ಐಪಿಎಲ್ ರಿಟೇನ್ಷನ್ ಲೀಸ್ಟ್ ನೀಡಲು ಅಕ್ಟೋಬರ್ 31 ರಂದು ಕೊನೆಯ ದಿನವಾಗಿತ್ತು. ಐಪಿಎಲ್ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ನೆರವಾಗುವ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆರ್‌ಸಿಬಿ ಸಹ ಅಳೆದು ತೂಗಿ ಹೆಚ್ಚಿನ ಹಣವನ್ನು ವ್ಯರ್ಥ ಮಾಡದೆ, ಆಟಗಾರರಿಗೆ ಮಣೆ ಹಾಕಿದೆ. ಆರ್‌ಸಿಬಿ ತಂಡದಲ್ಲಿ ಉಳಿಸಿಕೊಂಡ ಆಟಗಾರರು ಕಳೆದ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಹೀಗಾಗಿ ಇವರು 2025ರಲ್ಲಿ ಮತ್ತೆ ಆರ್‌ಸಿಬಿ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ.
ಆರ್‌ಸಿಬಿ ತಂಡ ತನ್ನ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ರಜತ್ ಪಟಿದಾರ್ ಅವರನ್ನು ಸಹ ತಂಡದಲ್ಲಿ ಉಳಿಸಿಕೊಂಡಿದೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್‌ಗೆ ಗೇಟ್ ಪಾಸ್ ನೀಡಿ, ಯಶ್ ದಯಾಳ್ ಅವರಿಗೆ ಅವಕಾಶ ನೀಡಲಾಗಿದೆ. ಇನ್ನು ಆರ್‌ಸಿಬಿ ಐಪಿಎಲ್ ಆಕ್ಷನ್ ಮೇಲೆ ಕಣ್ಣು ನೆಟ್ಟಿದ್ದು, ಹರಾಜಿನ ವೇಳೆ ಆರ್‌ಸಿಬಿ ಮೂವರು ಸ್ಟಾರ್ ಆಟಗಾರರಿಗೆ ಬಾಜಿ ಕಟ್ಟುವ ಸಾಧ್ಯತೆ ಇದೆ.

ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಫಾಫ್ ಡುಪ್ಲೇಸಿಸ್ ಸ್ಥಾನವನ್ನು ತುಂಬ ಬಲ್ಲ ಪ್ಲೇಯರ್‌ಗೆ ಮಣೆ ಹಾಕಲಿದೆ. ಆರ್‌ಸಿಬಿ ನಾಯಕ, ವಿಕೆಟ್ ಕೀಪರ್, ಆರಂಭಿಕ ಆಟಗಾರನಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ರಿಲೀಸ್ ಆಗಿರುವ ಕನ್ನಡಿಗ ಕೆಎಲ್ ರಾಹುಲ್ ಅವರ ಮೇಲೆ ಹಣದ ಹೊಳೆಯನ್ನು ಹರಿಸಬಹುದು.
ರಾಹುಲ್ 2013 ರಲ್ಲಿ RCB ಯೊಂದಿಗೆ ತಮ್ಮ IPL ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರಿಗೆ ತವರಿನಲ್ಲಿ ಅಪಾರ ಅಭಿಮಾನಿಗಳ ಬಳಗವಿದ್ದು, ರಾಹುಲ್ ಅವರಿಗೆ ಹರಾಜಿನಲ್ಲಿ ಆದ್ಯತೆ ನೀಡಲಾಗುವುದು. ಇವರು ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಗುಜರಾತ್ ಟೈಟನ್ಸ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಯಶ್ ದಯಾಳ್ ಅವರನ್ನು ರಿಲೀಸ್ ಮಾಡಿತ್ತು. ಕಳೆದ ಬಾರಿ ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರಿಂದ ಇವರಿಗೆ ಮಣೆ ಹಾಕಲಾಗಿದೆ. ಇವರೊಂದಿಗೆ ಬೌಲಿಂಗ್ ನೊಗ ಹೊರ ಬಲ್ಲ ಮತ್ತೊಬ್ಬ ಬೌಲರ್‌ನನ್ನು ಆರ್‌ಸಿಬಿ ಹುಡುಕಾಟ ನಡೆಸಿದೆ. ಅದು ಭಾರತೀಯ ಬೌಲರ್ ಆದ್ರೂ ಸಹ ಬೆಸ್ಟ್.
ಎಸ್‌ಆರ್‌ಎಚ್ ಕೈ ಬಿಟ್ಟಿರುವ ಭುವನೇಶ್ವರ್ ಕುಮಾರ್ ಅವರಿಗೆ ಆರ್‌ಸಿಬಿ ರೆಡ್ ಕಾರ್ಪೆಟ್ ಹಾಕಬಹುದು. ಇವರು ಡೆತ್ ಓವರ್‌ಗಳಲ್ಲಿ ತಮ್ಮ ಸ್ಲೋವರ್ ಒನ್ ಎಸೆತದ ಮೂಲಕ ಎದುರಾಳಿಗಳಿಗೆ ಕಾಟ ನೀಡಬಲ್ಲರು. ಇವರು ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ 11 ವಿಕೆಟ್ ಕಬಳಿಸಿದ್ದರು.

ಆರ್‌ಸಿಬಿ ತಂಡಕ್ಕೆ ಕಳೆದ ಕೆಲವು ವರ್ಷಗಳಿಂದ ಕಾಡಿದ್ದ ಒಂದು ಸಮಸ್ಯೆ ಸ್ಪಿನ್ ಬೌಲರ್ ಕೊರತೆ. ಯಜುವೇಂದ್ರ ಚಹಾಲ್ ಅವರನ್ನು ಕೈ ಬಿಟ್ಟು ಕೈ ಸುಟ್ಟುಕೊಂಡಿದ್ದ ಆರ್‌ಸಿಬಿ ಈಗ ಮತ್ತೆ ಅವರಿಗೆ ಬಾಜಿ ಕಟ್ಟಬಹುದು. ಚಹಾಲ್ ರಾಜಸ್ಥಾನ ರಾಯಲ್ಸ್ ಪರ ಕಳೆದ ಆವೃತ್ತಿಯಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಪವರ್ ಪ್ಲೇ ಹಾಗೂ ಮಿಡ್ಲ್ ಆರ್ಡರ್‌ಗಳಲ್ಲಿ ಮೊನಚಾದ ದಾಳಿ ಸಂಘಟಿಸಬಲ್ಲರು. ಅಲ್ಲದೆ ತಂಡಕ್ಕೆ ಅಗತ್ಯವಿದ್ದಾಗ ವಿಕೆಟ್ ಬೇಟೆ ನಡೆಸುವ ಕ್ಷಮತೆ ಹೊಂದಿದ್ದಾರೆ.