CSK vs RCB: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣವಾಯ್ತಾ ಆ ಮಹಾ ಪ್ರಮಾದ?

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಅನುಭವಿಸಿದ್ದು ಟೂರ್ನಿಯಲ್ಲಿ ಎರಡನೇ ಸೋಲು ಕಂಡಿದೆ. ಈ ಆರ್‌ಸಿಬಿ ತಂಡದ ಗೆಲುವಿನ ಓಟಕ್ಕೆ ಕಡಿವಾಣ ಬಿದ್ದಿದೆ. ಮತ್ತೊಂದೆಡೆ ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಸೋಲಿಗೆ ಪರಾಮರ್ಶೆಗಳು ನಡೆಯುತ್ತಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಮಾಡಿದ ಒಂದು ಪ್ರಮಾದ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದಿದ್ದಾರೆ. ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರ ಹೊರತಾಗಿಯೂ ಆರ್‌ಸಿಬಿ ತಂಡ ಬೌಲಿಂಗ್‌ನಲ್ಲಿ ಯಶಸ್ಸು ಸಾಧಿಸದಿರಲು ಅದೇ ಪ್ರಮಾದವೇ ಕಾರಣವಾಯಿತು ಎಂದಿದ್ದಾರೆ ಬ್ರಾಡ್ ಹಾಗ್.
ಹಾಗಾದರೆ ಬ್ರಾಡ್ ಹಾಗ್ ಹೇಳಿದ್ದೇನು? ಆರ್‌ಸಿಬಿ ತಂಡ ಮಾಡಿದ ಆ ಮಹಾ ಪ್ರಮಾದ ಯಾವುದು? ಮುಂದೆ ಓದಿ..

ರಣತಂತ್ರದಲ್ಲಿ ಆರ್‌ಸಿಬಿಗಿಂತ ಸಿಎಸ್‌ಕೆ ಮುಂದಿತ್ತು
ಆರ್‌ಸಿಬಿ ಹಾಗೂ ಚೆನ್ನೈ ಸೂರ್ ಕಿಂಗ್ಸ್ ನಡುವಿನ ಹಣಾಹಣಿಗೆ ಸಂಬಂಧಿಸಿದಂತೆ ಮಾತನಾಡಿದ ಬ್ರಾಡ್ ಹಾಗ್ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್‌ಸಿಬಿಗಿಂತ ರಣತಂತ್ರದ ವಿಚಾರವಾಗಿ ಮುಂದಿತ್ತು ಎಂದು ಹೇಳಿದ್ದಾರೆ. ಸತತ ನಾಲ್ಕು ಸೋಲು ಅನುಭವಿಸಿದ ಬಳಿಕ ಸಿಎಸ್‌ಕೆ ಭರ್ಜರಿ ಗೆಲುವು ಸಂಪಾದಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಸಿಎಸ್‌ಕೆ ತಂಡ ನಿಗದಿತ 20 ಓವರ್‌ಗಳಲ್ಲಿ 216 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಮೂರನೇ ವಿಕೆಟ್‌ಗೆ ರಾಬಿನ್ ಉತ್ತಪ್ಪ ಹಾಗೂ ಶಿವಂ ದುಬೆ ಮಧ್ಯೆ 165 ರನ್‌ಗಳ ಜೊತೆಯಾಟ ಹರಿದು ಬಂದಿತ್ತು.

ಆರ್‌ಸಿಬಿಯ ರಣತಂತ್ರವನ್ನು ಪ್ರಶ್ನಿಸಿದ ಬ್ರಾಡ್ ಹಾಗ್
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಸಂದರ್ಭದಲ್ಲಿ ಆರಂಭಿಕ 10 ಓವರ್‌ಗಳಲ್ಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹೆಚ್ಚು ಸ್ಪಿನ್ ಬೌಲಿಂಗ್ ಬಳಸದ ರಣತಂತ್ರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದರಲ್ಲೂ ಮ್ಯಾಚ್ ವಿನ್ನರ್ ಹಸರಂಗ ಅವರನ್ನು 11ನೇ ಓವರ್ ವರೆಗೆ ಬಳಸದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಸರಂಗಾ ಇನ್ನೂ ಮೊದಲೇ ಬೌಲಿಂಗ್ ದಾಳಿಗೆ ಇಳಿಯಬೇಕಾಗಿತ್ತು ಎಂದ ಹಾಗ್ ಅವರು 4 ಓವರ್‌ಗಳ ಬೌಲಿಂಗ್ ಕೂಡ ಸಂಪೂರ್ಣ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಆರ್‌ಸಿಬಿ ಮಾಡಿದ ಪ್ರಮಾದ ಹೇಳಿದ ಹಾಗ್
"ಚೆನ್ನೈ ಸೂಪರ್ ಕಿಂಗ್ಸ್ ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಆರ್‌ಸಿಬಿಗಿಂತ ರಣತಂತ್ರದಲ್ಲಿ ಮುಂದಿತ್ತು. ಮೊದಲ 10 ಓವರ್‌ಗಳಲ್ಲಿ ಸಿಎಸ್‌ಕೆ 7 ಓವರ್‌ಗಳನ್ನು ಸ್ಪಿನ್ನರ್‌ಗಳಿಂದ ಮಾಡಿಸಿತ್ತು. ಆದರೆ ಆರ್‌ಸಿಬಿ ಕೇವಲ 3 ಓವರ್‌ಗಳನ್ನು ಮಾತ್ರವೇ ಸ್ಪಿನ್ನರ್‌ಗಳಿಂದ ಮಾಡಿಸಿತ್ತು. ಅದರಲ್ಲೂ ಹಸರಂಗಾ 11ನೇ ಓವರ್ ತನಕ ಬೌಲಿಂಗ್ ನಡೆಸದೆ ಇರುವುದು ಮಹಾ ಪ್ರಮಾದವಾಗಿದೆ. ನಿಮ್ಮಲ್ಲಿರುವ ರಹಸ್ಯ ಅಸ್ತ್ರವನ್ನು ನೀವು ಮೊದಲೇ ಬಳಸಬೇಕಾಗಿತ್ತು" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್.

ಆರ್‌ಸಿಬಿ ತಂಡದ 2ನೇ ಸೋಲು
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಅನುಭವಿಸಿದ ಸೋಲು ಟೂರ್ನಿಯಲ್ಲಿ ಕಂಡ 2ನೇ ಸೋಲಾಗಿದೆ. ಅದಕ್ಕೂ ಮುನ್ನ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಸೋಲು ಕಂಡಿತ್ತು. ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 16 ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದರೆ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮುಂದಿನ ಪಂದ್ಯವನ್ನು ಗುಜರಾತ್ ಟೈಟನ್ಸ್ ವಿರುದ್ಧ ಭಾನುವಾರ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications