ಭಾನುವಾರ, ಮಾರ್ಚ್ 17ರಂದು ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ವಿರುದ್ಧದ ಐತಿಹಾಸಿಕ ಗೆಲುವಿನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಯ ಫೈನಲ್‌ನಲ್ಲಿ ತಮ್ಮ ಮೊದಲ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಮೊದಲ ಆವೃತ್ತಿಯಲ್ಲಿ ಕಳಪೆ ಪ್ರದರ್ಶನದ ನಂತರ, ಆರ್‌ಸಿಬಿ ಮಹಿಳಾ ತಂಡವು ಅಂತಿಮವಾಗಿ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.

ಪ್ರಶಸ್ತಿ ಗೆಲುವಿನತ್ತ ಆರ್‌ಸಿಬಿ ತಂಡದ ಪ್ರಯಾಣವು ಅನುಕರಣೀಯ ಪ್ರದರ್ಶನಗಳಿಂದ ಗುರುತಿಸಲ್ಪಟ್ಟಿದೆ. ವಿಶೇಷವಾಗಿ ಶ್ರೇಯಾಂಕಾ ಪಾಟೀಲ್ ನೇತೃತ್ವದ ಸ್ಪಿನ್ ವಿಭಾಗವು, ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಲೈನ್‌ಅಪ್ ಅನ್ನು ಮುರಿಯಿತು. ಹೀಗಾಗಿ 18.4 ಓವರ್‌ಗಳಲ್ಲಿ ಸಾಧಾರಣ 113 ರನ್‌ಗಳಿಗೆ ನಿರ್ಬಂಧಿಸಿತು.
ನಂತರ ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಅವರ ಬ್ಯಾಟಿಂಗ್ ಪರಾಕ್ರಮವು ಆರ್‌ಸಿಬಿ ತಂಡದ ಸುಲಭ ಚೇಸಿಂಗ್ ಅನ್ನು ಖಚಿತಪಡಿಸಿತು. ಆರ್‌ಸಿಬಿ ಕೈಯಲ್ಲಿ ಎಂಟು ವಿಕೆಟ್‌ಗಳು ಮತ್ತು ಮೂರು ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು.
ಇದೀಗ ಟ್ರೋಫಿ ಗೆದ್ದ ನಂತರ, ಮೊದಲ ಬಾರಿಗೆ ಚಾಂಪಿಯನ್ ತಂಡ ಅದ್ಧೂರಿ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ಆರ್‌ಸಿಬಿ ಮಹಿಳಾ ತಂಡವು ತವರು ನಗರವಾದ ಬೆಂಗಳೂರಿನಲ್ಲಿ ಪರೇಡ್ ನಡೆಯುವ ಸಾಧ್ಯತೆಯಿದೆ.

ಹೆಚ್ಚುವರಿಯಾಗಿ, ಮಂಗಳವಾರ, ಮಾರ್ಚ್ 19ರಂದು ನಿಗದಿಯಾಗಿರುವ 2024ರ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಆರ್‌ಸಿಬಿ ಮಹಿಳಾ ತಂಡದ ಹಾಜರಾತಿಯನ್ನು ಖಚಿತಪಡಿಸಿದ ನಾಯಕಿ ಸ್ಮೃತಿ ಮಂಧಾನ ಅವರು ಪ್ರತಿಷ್ಠಿತ ಈವೆಂಟ್‌ನ ಭಾಗವಾಗಲು ತಮ್ಮ ತಂಡದ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಮಹಿಳಾ ತಂಡವು ಅನ್‌ಬಾಕ್ಸ್ ಕಾರ್ಯಕ್ರಮಕ್ಕೆ ಹಾಜರಾಗಿತ್ತು. ಅಲ್ಲಿ ಫ್ರಾಂಚೈಸಿ ಮಾಜಿ ಆಟಗಾರರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಸಹ ಗೌರವಿಸಲಾಯಿತು. ಈ ವರ್ಷ ಹಾಲಿ ಚಾಂಪಿಯನ್ ಆಗಿ ಸ್ಮೃತಿ ಮಂಧಾನ ಪಡೆ ತವರಿನ ಅಭಿಮಾನಿಗಳಿಂದ ಖಂಡಿತವಾಗಿ ಭವ್ಯವಾದ ಸ್ವಾಗತವನ್ನು ಪಡೆಯುತ್ತದೆ.
RCB Unbox 2024 ಈವೆಂಟ್ ಅದ್ಭುತವಾದ ಕಾರ್ಯಕ್ರಮವಾಗಲಿದೆ ಎಂದು ಭರವಸೆ ನೀಡಿದೆ. ಇದು ರಾಯಲ್ ಚಾಲೆಂಜರ್ಸ್ Bangalore ನಿಂದ ರಾಯಲ್ ಚಾಲೆಂಜರ್ಸ್ Bengaluru ಎಂದು ಸಂಭಾವ್ಯ ಹೆಸರು ಬದಲಾವಣೆಯನ್ನು ಒಳಗೊಂಡಿರುತ್ತದೆ.
ಜೊತೆಗೆ ಹೆಸರಾಂತ ಕಲಾವಿದರ ಪ್ರದರ್ಶನಗಳು ಮತ್ತು ರಿಷಭ್ ಶೆಟ್ಟಿ ಸೇರಿದಂತೆ ಕನ್ನಡ ಸಿನಿ ತಾರೆಯರ ಪ್ರದರ್ಶನಗಳು ನಡೆಯಲಿವೆ. ಹೆಚ್ಚುವರಿಯಾಗಿ, ಖ್ಯಾತ ಸಂಗೀತ ಐಕಾನ್ ಅಲನ್ ವಾಕರ್ ಕೂಡ ವೇದಿಕೆಯಲ್ಲಿ ಮೋಡಿ ಮಾಡಲಿದ್ದಾರೆ.
ಕ್ರಿಕೆಟ್ ಜಗತ್ತು ಆರ್‌ಸಿಬಿ ಫ್ರಾಂಚೈಸಿಯ ಗೆಲುವನ್ನು ಆಚರಿಸುತ್ತಿರುವಾಗ, ಅವರ ವಿಜಯವು ನಿಷ್ಠಾವಂತ ಅಭಿಮಾನಿಗಳು ಮತ್ತು ಆಟಗಾರರಿಗೆ ಸಮಾನವಾಗಿ ಸ್ಫೂರ್ತಿ ನೀಡುವ ಪರಿಶ್ರಮ ಮತ್ತು ದೃಢತೆಗೆ ಸಾಕ್ಷಿಯಾಗಿದೆ.
ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪ್ರಶಸ್ತಿಯನ್ನು ಗೆಲ್ಲುವ ಮೂಲಕ, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ 16 ವರ್ಷಗಳ ಟ್ರೋಫಿ ಬರವನ್ನು ಕೊನೆಗೊಳಿಸಿತು.
ಆರ್‌ಸಿಬಿ ತಂಡದ ಪ್ರಶಸ್ತಿ ಗೆಲುವು ಬೆಂಗಳೂರು ನಗರದಾದ್ಯಂತ ಹರ್ಷದ ಅಲೆಯನ್ನು ಎಬ್ಬಿಸಿತು. ಐತಿಹಾಸಿಕ ವಿಜಯವನ್ನು ಆಚರಿಸಲು ಅಭಿಮಾನಿಗಳು ರಾತ್ರಿಯೆಲ್ಲಾ ಬೀದಿಗಿಳಿದಿದ್ದರು.
ಆರ್‌ಸಿಬಿ ಫ್ರಾಂಚೈಸ್ ಅಂತಿಮವಾಗಿ ತನ್ನ ಕ್ಯಾಬಿನೆಟ್‌ಗೆ ಟ್ರೋಫಿಯನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದರಿಂದ 'ಆರ್‌ಸಿಬಿ, ಆರ್‌ಸಿಬಿ', 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಗಳು ನಗರದಾದ್ಯಂತ ಕೇಳಿಬಂದವು.