ಮುಂಬೈ, ಮೇ 7: ಸದ್ಯ ನಡೆಯುತ್ತಿರುವ ಐಪಿಎಲ್ 2022ರ 15ನೇ ಋತುವಿನಲ್ಲಿ ಮಿಶ್ರ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್‌ಗೆ ಪ್ರವೇಶ ಪಡೆಯುವ ತಂಡಗಳಲ್ಲೊಂದಾಗಿದೆ.
ಭಾನುವಾರ ಮಧ್ಯಾಹ್ನ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ತನ್ನ 12ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಸಿರು ಜೆರ್ಸಿ ಧರಿಸಿ ಆಡುವುದನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.
ಆಕರ್ಷಕ ಹಸಿರು ತೊಟ್ಟಿರುವ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಇದರಿಂದ ತಂಡಕ್ಕೆ ಗ್ಲಾಮರ್ ಬಂದರೂ ಹಸಿರು ಜೆರ್ಸಿಯಲ್ಲಿ ಆರ್‌ಸಿಬಿಗೆ ಅದೃಷ್ಟ ಖುಲಾಯಿಸಿಲ್ಲ. ಹಸಿರು ಜರ್ಸಿಯಲ್ಲಿ ಆಡಿದ ಬಹುತೇಕ ಪಂದ್ಯಗಳನ್ನು ಗೆಲ್ಲದಿರುವುದು ಬ್ಯಾಡ್ ಲಕ್ ಎನ್ನಬಹುದು. ಆಧರೆ ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡ ಈ ಬಾರಿ ಇತಿಹಾಸ ಬರೆಯಬಹುದೆಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

2011ರಿಂದ ಐಪಿಎಲ್ ಟೂರ್ನಿಯಲ್ಲಿ ಹಸಿರು ಜೆರ್ಸಿ ಧರಿಸಿ ಆಡುವುದನ್ನು ಆರ್‌ಸಿಬಿ ಆರಂಭಿಸಿದೆ. ಪ್ರತಿ ಋತುವಿನ ಒಂದು ಪಂದ್ಯದಲ್ಲಿ ಆರ್‌ಸಿಬಿ ತಂಡವು ಹಸಿರು ಜರ್ಸಿಯನ್ನು ಧರಿಸಿ, ಅಭಿಮಾನಿಗಳಲ್ಲಿ ಮರಗಳನ್ನು ಕತ್ತರಿಸದೆ ಮತ್ತು ಅವುಗಳನ್ನು ಹೆಚ್ಚು ಬೆಳೆಸಿ ಭೂಮಿಯನ್ನು ಉಳಿಸಲು ಜಾಗೃತಿ ಮೂಡಿಸುತ್ತದೆ.
ಆರ್‌ಸಿಬಿಯ ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ತಮ್ಮ ಅಭಿಮಾನಿಗಳಿಗೆ ಹಸಿರು ಜೆರ್ಸಿಯ ನೋಟವನ್ನು ನೀಡಿದೆ. ಸಾಕಷ್ಟು ಅಭಿಮಾನಿಗಳು ಅದನ್ನು ಇಷ್ಟಪಡುತ್ತಿರುವಂತೆ ತೋರುತ್ತಿದೆ.
ಆರ್‌ಸಿಬಿ ಟ್ವಿಟ್ಟರ್‌ನಲ್ಲಿ ರೆಡ್‌ನಿಂದ ಗ್ರೀನ್‌ಗೆ, ನಮ್ಮ ಹುಡುಗರು ಗೆಲುವಿಗಾಗಿ ಸಿದ್ಧರಾಗಿದ್ದಾರೆ. ಹೇಗಿದೆ ನಮ್ಮ ಗ್ರೀನ್ ಜೆರ್ಸಿ? 12ನೇ ಮ್ಯಾನ್ ಆರ್ಮಿ (ಅಭಿಮಾನಿಗಳು) ನಿಮಗೆ ಇಷ್ಟವಾಗಿದೆಯೇ? ಎಂದು ಕೇಳಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ವಿರಾಟ್ ಕೊಹ್ಲಿಯ ಮೇಲೆ ನೆಟ್ಟಿವೆ. ಈವರೆಗೆ ಕೇವಲ ಒಂದು ಅರ್ಧ ಶತಕ ಬಾರಿಸಿದ್ದರಿಂದ ವಿರಾಟ್ ಕೊಹ್ಲಿ ನಿರೀಕ್ಷೆಗಳಿಗೆ ತಕ್ಕಂತೆ ಆಟವಾಡಿಲ್ಲ. ಆದರೆ ಹಸಿರು ಜೆರ್ಸಿಯಲ್ಲಿ ಅದೃಷ್ಟದಲ್ಲಿ ಬದಲಾವಣೆ ತರುತ್ತದೆ ಎಂದು ಅವರ ಅಭಿಮಾನಿಗಳು ಆಶಿಸುತ್ತಿದ್ದಾರೆ.
ಈ ಮಧ್ಯೆ, ಆರ್‌ಸಿಬಿ ತಮ್ಮ ಐಪಿಎಲ್ ಅಭಿಯಾನ ಇನ್ನೇನು ಮುಗಿದೇ ಹೋಯಿತು ಎನ್ನುವ ಹೊತ್ತಿಗೆ ಮತ್ತೆ ಆವೇಗವನ್ನು ಪಡೆದುಕೊಂಡಿದ್ದು, ಪ್ಲೇಆಫ್‌ಗೇರಲು ಕನಸು ಕಾಣುತ್ತಿದೆ. ಈವರೆಗಿನ 11 ಪಂದ್ಯಗಳಲ್ಲಿ ಆರು ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ.
ಹಸಿರು ಜರ್ಸಿ ಪಂದ್ಯಗಳಲ್ಲಿ RCB ದಾಖಲೆ
2011 - ಗೆಲುವು
2012 - ಸೋಲು
2013 - ಸೋಲು
2014 - ಸೋಲು
2015 - ಫಲಿತಾಂಶವಿಲ್ಲ
2016 - ಗೆಲುವು.
2017 - ಸೋಲು
2018 - ಸೋಲು
2019 - ಸೋಲು
2020 - ಸೋಲು
2021 - ಸೋಲು (ನೀಲಿ ಜರ್ಸಿ)