್ಲಿ ಔಟ್ ಆದರು.
ನಾಯಕ ಶುಭಮನ್ ಗಿಲ್ ಅವರು ಒತ್ತಡವನ್ನು ಮೆಟ್ಟಿ ನಿಲ್ಲಲಿಲ್ಲ. ಇವರು ಭುವನೇಶ್ವರ್ ಕುಮಾರ್ ಅವರು ಎಸೆದ ಗುಡ್ ಲೆಂಥ್ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಬೋಲ್ಡ್ ಆದರು. ಕೇವಲ 11 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 29 ರನ್ ಸಿಡಿಸಿದ್ದ ಜೋಸ್ ಬಟ್ಲರ್ ಜೋಶ್ ಹ್ಯಾಜಲ್‌ವುಡ್ ವುಡ್ ತೋಡಿದ ಖೆಡ್ಡಾಗೆ ಬಲಿಯಾದರು.
ಒಂದೇ ಓವರ್‌ನಲ್ಲಿ ಎರಡು ವಿಕೆಟ್
ಪವರ್ ಪ್ಲೇನ ಕೊನೆಯ ಓವರ್ ಎಸೆಯಲು ಬಂದ ರಸೀಕ್ ಸಾಲಂ ದಾರ್ ಅಮೋಘ ದಾಳಿಯನ್ನು ಸಂಘಟಿಸಿದರು. ಇವರು ಈ ಓವರ್‌ನ ಮೊದಲ ಎಸೆತದಲ್ಲಿ ನಿಶಾಂತ್ ಸಿಂಧು ಹಾಗೂ ನಾಲ್ಕನೇ ಎಸೆತದಲ್ಲಿ ಜೇಸನ್ ಹೋಲ್ಡರ್ ಅವರಿಗೆ ಪೆವಿಲಿಯನ್‌ಗೆ ಅಟ್ಟಿದರು.
ಗುಜರಾತ್ ಟೈಟಾನ್ಸ್ ಪರ ರಾಹುಲ್ ತೆವಾಟಿಯಾ ಅವರನ್ನು ಹೊರತು ಪಡಿಸಿದರೆ ಬೆರೆ ಯಾವೊಬ್ಬ ಬ್ಯಾಟರ್ ರನ್ ಕಲೆ ಹಾಕಲಿಲ್ಲ. ಒತ್ತಡ ಮೆಟ್ಟಿನಿಂತು ಬ್ಯಾಟ್ ಮಾಡಿದ ರಾಹುಲ್ ತೆವಾಟಿಯಾ ಅರ್ಧಶತಕ ಬಾರಿಸಿ ಮಿಂಚಿದರು. ಈ ಗೆಲುವಿನೊಂದಿಗೆ ಆರ್‌ಸಿಬಿ ಭರ್ಜರಿ ಜಯ ಸಾಧಿಸಿ 5ನೇ ಬಾರಿಗೆ ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಆರಂಭ ಸಾಧಾರಣವಾಗಿತ್ತು.ಇನ್ನಿಂಗ್ಸ್ ಆರಂಭಿಸಿದ ವೆಂಕಟೇಶ್ ಅಯ್ಯರ್ (19 ರನ್) ಮತ್ತು ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ 21 ರನ್ ಸೇರಿಸಿದರು. ಆ ಬಳಿಕ ವಿರಾಟ್ ಕೊಹ್ಲಿಗೆ (43) ಹಾಗೂ ದೇವದತ್ ಪಡಿಕ್ಕಲ್ (30) ಪವರ್‌ಪ್ಲೇನಲ್ಲಿ ಅಬ್ಬರಿಸಿ, ಎರಡನೇ ವಿಕೆಟ್‌ಗೆ 38 ಎಸೆತಗಳಲ್ಲಿ 72 ರನ್‌ಗಳ ಕಾಣಿಕೆ ನೀಡಿದರು. ಈ ಜೋಡಿಯನ್ನು ಜೇಸನ್ ಹೋಲ್ಡರ್ ಒಂದೇ ಓವರ್‌ನಲ್ಲಿ ಪೆವಿಲಿಯನ್‌ಗೆ ಅಟ್ಟಿದರು.
ಆದರೆ, 5ನೇ ವಿಕೆಟ್‌ಗೆ ಜೊತೆಯಾದ ಕೃನಾಲ್ ಪಾಂಡ್ಯ (43 ರನ್, 28 ಎಸೆತ) ಮತ್ತು ನಾಯಕ ರಜತ್ ಪಾಟಿದಾರ್ ಜೋಡಿ ಕೇವಲ 47 ಎಸೆತಗಳಲ್ಲಿ 95 ರನ್ ಚಚ್ಚಿ ತಂಡಕ್ಕೆ ಆಸರೆಯಾಯಿತು. ಸಿಕ್ಕ ಜೀವದಾನದ ಲಾಭ ಪಡೆದ ಪಾಟಿದಾರ್, ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ ಅಜೇಯ 93 ರನ್ ಸಿಡಿಸಿ ಅಬ್ಬರಿಸಿದರು.
5ನೇ ಬಾರಿ ಫೈನಲ್‌ಗೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದಕ್ಕೂ ಮೊದಲು 2009, 2011, 2016, 2025ರಲ್ಲಿ ಈ ಮೊದಲು ಐಪಿಎಲ್‌ನ ಫೈನಲ್‌ಗೆ ಅರ್ಹತೆ ಪಡೆದಿತ್ತು. ಈಗ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಐದನೇ ಬಾರಿಗೆ ಪ್ರಶಸ್ತಿ ಸುತ್ತಿನ ಕಾದಾಟಕ್ಕೆ ಅರ್ಹತೆ ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

