ಮೇ 18 ಶನಿವಾರ, ಬೆಂಗಳೂರಿನಲ್ಲಿ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೆಗಾ ಫೈಟ್ ನಡೆಯಲಿದೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಅಲ್ಲದೆ ಸಿಎಸ್‌ಕೆ ಪರ ಉತ್ತಮ ರನ್ ಕಲೆಹಾಕಿರುವ ಧೋನಿ ಫಿನಿಶಿಂಗ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

2008ರ ಮೊದಲ ಆವೃತ್ತಿಯಿಂದ ಐಪಿಎಲ್ ಭಾಗವಾಗಿರುವ ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ ಐಪಿಎಲ್‌ನಲ್ಲಿ ಈವರೆಗೆ 259 ಪಂದ್ಯಗಳನ್ನು ಆಡಿದ್ದಾರೆ. ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ಅಗ್ರಜನಾಗಿದ್ದಾರೆ.
ಇನ್ನು 42 ವರ್ಷದ ಎಂಎಸ್ ಧೋನಿ ಐಪಿಎಲ್‌ನಲ್ಲಿ 5 ಪ್ರಶಸ್ತಿಗಳೊಂದಿಗೆ ಜಂಟಿ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಸದ್ಯ ನಡೆಯುತ್ತಿರುವ ಆವೃತ್ತಿಗೆ ಮುಂಚಿತವಾಗಿ ಎಂಎಸ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದರು.
17 ಆವೃತ್ತಿ ಐಪಿಎಲ್ ಇತಿಹಾಸದಲ್ಲಿ ಧೋನಿ ಅವರು ಆರ್‌ಸಿಬಿ ವಿರುದ್ಧ ಅತ್ಯುತ್ತಮ ಅಂಕಿ-ಅಂಶಗಳನ್ನು ಹೊಂದಿದ್ದಾರೆ. ಧೋನಿ ಐಪಿಎಲ್‌ನಲ್ಲಿ ಈವರೆಗೆ ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಪರವಾಗಿ 28 ಇನ್ನಿಂಗ್ಸ್‌ಗಳಲ್ಲಿ740 ರನ್ ಗಳಿಸಿದ್ದಾರೆ. ಅಜೇಯ 84 ರನ್‌ಗಳೊಂದಿಗೆ 4 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಸಿಎಸ್‌ಕೆ ಫಿಕ್ಸಿಂಗ್ ಆರೋಪದ ಮೇಲೆ 2 ವರ್ಷ ಬ್ಯಾನ್ ಆಗಿದ್ದ ವೇಳೆ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಧೋನಿ ಮುನ್ನೆಡೆಸಿದ್ದರು. ಈ ಸಮಯದಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 99 ರನ್ ಗಳಿಸಿದ್ದಾರೆ. ಒಟ್ಟು ಆರ್‌ಸಿಬಿ ವಿರುದ್ಧ 32 ಇನ್ನಿಂಗ್ಸ್‌ಗಳಲ್ಲಿ 4 ಅರ್ಧಶತಕಗಳು ಸೇರಿದಂತೆ 839 ರನ್ ಕಲೆಹಾಕಿದ್ದಾರೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ 11 ಇನ್ನಿಂಗ್ಸ್‌ಗಳಲ್ಲಿ 180 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 4 ಅರ್ಧಶತಕಗಳನ್ನು ಒಳಗೊಂಡಂತೆ 464 ರನ್ ಗಳಿಸಿದ್ದಾರೆ.
ಒಟ್ಟಾರೆ ಐಪಿಎಲ್‌ನಲ್ಲಿ ಧೋನಿ 228 ಇನ್ನಿಂಗ್ಸ್‌ಗಳಲ್ಲಿ 137.35 ಸ್ಟ್ರೈಕ್ ರೇಟ್‌ನಲ್ಲಿ 24 ಅರ್ಧಶತಕಗಳನ್ನು ಒಳಗೊಂಡಂತೆ 5218 ರನ್ ಹೊಡೆದಿದ್ದಾರೆ.