RCB vs DC: ಡೆಲ್ಲಿ ಕ್ಯಾಪಿಟಲ್ಸ್‌ಗೆ ತವರಿನ ಹುಡುಗನ ಸವಾಲು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದಿನಕಳೆದಂತೆ ರೋಚಕತೆ ಹೆಚ್ಚಿಸುತ್ತಿದೆ. ಎಲ್ಲ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನವನ್ನು ಪಡೆಯುವತ್ತ ಚಿತ್ತವನ್ನು ನೆಟ್ಟಿವೆ. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಲಿವೆ. 19ನೇ ಆವೃತ್ತಿ ಐಪಿಎಲ್‌ನ 39ನೇ ಪಂದ್ಯ ವಿರಾಟ್ ಕೊಹ್ಲಿ ಅವರ ತವರು ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ಎಲ್ಲರ ಕಣ್ಣುಗಳು ಚೇಸ್ ಮಾಸ್ಟರ್ ಮೇಲೆ ನೆಟ್ಟಿವೆ.
ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈಗಾಗಲೇ ಲೀಗ್ ಹಂತದಲ್ಲಿ ಒಂದು ಬಾರಿ ಮುಖುಮುಖಿಯಾಗಿವೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಹೀಗಾಗಿ ಸೋಮವಾರ ನಡೆಯಲಿರುವ ಪಂದ್ಯ ಕುತೂಹಲ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸೇಡು ತೀರಿಸಿಕೊಳ್ಳುವ ಕನಸು ಆರ್‌ಸಿಬಿ ತಂಡದ್ದಾಗಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಕದನ ರೋಚಕತೆ ಹೆಚ್ಚಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆ ಹಾಕಿದರೂ ಸಹ ಗೆಲುವು ದಾಖಲಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಹಲವು ಪ್ರಶ್ನೆಗಳು ಎದ್ದಿವೆ. ಇನ್ನು ಆರ್‌ಸಿಬಿ ತನ್ನ ಸ್ಥಿರ ಪ್ರದರ್ಶನ ಮುಂದುವರೆಸಿದ್ದು, ಗೆಲುವಿನ ಜೋಶ್‌ನೊಂದಿಗೆ ಕಣಕ್ಕೆ ಇಳಿಯಲಿದೆ. ಆರ್‌ಸಿಬಿ ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್‌ಗೆ ಒಂದು ಕಾಲು ಇಡಲು ಪ್ಲ್ಯಾನ್ ಮಾಡಿಕೊಂಡಿದೆ.
ಸಂಘಟಿತ ಆಟದ ಬಲ
ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಫಿಲ್ ಸಾಲ್ಟ್ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿದಿರಲಿಲ್ಲ. ಇವರು ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಎದ್ದಿದೆ. ಇನ್ನು ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಬ್ಬರದ ಪ್ರದರ್ಶನ ನೀಡುವ ಇರಾದೆಯನ್ನು ಹೊಂದಿದೆ. ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ದೇವದತ್ ಪಡಿಕ್ಕಲ್, ಹಿಂದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದು ಭರವಸೆ ಮೂಡಿಸಿದ್ದಾರೆ. ನಾಯಕ ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆ ಹೊಂದಿದ್ದಾರೆ.
ವೇಗದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ರಸಿಕ್ ಸಲಾಂ ದಾರ್ ತಮ್ಮ ಬಿಗುವಿನ ದಾಳಿಯಿಂದ ಎದುರಾಳಿಗಳಿಗೆ ಕಾಡಬಲ್ಲರು. ಇನ್ನು ಸ್ಪಿನ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ಸರಿಯಾದ ಸ್ಥಳದಲ್ಲಿ ಚೆಂಡನ್ನು ಎಸೆದು ವಿಕೆಟ್ ಬೇಟೆ ನಡೆಸಬೇಕಿದೆ. ಅಂದಾಗ 2 ಅಂಕದ ಕನಸು ನನಸಾಗುತ್ತದೆ.

ರಾಹುಲ್ ಆಕರ್ಷಣೆ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಭರ್ಜರಿ ಫಾರ್ಮ್‌ನಲ್ಲಿದ್ದು ಗಮನ ಸೆಳೆದಿದ್ದಾರೆ. ಇವರು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಹೀಗಾಗಿ ಇವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ ರನ್ ಕಲೆ ಹಾಕುತ್ತಿದ್ದು ತಂಡದ ಚಿಂತೆಯನ್ನು ದೂರ ಮಾಡಿದೆ. ಮಧ್ಯಮ ಕ್ರಮಾಂಕದಲ್ಲಿ ಸ್ಟಾರ್ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕಿದೆ.
ಕಳೆದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿರುವ ಲಂಗಿ ಎನ್‌ಗಿಡಿ ಅವರ ಅನುಪಸ್ಥಿತಿ ಡೆಲ್ಲಿ ತಂಡಕ್ಕೆ ಕಾಡಲಿದೆ. ವೇಗದ ಬೌಲಿಂಗ್ ನೊಗವನ್ನು ಅಕಿಬ್ ನಬಿ, ಮುಕೇಶ್ ಕುಮಾರ್, ಟಿ ನಟರಾಜನ್ ಹೊರಲಿದ್ದಾರೆ. ನಾಯಕ ಅಕ್ಷರ್ ಪಟೇಲ್ ಹಾಗೂ ಕುಲ್‌ದೀಪ್ ಯಾದವ್ ಸ್ಪಿನ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಬೇಕಿದೆ. ಅಂದಾಗ ಪೂರ್ಣ ಅಂಕದ ಕನಸು ನನಸಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications