ಮೇ 13 ಸೋಮವಾರ, ತವರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಾಡು ಇಲ್ಲವೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ, ಡೆಲ್ಲಿಯ ಪ್ಲೇಆಫ್ ದಾರಿಯನ್ನು ಬಹುತೇಕ ಮುಚ್ಚಿ ಹಾಕಿದೆ.
ಪಂದ್ಯದ ಬಳಿಕ ಆರ್‌ಸಿಬಿ ಅದ್ಧೂರಿಯಾಗಿ ವಿಜಯೋತ್ಸವ ಆಚರಿಸಿತು. ಇದಕ್ಕೂ ಮುನ್ನ ಪಂದ್ಯ ನಡೆಯುವ ವೇಳೆ ಕೆಲವೊಂದು ಸನ್ನಿವೇಶಗಳು ನಿಜಕ್ಕೂ ಅಭಿಮಾನಿಗಳಿಗೆ ರಸದೌತವನ್ನು ನೀಡಿತು. ಆರ್‌ಸಿಬಿ ಗೆಲುವಿನಲ್ಲಿ ಮಿಂದೆದ್ದ ಆಭಿಮಾನಿಗಳು ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡು ನೋಡ ನೋಡ ಎಷ್ಟು ಚೆಂದ ಅಲ್ಲ ಎಂದು ಕನ್ನಡ ಸಿನಿಮಾದ ಡೈಲಾಗ್ ಹೊಡೆದಿದ್ದಾರೆ.

ಡೆಲ್ಲಿ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ರಜತ್ ಪಾಟಿದಾರ್ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿ ಅರ್ಧಶತಕ ಗಳಿಸಿದರು. ರಜತ್ ಅವರು 32 ಎಸೆತಗಳಲ್ಲಿ 52 ರನ್ ಗಳಿಸಿದರು. ಇದಲ್ಲದೇ ವಿಲ್ ಜಾಕ್ 41 ರನ್ ಹಾಗೂ ಕ್ಯಾಮರೂನ್ ಗ್ರೀನ್ 32 ರನ್ ಗಳಿಸಿ ಆರ್‌ಸಿಬಿ ಉತ್ತಮ ರನ್ ಗಳಿಸಲು ನೆರವಾದರು.
ಇಲ್ಲಿ ನೆನಪಿಡ ಬೇಕಾದ ವಿಷಯವೆಂದರೆ ಕಳೆದ ಐದು ಪಂದ್ಯಗಳಿಂದ ಸತತವಾಗಿ ರಜತ್ ಪಾಟಿದಾರ್ ಅರ್ಧಶತಕ ಹೊಡೆಯುತ್ತ ಬಂದಿದ್ದಾರೆ. ಭಾನುವಾರ ಕೂಡ ಡೆಲ್ಲಿ ವಿರುದ್ಧ ರಜತ್ ಪಾಟಿದಾರ್ ಅರ್ಧಶತಕ ಬಾರಿಸಿದರು. ಹೀಗಾಗಿ ಈ ಕ್ಷಣ ಪಂದ್ಯದ ಪ್ರಮುಖ ಆರ್ಕಷಣೆ ಆಗಿತ್ತು.

ಡೆಲ್ಲಿ ತಂಡವು ಆರ್‌ಸಿಬಿ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗದೆ ಪಂದ್ಯವನ್ನು 47 ರನ್‌ಗಳಿಂದ ಕಳೆದುಕೊಂಡಿತು. ಆದರೆ ರಿಷಬ್ ಪಂತ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಮುನ್ನೆಡೆಸಿದ ನಾಯಕ ಅಕ್ಸರ್ ಪಟೇಲ್ ಅರ್ಧಶತಕದ ಇನಿಂಗ್ಸ್ ಆಡಿದರು. ತಮ್ಮ ನಾಯಕತ್ವದ ಜವಾಬ್ದಾರಿಯನ್ನು ಅಕ್ಸರ್ ಉತ್ತಮವಾಗಿ ನಿರ್ವಹಿಸಿದ್ದರು. ಅಕ್ಸರ್ ಎದುರಿಸಿದ 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 57 ರನ್ ಗಳಿಸಿದರು.

ಈ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಡೆಲ್ಲಿ ಬೌಲರ್ ಇಶಾಂತ್ ಶರ್ಮಾ ನಡುವಿನ ಪೈಪೋಟಿ ಅತ್ಯಂತ ಆರ್ಕಷಣೆ ಆಗಿತ್ತು. ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕೀಳಿದಿದ್ದ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ಒಂದು ಬೌಂಡರಿ ಹಾಗು ಒಂದು ಸಿಕ್ಸರ್ ಬಾರಿಸಿದರು. ಬಳಿಕ ಇಶಾಂತ್ ಬಳಿ ಹೋಗಿ ಏನೋ ಹೇಳಿದರು. ಆದರೆ ಅಂತಿಮವಾಗಿ ಇಶಾಂತ್ ಶರ್ಮಾ ಅವರು ಕೊಹ್ಲಿಯನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು.
ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಅವರನ್ನು ಇಶಾಂತ್ ಔಟ್ ಮಾಡಿದರು. ಹೀಗಾಗಿ ಇಶಾಂತ್ ಸಂಭ್ರಮಾಚರಣೆಗೆ ಮಿತಿ ಇರಲಿಲ್ಲ. ಔಟ್ ಆಗಿ ಪೆವಿಲಿಯನ್ ಕಡೆ ಹೋಗುತ್ತಿದ್ದ ಕೊಹ್ಲಿ ಬಳಿ ಬಂದ ಇಶಾಂತ್ ಅವರನ್ನು ತಳ್ಳಿ ಚುಡಾಯಿಸಿದರು. ಆದರೆ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡದೆ ಕೆಳಗೆ ಮುಖಮಾಡಿ ನಗುತ್ತಾ ಹೋದರು.

ಅದಾದ ಬಳಿಕ ಡೆಲ್ಲಿ ಗುರಿ ಬೆನ್ನತ್ತಿದಾಗ ಕೊಹ್ಲಿ ಕೂಡ ಇಶಾಂತ್ ಶರ್ಮಾ ಬಳಿ ಬಂದು ಏನೋ ಹೇಳಿದರು. ಇಬ್ಬರು ಆಟಗಾರರ ನಡುವಿನ ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ದೆಹಲಿ ಪರ ಬಾಲ್ಯದಿಂದಲೂ ಒಟ್ಟಿಗೆ ದೇಶೀಯ ಕ್ರಿಕೆಟ್ ಆಡುತ್ತಾ ಬೆಳೆದಿರುವ ಕೊಹ್ಲಿ ಮತ್ತು ಇಶಾಂತ್ ಅತ್ಯುತ್ತಮ ಸ್ನೇಹಿತರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಇಶಾಂತ್ ಶರ್ಮಾ ಅವರೇ ತಮ್ಮ ಹಾಗು ಕೊಹ್ಲಿ ನಡುವಿನ ಗೆಳತನದ ಬಗ್ಗೆ ಹೇಳಿದ್ದರು. ಈಗಲೂ ವಿರಾಟ್ ಹಾಗೂ ಇಶಾಂತ್ ಉತ್ತಮ ಸ್ನೇಹಿತರು ಎಂಬುದಕ್ಕೆ ಈ ಪಂದ್ಯ ನಡೆದ ವಿಶೇಷ ಘಟನೆಯೇ ಸಾಕ್ಷಿಯಾಗಿದೆ.
ಡೆಲ್ಲಿ ತಂಡವನ್ನು ಆಲೌಟ್ ಮಾಡುವ ಮೂಲಕ ಆರ್‌ಸಿಬಿ ಗೆಲ್ಲುತ್ತಿದ್ದಂತೆ ಸಂಭ್ರಮಾಚರಣೆಗೆ ಮಿತಿಯೇ ಇರಲಿಲ್ಲ. ಅದರಂತೆ ಅರ್‌ಸಿಬಿ ಗೆಲುವನ್ನು ವಿರಾಟ್ ಕೊಹ್ಲಿ ಪತ್ನಿ ಹಾಗು ನಟಿ ಅನುಷ್ಕಾ ವಿಶಿಷ್ಟ ಶೈಲಿಯಲ್ಲಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ. ಕೊನೆಯ ವಿಕೆಟ್ ಅನ್ನುಆರ್‌ಸಿಬಿ ಬೌಲರ್ ಯಶ್ ದಯಾಳ್ ಪಡೆಯುವತ್ತಿದ್ದಂತೆ ಎದ್ದು ನಿಂತ ಅನುಷ್ಕಾ ತಮ್ಮ ಎರಡು ಕೈಗಳು ಜೋಡಿಸಿ ನಮಸ್ಕಾರಿಸುವ ಮೂಲಕ ಆರ್‌ಸಿಬಿ ಗೆಲುವಿನ ಸಂತಸವನ್ನು ಹೊರಹಾಕಿದರು. ಏಕೆಂದರೆ ಅನುಷ್ಕಾ ಶರ್ಮಾ ಅವರಿಗೆ ಈ ಗೆಲುವಿನ ಮಹತ್ವ ತಿಳಿದಿತ್ತು.
ಡೆಲ್ಲಿ ಎದುರಿನ ಗೆಲುವಿನ ನಂತರ ಆರ್‌ಸಿಬಿ ಆಟಗಾರರಲ್ಲಿ ಸಂತಸ ಮನೆ ಮಾಡಿದೆ. ಅಂದುಕೊಂಡಂತೆ ಆದರೆ ಪ್ಲೇ ಆಫ್‌ಗೆ ಆರ್‌ಸಿಬಿ ಎಂಟ್ರಿ ಕೊಡುವ ಲೆಕ್ಕಚಾರದಲ್ಲಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಆರ್‌ಸಿಬಿ ವಿಜಯೋತ್ಸವ ವೈರಲ್ ಆಗಿದ್ದು, ಕಣ್ಮನ ಸೆಳೆಯುವಂತಿದೆ. ಎಲ್ಲಾ ಆಟಗಾರರು ಒಟ್ಟಿಗೆ ಹಾಡನ್ನು ಹಾಡಿ ಕುಣಿದು ಕುಪ್ಪಳಿಸಿದ್ದಾರೆ. ಎಲ್ಲಾ ಆಟಗಾರರು ಆರ್‌ಸಿಬಿ, ಆರ್‌ಸಿಬಿ ಎಂದು ಜೋರಾಗಿ ಕೂಗಿ ತಮ್ಮ ಉತ್ಸಾಹವನ್ನು ಹೊರಹಾಕಿದ್ದಾರೆ. ಇದೇ ಆತ್ಮ ವಿಶ್ವಾಸ ಇಟ್ಟುಕೊಂಡು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿದರೆ ಈ ಸಲ ಕಪ್ ನಮ್ದು ಅಂತಾರೆ ಫ್ಯಾನ್ಸ್.